Advertisement

ಕಾರ್ಪೊರೇಟ್‌ ಸಂಸ್ಥೆಗಳಿಂದ ಹಣದ ಹೊಳೆ

11:29 AM Aug 30, 2017 | |

ಬೆಂಗಳೂರು: ಕೇಂದ್ರ ಸರ್ಕಾರ ಚುನಾವಣಾ ಸುಧಾರಣೆ ಹೆಸರಿನಲ್ಲಿ ಚುನಾವಣಾ ಬಾಂಡ್‌ ವ್ಯವಸ್ಥೆ ಜಾರಿಗೆ ತರುವುದರಿಂದ ದೇಶಕ್ಕೆ ಮಾರಕವಿದೆ ಹಾಗೂ ಕಾರ್ಪೋರೇಟ್‌ ಸಂಸ್ಥೆಯಿಂದ ರಾಜಕೀಯ ಪಕ್ಷಕ್ಕೆ ಹಣದ ಹೊಳೆಯೇ ಹರಿದು ಬರಲಿದೆ ಎಂದು ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್‌ ಕಳವಳ ವ್ಯಕ್ತಪಡಿಸಿದರು.

Advertisement

ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ 91ನೇ ಜನ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಭಾರತೀಯ ವಿದ್ಯಾಭವನದಲ್ಲಿ  ಹಮ್ಮಿಕೊಂಡಿದ್ದ ಚುನಾವಣೆ ಸುಧಾರಣೆಗಳು : ಇಂದಿನ ಅವಶ್ಯಕತೆ? ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು.

ರಾಜಕೀಯ ಪಕ್ಷದ ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ ವ್ಯವಸ್ಥೆ ಜಾರಿಗೆ ತರುತ್ತಿದೆ. ಇದರಿಂದ ಖಾಸಗಿ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ಅಗತ್ಯಕ್ಕೆ ತಕ್ಕಷ್ಟು ಹಣ ನೀಡಬಹುದಾಗಿದೆ. ಹಣದ ಮೂಲ ಹಾಗೂ ರಾಜಕೀಯ ಪಕ್ಷದ ಹೆಸರನ್ನು ಗೌಪ್ಯವಾಗಿಡುವ ಸಾಧ್ಯತೆಯೂ ಇದೆ ಎಂದು ಹೇಳಿದರು.

ಈ ವ್ಯವಸ್ಥೆಯು ಉದ್ಯಮೀಗಳಿಗೆ ರಾಜಕೀಯ ಪಕ್ಷ ಖರೀದಿಸಲು ವೇದಿಕೆ ಸೃಷ್ಟಿಸಿದಂತಾಗುತ್ತದೆ. ದೇಶದ ವ್ಯವಸ್ಥೆಗೆ ವಿರುದ್ಧವಾಗಿರುವ ಕೇಂದ್ರ ಸರ್ಕಾರದ ಈ ಕ್ರಮವನ್ನು ಭಾರತೀಯರೆಲ್ಲ ಒಟ್ಟಾಗಿ ತಡೆಯಬೇಕು ಮತ್ತು ಇದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ದೊಡ್ಡ ಅಭಿಯಾನ ಹಮ್ಮಿಕೊಳ್ಳುವ ಅಗತ್ಯವಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ರಾಜಕೀಯ ಪಕ್ಷದಲ್ಲಿರುವ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲೂ ತಪ್ಪುಗಳ ಮೇಲೆ ತಪ್ಪು ಮಾಡುತ್ತಿದ್ದಾರೆ. ಕೆಲವೊಮ್ಮೆ ಮಹಾಪರಾಧವನ್ನೇ ಎಸಗಿ ಬಿಡುತ್ತಿದ್ದಾರೆ. ಹೀಗಾಗಿ ಚುನಾವಣಾ ವ್ಯವಸ್ಥೆಗೆ ಸೂಕ್ತ ಸುಧಾರಣೆ ತರುವ ಅಗತ್ಯವಿದೆ.

Advertisement

ಆದರೆ, ಕೇಂದ್ರ ಸರ್ಕಾರ ರೂಪಿಸುವ ಕಾರ್ಯತಂತ್ರ ಎಷ್ಟು ಪರಿಪಕ್ವವಾಗಿದೆ ಎಂಬುದನ್ನು ಆಲೋಚಿಸಬೇಕಿದೆ. ಚುನಾವಣೆ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಮಾರ್ಗದರ್ಶನ ಅಗತ್ಯವಿದೆ ಎಂದು ಹೇಳಿದರು. ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ.ಖುರೇಶಿ ಮಾತನಾಡಿ, ಗರಿಷ್ಠ ಮೌಲ್ಯದ ನೋಟು ರದ್ಧತಿ ಮೂಲಕ ದೇಶದಲ್ಲಿ ಸಂಚಲನ ಮೂಡಿಸಲಾಗಿದೆ. ಹಾಗಾದರೇ, ಚುನಾವಣೆ ಅಕ್ರಮ ತಡೆಯಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಸರ್ಕಾರಕ್ಕೆ ಇಚ್ಛಾಶಕ್ತಿಯಿದ್ದರೆ ಎಲ್ಲವನ್ನು ಮಾಡಬಹುದು. ಚುನಾವಣೆಯಲ್ಲಿ ಪರಾಜಿತರಾಗಿವ ಅಭ್ಯರ್ಥಿಗಳು ಮತಯಂತ್ರದ ಕುರಿತು ಆರೋಪ ಮಾಡುವುದು ಸಹಜ. ಆದರೆ, ನಮ್ಮಲ್ಲಿರುವ ಮತ ಯಂತ್ರಗಳು ಅತ್ಯಂತ ಪಾರದರ್ಶಕವಾಗಿದ್ದು, ಯಾವುದೇ ಅವ್ಯವಹಾರಕ್ಕೆ ಅವಕಾಶವಿಲ್ಲ. ಚುನಾವಣೆಯಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದರು.

ಹಿರಿಯ ರಾಜಕಾರಣಿಗಳಾದ ಕೆ.ಆರ್‌.ಪೇಟೆ ಕೃಷ್ಣಾ, ಮೊಯುದ್ದಿನ್‌, ಬಿ.ಟಿ.ಲಲಿತಾ ನಾಯಕ್‌, ಸಾಮಾಜಿಕ ಕಾರ್ಯಕರ್ತ ಹುಂಡೇಕರ್‌, ಗಾಂಧೀವಾದಿ ಸಂಗಪ್ಪ ಗೋಲಪ್ಪನವರ್‌ ಅವರನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಅಧ್ಯಕ್ಷೆ ಮಮತ ನಿಚಾನಿ, ಜೆಡಿಯು ರಾಜ್ಯಾಧ್ಯಕ್ಷ ಡಾ.ಎಂ.ಪಿ.ನಾಡಗೌಡ, ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ ಮತ್ತಿತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next