ಹುಬ್ಬಳ್ಳಿ: ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಕಲಘಟಗಿಯ ಸುರಭಿ ಟ್ರೇಡರ್ಸ್ ಮಾಲೀಕರು ಸುಮಾರು 80 ಲಕ್ಷ ರೂ. ವಂಚಿಸಿದ್ದಾರೆ. ಇದರಿಂದ ಮನನೊಂದು ನನ್ನ ಪತಿ ಡೆತ್‌ನೋಟ್ ಬರೆದಿಟ್ಟು ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದು, ವಂಚಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಂಚನೆಗೊಳಗಾದ ಲಕ್ಷ್ಮೀ ಮೇಟಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಂಚನೆ ಮಾಡಿರುವ ಕುರಿತು 2017 ಆಗಸ್ಟ್‌ನಲ್ಲಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ನಂತರ ಈ ದೂರನ್ನು ಧಾರವಾಡ ಆರ್ಥಿಕ ವಿಭಾಗಕ್ಕೆ ವರ್ಗಾಯಿಸಲಾಯಿತು. ಈ ಕುರಿತು ಸಾಕಷ್ಟು ಬಾರಿ ಎಸ್ಪಿ ಕಚೇರಿ ಅಲೆದರೂ ನಮಗೆ ನ್ಯಾಯ ದೊರೆಯಲಿಲ್ಲ. ವಂಚನೆ ಮಾಡಿದ ಆರೋಪಿಗಳನ್ನು ಬಂಧಿಸಿ ನಮ್ಮ ಹಣ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ನನ್ನ ಪತಿ ದ್ಯಾಮಣ್ಣ ಮೇಟಿ ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಕರಾಗಿದ್ದು, ಸುರಭಿ ಟ್ರೇಡರ್ಸ್ ಮಾಲೀಕರಾದ ಫಹೀದ್ ನುಚ್ಚಿಕದನ ಮತ್ತು ಇಲಿಯಾಸ್ ನುಚ್ಚಿಕದನ ಅವರು ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿದ್ದರು. ಅವರನ್ನು ನಂಬಿ ನನ್ನ ಪತಿ ತಾವು ಹಾಗೂ ತಮ್ಮ ಸ್ನೇಹಿತರಿಂದ ಸುಮಾರು 80.78 ಲಕ್ಷ ರೂ. ತೊಡಗಿಸಿದ್ದರು. ಸ್ನೇಹಿತರಾದ ಶರಣಪ್ಪ ಹಾಗೂ ಲಿಂಗಯ್ಯ ಎನ್ನುವ ಶಿಕ್ಷಕರು ನೇರವಾಗಿ ಹಣದ ವ್ಯವಹಾರ ಮಾಡಿದ್ದಾರೆ. ಇದಕ್ಕೆ ನನ್ನ ಪತಿ ಯಾವುದೇ ಜವಾಬ್ದಾರಿಯಿಲ್ಲ. ಆದರೆ ಇವರಿಬ್ಬರು ನನ್ನ ಪತಿಗೆ ಕಿರುಕುಳ ನೀಡಿ ನಿಮ್ಮ ಭರವಸೆ ಮೇಲೆ ಹಣ ತೊಡಗಿಸಿದ್ದೇವೆ ಎಂದು ಚೆಕ್ ಪಡೆದು ಚೆಕ್‌ಬೌನ್ಸ್ ಕೇಸ್ ದಾಖಲು ಮಾಡಿ ಹಿಂಸೆ ನೀಡಿದ್ದಾರೆ ಎಂದು ಹೇಳಿದರು.
ಹಣ ಕಳೆದುಕೊಂಡ ನಮಗೆ ಪೊಲೀಸರಿಂದಲೂ ನ್ಯಾಯ ಸಿಗಲಿಲ್ಲ. ಅಲ್ಲದೇ ಸ್ನೇಹಿತರಿಂದ ಮಾನಸಿಕ ಕಿರುಕುಳ ಹಾಗೂ ಚೆಕ್‌ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯ ತಿರುಗಾಟದಿಂದ ನನ್ನ ಪತಿ ಮನನೊಂದು 2019 ಮಾ. 30ರಂದು ಡೆತ್‌ನೋಟ್ ಬರೆದಿಟ್ಟು ಯಾದಗಿರಿ ಮನೆಯಿಂದ ನಾಪತ್ತೆಯಾಗಿದ್ದಾರೆ. ನನ್ನ ಪತಿಯನ್ನು ಹುಡುಕಿಕೊಡುವಂತೆ ಯಾದಗಿರಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದರೂ ಇದುವರೆಗೆ ಯಾವುದೇ ಪ್ರಯೋಜನವಿಲ್ಲ ಎಂದು ಲಕ್ಷ್ಮೀ ಕಣ್ಣೀರಿಟ್ಟರು.
ಈ ಹಿಂದೆ ರಾಯಚೂರು ಜಿಲ್ಲೆ ಮಸ್ಕಿ ಠಾಣೆಯಲ್ಲಿ ನನ್ನ ಪತಿಯನ್ನು ಬಂಧಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರು. ಒಂದು ದಿನದ ನಂತರ ನಮ್ಮೊಂದಿಗೆ ಫೋನ್ ಮೂಲಕ ಮಾತನಾಡಲು ಅವಕಾಶ ನೀಡಿದ್ದರು. ಈ ಎಲ್ಲ ಘಟನೆಗಳಿಗೆ ಕಾರಣವಾಗಿರುವ ಸುರಭಿ ಟ್ರೇಡರ್ನ ಮಾಲೀಕರನ್ನು ಬಂಧಿಸಿ ಹಣ ಕೊಡಿಸುವ ಕೆಲಸ ಪೊಲೀಸರು ಮಾಡಬೇಕು. ಪ್ರಮುಖವಾಗಿ ನಮ್ಮ ಮನೆಯವರು ಸುರಕ್ಷಿತವಾಗಿ ವಾಪಸ್ ಬರಬೇಕು. ನಿತ್ಯವೂ ಎರಡು ಮಕ್ಕಳು ಅಪ್ಪ ಯಾವಾಗ ಬರುತ್ತಾರೆ ಎಂದು ಅಳುತ್ತಿದ್ದಾರೆ. ದಯವಿಟ್ಟು ಪೊಲೀಸರು ನಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.