ಮೈಸೂರು: ನಗರದ ಆಯಕಟ್ಟಿನ ಸ್ಥಳದಲ್ಲಿರುವ ದೇವರಾಜ ಮಾರುಕಟ್ಟೆ ವಾಣಿಜ್ಯ ಚಟುವಟಿಕೆಗಳ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದು, ಸಹಜ ವಾಗಿ ಅಲ್ಲಿನ ಮಳಿಗೆಗಳ ಬಾಡಿಗೆ ದರ ದುಬಾರಿ ಎಂಬುದು ಜನಸಾಮಾನ್ಯರ ಊಹೆ. ಆದರೆ ಈ ಊಹೆ ಖಂಡಿತವಾಗಿಯೂ ಸುಳ್ಳು.
ಕೋಟ್ಯಂತರ ರೂ.ಖರ್ಚು: ಮಾರುಕಟ್ಟೆ ಅಕ್ಕಪಕ್ಕದ ಸಯ್ನಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆ, ಶಿವರಾಮಪೇಟೆ ಮುಖ್ಯ ರಸ್ತೆ, ಧನ್ವಂತರಿ ರಸ್ತೆ ಬದಿ ಯಲ್ಲಿರುವ ಮಳಿಗೆಗಳ ಬಾಡಿಗೆ ಹುಬ್ಬೇರಿಸುವಷ್ಟರ ಮಟ್ಟಿಗೆ ದುಬಾರಿಯಾಗಿದೆ. ಇಲ್ಲಿ ಚದರ ಅಡಿ ಅಳತೆ ಲೆಕ್ಕದಲ್ಲಿ ಮಳಿಗೆಗಳ ಬಾಡಿಗೆ ನಿಗದಿ ಮಾಡಲಾಗಿದೆ. ಕಡಿಮೆ ಎಂದರೂ 10 ಸಾವಿರ ರೂ. ಮೇಲೆ ಮಳಿಗೆಗಳು ಬಾಡಿಗೆಗೆ ದೊರೆಯುತ್ತವೆ. ಮುಖ್ಯ ರಸ್ತೆ ಬದಿಯಲ್ಲಿರುವ ಖಾಸಗಿ ಮಳಿಗೆಗಳ ಬಾಡಿಗೆ 20 ಸಾವಿರದಿಂದ 1 ಲಕ್ಷದ ವರೆಗೂ ಇದೆ. ಆದರೆ, ದೇವರಾಜ ಮಾರುಕಟ್ಟೆಯಲ್ಲಿರುವ ಮಳಿಗೆಗಳ ಬಾಡಿಗೆ ಇದಕ್ಕೆ ತದ್ವಿರುದ್ಧ. ಈ ಕಡಿಮೆ ಬಾಡಿಗೆಯಿಂದ ಪಾಲಿಕೆಗೆ ಕೋಟ್ಯಂತರ ರೂ. ಹಣ ನಷ್ಟವಾಗುತ್ತಿರು ವುದು ಎಷ್ಟು ಸತ್ಯವೋ, ಮಾರುಕಟ್ಟೆ ನಿರ್ವಹಣೆಗೂ ಕೋಟ್ಯಂತರ ಹಣ ಖರ್ಚಾಗುತ್ತಿರುವುದು ಅಷ್ಟೇ ಅಚ್ಚರಿ ವಿಷಯ.
ಮಾರುಕಟ್ಟೆಯಲ್ಲಿ ಒಟ್ಟು 728 ಮಳಿಗೆಗಳಿದ್ದು, 8×8, 6×4, 10×4, 8×14, 12×18, 20×30 ಸೇರಿ ವಿವಿಧ ಅಳತೆಯ ಮಳಿಗೆಗಳ ಗುಚ್ಛವಿದೆ. ಇಲ್ಲಿಯ ಪ್ರತಿ ಮಳಿಗೆಗಳಿಗೂ ಪ್ರತ್ಯೇಕ ದರ ನಿಗದಿ ಮಾಡ ಲಾಗಿದೆ. ಸಯ್ನಾಜಿರಾವ್ ರಸ್ತೆಗೆ ಹೊಂದಿಕೊಂಡಂತಿ ರುವ ಮಳಿಗೆಗಳಿಗೂ ಕಡಿಮೆ ದರವಿದೆ. ಈ ರಸ್ತೆಯ ಮತ್ತೂಂದು ಬದಿಯ (ಮಾರುಕಟ್ಟೆ ಎದುರು) ಖಾಸಗಿ ಕಾಂಪ್ಲೆಕ್ಸ್‌ನಲ್ಲಿರುವ ಮಳಿಗೆಗಳಿಗೆ ಅದಕ್ಕಿಂತ ಹತ್ತು ಪಟ್ಟು ಹೆಚ್ಚಿದೆ.
14 ಸಾವಿರವೇ ಹೆಚ್ಚು: ಮಾರುಕಟ್ಟೆ ಮಳಿಗೆಗಳ ಪೈಕಿ ಅತಿ ಹೆಚ್ಚು ಬಾಡಿಗೆ ದರವನ್ನು ಸಯ್ನಾಜಿರಾವ್ ರಸ್ತೆ ಬದಿಯ ಗುರುಸ್ವೀಟ್ಸ್ ಮಳಿಗೆ 8 ಸಾವಿರ ಬಾಡಿಗೆ ಪಾವತಿಸಿದರೆ, ಅದೇ ಸಾಲಿನ ಮತ್ತೂಂದು ಮೂಲೆ ಯಲ್ಲಿರುವ ಬಾಟಾ ಶೋರೂಂ ಮಳಿಗೆ 14 ಸಾವಿರ ಬಾಡಿಗೆ ಪಾವತಿಸುತ್ತಿದೆ. ಮಿಕ್ಕೆಲ್ಲಾ ಮಳಿಗೆಗಳ ಬಾಡಿಗೆ 8 ಸಾವಿರಕ್ಕಿಂತ ಕಡಿಮೆ ಇದೆ. ಈ ಕಾರಣಕ್ಕಾಗಿ ಇಲ್ಲಿ ಮಳಿಗೆಗಳನ್ನು ಬಾಡಿಗೆಗೆ ಪಡೆಯಲು ಸಾಕಷ್ಟು ಪೈಪೋಟಿಯೂ ಇದೆ. ಆದರೆ ಇದಕ್ಕೆ ಅವಕಾಶ ಸಿಗುತ್ತಿಲ್ಲ.
Advertisement
ಕಳೆದ 70-80 ವರ್ಷಗಳಿಂದ ದೇವರಾಜ ಮಾರು ಕಟ್ಟೆಯಲ್ಲಿ ಮಳಿಗೆ ಬಾಡಿಗೆ ಪಡೆದು ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು, ಮೈಸೂರು ನಗರ ಪಾಲಿಕೆಗೆ ಕಟ್ಟುತ್ತಿರುವ ಬಾಡಿಗೆಯನ್ನೊಮ್ಮೆ ತಿಳಿದರೆ ಮೂರ್ಛೆ ಹೋಗುವುದು ಖಂಡಿತ. ಹೌದು, 40, 75, 180, 240, 350 ಹೀಗೆ ಒಂದೊಂದು ಮಳಿಗೆಗಳು ಪಾಲಿಕೆಗೆ ಕೊಡುತ್ತಿರುವ ಬಾಡಿಗೆ. ತರಕಾರಿ, ದಿನಸಿ ಪದಾರ್ಥಗಳ ಬೆಲೆಯಂತಿರುವ ಈ ಬಾಡಿಗೆ, ಕಳೆದ 16 ವರ್ಷಗಳಿಂದ ನಗರಪಾಲಿಕೆಗೆ ಸಂದಾಯವಾಗು ತ್ತಿದೆ ಎಂಬುದು ಅಚ್ಚರಿ ಎನಿಸಿದರೂ ಸತ್ಯ.
Related Articles
Advertisement
ಕಳೆದ 16 ವರ್ಷಗಳಿಂದ ಮಳಿಗೆಗಳ ಬಾಡಿಗೆ ಪರಿಷ್ಕರಣೆಯೇ ಆಗಿಲ್ಲ. ಈ ಕುರಿತು ಹರಾಜು ಪ್ರಕ್ರಿಯೆ ತಡೆ ಹಿಡಿಯಲಾಗಿದೆ. ಕಾಲ ಕಾಲಕ್ಕೆ ಬಾಡಿಗೆ ಪರಿಷ್ಕರಣೆ ಯಾಗದ ಹಿನ್ನೆಲೆ ಪಾಲಿಕೆಗೆ ಕೋಟ್ಯಂ ತರ ಹಣ ನಷ್ಟವಾಗುತ್ತಿದೆ. ಸರ್ಕಾರಿ ಸಂಸ್ಥೆಗಳಿಗೆ ಸೇರಿದ ಮಳಿಗೆಗಳ ಬಾಡಿಗೆ ದರವನ್ನು ಪ್ರತಿವರ್ಷ ಪರಿಷ್ಕರಣೆ ಮಾಡಬೇಕು ಎಂಬುದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಯಲ್ಲಿನ ಪಾರದರ್ಶಕ ಕಾಯಿದೆ ಸ್ಪಷ್ಟವಾಗಿ ಹೇಳಿದೆ. ಆದರೆ, 2003ರಲ್ಲಿ ಬಾಡಿಗೆ ಪರಿಷ್ಕರಣೆ ಆಗಿರುವುದು ಬಿಟ್ಟರೆ, ಇಲ್ಲಿಯ ಮಳಿಗೆಗಳ ಬಾಡಿಗೆ ದರ ಒಂದೂವರೆ ದಶಕದಿಂದ ಪರಿಷ್ಕರಣೆಯೇ ಆಗಿಲ್ಲ.
ಉಪಗುತ್ತಿಗೆಯಲ್ಲಿ ಹಣ ವಸೂಲಿ: ಮೂಲ ಬಾಡಿಗೆದಾರರೇ ಇಲ್ಲದ ಮಳಿಗೆಗಳು 4-5 ಜನರಿಂದ ಕೈ ಬದಲಾಗಿ, ಉಪಗುತ್ತಿಗೆಗೆ ಮಳಿಗೆ ನೀಡುವ ಮೂಲಕ ಪಾಲಿಕೆ ನಿಗದಿ ಪಡಿಸಿರುವ ಬಾಡಿಗೆ ದರಕ್ಕಿಂತ ಐದಾರು ಪಟ್ಟು ಹೆಚ್ಚು ಬಾಡಿಗೆ ವಸೂಲಿ ಮಾಡುವ ದಂಧೆ ನಡೆಯುತ್ತಿದೆ. ಇದರಲ್ಲಿ ಮಾಜಿ ಮೇಯರ್, ಮಾಜಿ ಕಾರ್ಪೋರೇಟರ್ ಹಾಗೂ ರಾಜಕಾರಣಿಗಳಿಗೆ ಸೇರಿದ ಮಳಿಗೆಗಳೂ ಇವೆ. ಇವರೆಲ್ಲಾ ಉಪಗುತ್ತಿಗೆಗೆ ನೀಡಿ ಪ್ರತಿ ತಿಂಗಳು ಆರಾಮವಾಗಿ ಕುಂತಲ್ಲಿ ಹಣ ಎಣಿಸುತ್ತಿದ್ದಾರೆ. ಈ ಸಂಗತಿ ಪಾಲಿಕೆ ಅಧಿಕಾರಿಗಳಿಗೆ ತಿಳಿದಿರುವ ವಿಷಯ ವಾದರೂ, ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಪಾಲಿಕೆ ಇಂದಿಗೂ ಅದು ಮೂಲ ಬಾಡಿಗೆದಾರರ ಹೆಸರಿನಲ್ಲಿ ರಶೀದಿ ನೀಡುತ್ತಿದ್ದು, ಅವರ ಹೆಸರಿ ನಲ್ಲಿಯೇ ಬಾಡಿಗೆ ಸಂಗ್ರಹಿಸಲಾಗುತ್ತಿರುವುದು ವಿಶೇಷ.
ಮಾರುಕಟ್ಟೆಯಲ್ಲಿ ಈಗಿರುವ ಮಳಿಗೆದಾರರಿಂದ ಪಾಲಿಕೆಗೆ ಲಾಭವಿಲ್ಲದೇ ಇದ್ದರೂ, ಮಾರುಕಟ್ಟೆ ನಿರ್ವಹಣೆಗೆ ಮಾತ್ರ ಹಣ ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮಗೊಳಿಸಿ, ನೂತನ ಕಟ್ಟಡ ನಿರ್ಮಾಣ ಮಾಡಿ ಹೊಸದಾಗಿ ಮಳಿಗೆಗಳನ್ನು ಹಂಚುವ ಚಿಂತನೆಯಲ್ಲಿದೆ ಎಂಬುದು ಪಾಲಿಕೆ ಸದಸ್ಯರೊಬ್ಬರ ಅಭಿಪ್ರಾಯವಾಗಿದೆ.
ಪಾಲಿಕೆ ಆಯುಕ್ತರ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ
ದೇವರಾಜ ಮಾರುಕಟ್ಟೆಯಲ್ಲಿ 728 ಮಳಿಗೆಗಳಿದ್ದು, ಕೇವಲ 89 ಲಕ್ಷ ರೂ. ಮಾತ್ರ ಬಾಡಿಗೆ ಬರುತ್ತಿದೆ. ಈ ನಿಟ್ಟಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿಗದಿ ಪಡಿಸಿರುವ ರಸ್ತೆಯ ಮಾರುಕಟ್ಟೆ ಮೌಲ್ಯ ಆಧಾರದ ಮೇಲೆ ಪಾಲಿಕೆ ಮಳಿಗೆಗಳ ಬಾಡಿಗೆ ದರ ಪರಿಷ್ಕರಣೆಗೆ ಬಹಳ ವರ್ಷದಿಂದ ಪ್ರಯತ್ನಿಸುತ್ತಿದೆ. ಆದರೆ ಒಂದಲ್ಲ ಒಂದು ತೊಡಕಾಗುತ್ತಿದೆ. ಮಳಿಗೆಗಳಿಂದ ಹಾಲಿ ವ್ಯಾಪಾರಿಗಳನ್ನು ತೆರವುಗೊಳಿಸಿ, ಹರಾಜು ಮಾಡಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ಬಾಡಿಗೆದಾರರಿಗೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ಆಕ್ಷೇಪವೂ ವ್ಯಕ್ತವಾಗಿದ್ದು, ಪಾಲಿಕೆ ಆಯುಕ್ತ ಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.
● ಸತೀಶ್ ದೇಪುರ