ನಲವತ್ತೇ ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುವ ಮಿಡಿ ಸೌತೆಯಿಂದ ಲಕ್ಷಾಂತರ ರೂಪಾಯಿ ಲಾಭ ಸಿಗುತ್ತದೆ ಅನ್ನುತ್ತಾರೆ ಯಲ್ಪಟ್ಟಿ ಧನಪಾಲ.
ಬಾಗಲಕೋಟ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಹಳಿಂಗಳಿಯ ಧನಪಾಲ ಯಲ್ಲಟ್ಟಿ ಅವರ ವಯಸ್ಸು 54 ವರ್ಷ. ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಆದರೆ ತಾವು ಯಾವುದೇ ಆಧುನಿಕ ರೈತನಿಗೆ ಕಡಿಮೆ ಇಲ್ಲ ಎಂಬುದನ್ನು ಹೊಸ ಹೊಸ ಕೃಷಿ ಪ್ರಯೋಗಗಳ ಮೂಲಕ ತೋರಿಸಿಕೊಟ್ಟಿದ್ದಾರೆ.
ಇವರಿಗಿರುವ 20 ಗುಂಟೆ ಜಾಗೆಯಲ್ಲಿ ನೆಟ್‌ಹೌಸ್ ನಿರ್ಮಿಸಿಕೊಂಡು ಮಿಡಿ ಸೌತೆಕಾಯಿ ಬೆಳೆದು, ಕಡಿಮೆ ಅವಧಿಯಲ್ಲಿ ನಿಯಮಿತವಾಗಿ ಲಕ್ಷಾಂತರ ರೂ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಮೊದಲು ಭೂಮಿಯನ್ನು ಚೆನ್ನಾಗಿ ಹದ ಮಾಡಿಕೊಂಡು ಸಾಲಿನಿಂದ ಸಾಲಿಗೆ 5 ಅಡಿ, ಕುಣಿಯಿಂದ ಕುಣಿಗೆ 2 ಅಡಿಯಂತೆ ಜಿಗ್‌ಜಾಗ್ ಪದ್ಧತಿಯಲ್ಲಿ 2000 ಸಸಿಗಳನ್ನು ನಾಟಿ ಮಾಡಿದ್ದಾರೆ. ನಾಟಿ ಮಾಡುವ ಪೂರ್ವದಲ್ಲಿ ಬೆಡ್ ನಿರ್ಮಾಣಕ್ಕೂ ಮೊದಲು ಡಿಎಪಿ 50ಕೆಜಿ, ಪೋಟ್ಯಾಶ್ 50 ಕೆ.ಜಿ, ಬೇವಿನ ಹಿಂಡಿ 100ಕೆಜಿ, ಗ್ರೀನ್ ಕ್ರಾಪ್, 10 ಕೆಜಿ ಅಮಿನೋ ಜಿ ಪ್ಲಸ್ 10ಕೆಜಿ ಯಷ್ಟು ಹಾಕಿ ಸಸಿ ನಾಟಿ ಮಾಡಿದ್ದಾರೆ.
ಮಿಡಿ ಸೌತೆಯು ನಾಟಿ ಮಾಡಿದ 25 ದಿನಕ್ಕೆ ಹೂ ಬಿಡುತ್ತದೆ. 30 ದಿನಕ್ಕೆ ಕಾಯಿ ಬಿಡಲು ಪ್ರಾರಂಭ 35ನೇ ದಿನಕ್ಕೆ ಕೊಯ್ಲು ಪ್ರಾರಂಭವಾಗುತ್ತದೆ. ಇದು 2 ತಿಂಗಳ ಬೆಳೆ. ನೆಟ್ಟ 35 ರಿಂದ 40 ದಿನಕ್ಕೆ ಇಳುವರಿ ದೊರೆಯುತ್ತದೆ. ಪ್ರತಿದಿನಕ್ಕೆ 1 ಕ್ವಿಂಟಾಲ್, 40 ರಿಂದ 60ನೇ ದಿನದವರೆಗೆ ಪ್ರತಿ ದಿನಕ್ಕೆ 2 ಕ್ವಿಂಟಾಲ್ ಇಳುವರಿ ದೊರೆಯುತ್ತದೆ. ನಾಲ್ಕು ತರಹದ ಮಿಡಿ ಸೌತೆ ದೊರೆಯುತ್ತದೆ. ಅದರಲ್ಲಿ 1ನೇ ಕ್ವಾಲಟಿ ಮಿಡಿ ಸೌತೆಗೆ ರೂ. 34, 2ನೇ ಕ್ವಾಲಿಟಿಗೆ ರೂ. 2013ನೇ ಕ್ವಾಲಿಟ್ಟಿಗೆ ರೂ. 10 ದೊರೆಯುತ್ತಿದೆ. ಒಟ್ಟು 20 ಗುಂಟೆ ಜಾಗೆಯಲ್ಲಿ 8 ರಿಂದ 10 ಟನ್ ಇಳುವರಿಯಿಂದಾಗಿ ಖರ್ಚು ರೂ. 70 ಸಾವಿರ ಆಗಿದೆ. ಇದನ್ನು ತೆಗೆದು ಅಂದಾಜು ರೂ. 3 ಲಕ್ಷದವರೆಗೆ ಆದಾಯ ಪಡೆಯಬಹುದು ಎನ್ನುತ್ತಾರೆ ಧನಪಾಲ ಯಲ್ಲಟ್ಟಿ.
ಮಾರುಕಟ್ಟೆ
ಬೆಂಗಳೂರಿನ ವಿಶಾಲ್ ನ್ಯಾಚುರಲ್ ಪುಡ್ ಪ್ರಾಡಕ್ಟ್ ಇಂಡಿಯಾ ಪ್ರ„. ಲಿ. ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಧನಪಾಲ್. ಅವರೇ ಬಂದು ಮಿಡಿಸೌತೆಯನ್ನು ತೆಗೆದುಕೊಂಡು ಹೋಗುತ್ತಾರೆ. ಇದನ್ನು ಅಮೆರಿಕಾದ ಬಹುತೇಕ ನಗರಗಳಿಗೆ ರಫ್ತು ಮಾಡಲಾಗುತ್ತಿದೆಯಂತೆ. ಈ ಬೆಳೆ ಸಂಪೂರ್ಣವಾಗಿ ಸಾವಯವವಾಗಿ ಬೆಳೆ ಬೆಳೆದಿದ್ದು ಎನ್ನುತ್ತಾರೆ ಧನಪಾಲ.
ಹೆಚ್ಚಿನ ಮಾಹಿತಿಗಾಗಿ ಧನಪಾಲ ಎನ್. ಯಲ್ಲಟ್ಟಿ, ಮೊ: 9900030678 ಗೆ ಸಂಪರ್ಕಿಸಬಹುದು.
ಕಿರಣ ಶ್ರೀಶೈಲ ಆಳಗಿ