ಮಧುಗಿರಿ: ವಸತಿ ಯೋಜನೆಯಡಿ ಬಡವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದ ಬಂದಿದ್ದ ಅನುದಾನ ಬ್ಯಾಲ್ಯ ಗ್ರಾಪಂ ಸಿಬ್ಬಂದಿ ನಿರ್ಲಕ್ಷ್ಯದಿಂದವಾಪಸ್ ಹೋಗಿದ್ದು, ಇದರಿಂದ ಆಕ್ರೋಶ ಗೊಂಡ ಫಲಾನುಭವಿಗಳು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮಧುಗಿರಿ ತಾಲೂಕಿಗೆ ಸೇರಿದ್ದರೂ ಕಂದಾಯ ವಿಭಾಗದಲ್ಲಿ ಕೊರಟಗೆರೆ ಕ್ಷೇತ್ರ ಪ್ರತಿನಿಧಿಸುವ ಪುರವರ ಹೋಬಳಿಯ ಬ್ಯಾಲ್ಯ ಗ್ರಾಪಂನಲ್ಲಿನಡೆದಿದೆ. ಕೊರಟಗೆರೆ ಶಾಸಕ ಪರಮೇಶ್ವರ್ ಈ ಹಿಂದೆ ಬಸವ ವಸತಿ ಯೋಜನೆಯಡಿ ಬ್ಯಾಲ್ಯ ಗ್ರಾಪಂಗೆ 120 ಮನೆಗಳನ್ನು ಮಂಜೂರು ಮಾಡಿಸಿದ್ದರು. ಅದರಲ್ಲಿನ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ಗ್ರಾಪಂ ವತಿಯಿಂದ ಆದೇಶ ಪತ್ರ ನೀಡಲಾಗಿತ್ತು.
ಕಾರ್ಯದರ್ಶಿ ವಿರುದ್ಧ ಆರೋಪ: ಈ ಬಗ್ಗೆ ಉದಯವಾಣಿ ಜತೆ ಕೊರಟಗೆರೆ ಬಿಜೆಪಿ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ನಾಗರಾಜ್ ಮಾತನಾಡಿ, ಫಲಾನುಭವಿ ಗಳಿಗೆ ಮನೆ ನಿರ್ಮಿಸಿಕೊಳ್ಳಲು ಪಂಚಾಯ್ತಿ ಕಾರ್ಯದರ್ಶಿ ಪೋಟೋ ತೆಗೆಸಿದ್ದು, ಹಸಿರು ನಿಶಾನೆ ತೋರಿದ್ದರು ಹಾಗೂ ಬಿಲ್ ಮಾಡಿ ಕೊಡುವ ಭರವಸೆ ನೀಡಿದ್ದರು.
ಬಿಲ್ ಪಾವತಿಸಲು ನಿರ್ಲಕ್ಷ್ಯ: ಈ ಮಾತನ್ನು ನಂಬಿದ ಬಡವರು ಸಾಲ ಮಾಡಿ ಮನೆ ಕಟ್ಟಲು ಮುಂದಾದರು. ಈಗ ಮನೆಯ ಕಾಮಗಾರಿ ಛಾವಣಿ ಮಟ್ಟಕ್ಕೆ ತಲುಪಿದ್ದು, ಮತ್ತೆ ಪೋಟೋ ತಗೆಯಲು ಬಂದು ಪರಿಶೀಲನೆ ನಡೆಸಿದರೆ ಈ ಯೋಜನೆಗೆ ಸರ್ಕಾರ ಬ್ರೇಕ್ ಹಾಕಿದ್ದು, ಹಣ ಬರುವುದಿಲ್ಲ ಎನ್ನುತ್ತಿದ್ದಾರೆ. ಇದೇ ಯೋಜನೆಯಡಿ ಮನೆ ನಿರ್ಮಿಸಿಕೊಂಡವರಿಗೆ ಈಗಾಗಲೇ ಬಿಲ್ ಮಾಡಿದ್ದಾರೆ. ಮಹಡಿ ಮನೆ ನಿರ್ಮಾಣಕ್ಕೆ ಅವಕಾಶ ಇಲ್ಲದಿದ್ದರೂ ಮಹಡಿ ಮನೆ ನಿರ್ಮಿಸಿ ಕೊಂಡವರಿಗೆ ಬಿಲ್ ಪಾವತಿ ಮಾಡಿರುವ ಗ್ರಾಪಂಕಾರ್ಯದರ್ಶಿ ಈಗ ಬಡವರ ಮನೆಯ ಬಿಲ್ ಪಾವತಿಸಲು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಈ ಅಚಾತುರ್ಯ ನಡೆದಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಬಾಬು, ರಂಗನಾಥ್, ಸುರೇಂದ್ರರೆಡ್ಡಿ, ಮಹೇಂದ್ರರೆಡ್ಡಿ, ಪ್ರಜಾಪರ ವೇದಿಕೆ ರಾಜ್ಯ ಕಾರ್ಯದರ್ಶಿ ಜಲಾಲ್ ಬಾಷಾ, ಅಧ್ಯಕ್ಷ ಇಬ್ಬು ವೆಂಕಟೇಶ್ ಹಾಗೂ ಇತರರು ಇದ್ದರು.