Advertisement

ದೀಪಾವಳಿಗಿಲ್ಲ ಬಡ್ಡಿ ದರ ಇಳಿಕೆ ಸಿಹಿ

06:15 AM Oct 05, 2017 | |

ಮುಂಬೈ/ನವದೆಹಲಿ: ಜಿಎಸ್‌ಟಿಯಿಂದಾಗಿ ಉತ್ಪಾದನಾ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ನಿರೀಕ್ಷಿತ ಬಂಡವಾಳ ಹೂಡಿಕೆಗೂ ಸದ್ಯಕ್ಕೆ ಉತ್ತೇಜನ ಸಿಗದು ಎಂದು ಹೇಳಿರುವ ಆರ್‌ಬಿಐ, ಬಡ್ಡಿದರದಲ್ಲಿ ಯಾವುದೇ ಇಳಿಕೆಯನ್ನೂ ಮಾಡದೇ ಬ್ಯಾಂಕ್‌ ಗ್ರಾಹಕರಿಗೆ ನಿರಾಸೆಯನ್ನೂ ಮಾಡಿದೆ. 

Advertisement

ವಿಶೇಷವೆಂದರೆ, ಬಡ್ಡಿದರ ಇಳಿಸದ ಆರ್‌ಬಿಐ ನಿರ್ಧಾರ ಷೇರುಮಾರುಕಟ್ಟೆಯಲ್ಲಿ ಸಂತಸವನ್ನುಂಟು ಮಾಡಿದೆ.
ಇದರ ಜತೆಯಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾವು 2017 18ನೇ ಸಾಲಿನ ದೇಶದ ನಿರೀಕ್ಷಿತ ಪ್ರಗತಿ ದರವನ್ನು ಶೇ.6.7ಕ್ಕೆ ಇಳಿಕೆ ಮಾಡಿದೆ. ಆದರೆ ಕಳೆದ ಆಗಸ್ಟ್‌ನಲ್ಲಿ ನಡೆದ ಹಣಕಾಸು ನೀತಿ ಪರಾಮರ್ಶೆ ವೇಳೆ ನಿರೀಕ್ಷಿತ ಆರ್ಥಿಕ ಪ್ರಗತಿ ದರವನ್ನು ಶೇ.7.3 ರಷ್ಟಾಗಲಿದೆ ಎಂದು ಅಂದಾಜಿಸಲಾಗಿತ್ತು.

ಮುಂಬೈನಲ್ಲಿ ಬುಧವಾರ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ನೇತೃತ್ವದಲ್ಲಿ ನಡೆದ ನಾಲ್ಕನೇ ತ್ತೈಮಾಸಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಗಸ್ಟ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಬಡ್ಡಿದರವನ್ನು ಶೇ.0.25ರಷ್ಟು ಇಳಿಕೆ ಮಾಡಲಾಗಿತ್ತು. ಬುಧವಾರದ ಸಭೆಯಲ್ಲಿ ಆರು ಮಂದಿ ಸದಸ್ಯರಿರುವ ಹಣಕಾಸು ನೀತಿ ನಿರ್ವಹಣಾ ಸಮಿತಿ (ಎಂಪಿಸಿ) 5:1ರ ಅನುಪಾತದಲ್ಲಿ ಈ ನಿರ್ಧಾರ ಕೈಗೊಂಡಿತು. ಸದಸ್ಯ ರವೀಂದ್ರ ಧೊಲಾಕಿಯಾ ಮಾತ್ರ ಶೇ.0.25ರಷ್ಟು ಬಡ್ಡಿದರ ಕಡಿತ ಮಾಡಬೇಕೆಂದು ಪ್ರತಿಪಾದಿಸಿದರು.

ವಿ¤ತೀಯ ಕೊರತೆ ಏರಲಿದೆ: ಉತ್ತರ ಪ್ರದೇಶ, ಪಂಜಾಬ್‌ ಸರ್ಕಾರಗಳು ಚುನಾವಣಾ ಪ್ರಣಾಳಿಕೆಯಲ್ಲಿ ವಾಗ್ಧಾನ ಮಾಡಿದಂತೆ ಮುಂದಿನ ದಿನಗಳಲ್ಲಿ ರೈತರ ಸಾಲ ಮನ್ನಾ, ಹಣಕಾಸು ಕ್ಷೇತ್ರಕ್ಕೆ ಪ್ಯಾಕೇಜ್‌ ನೀಡಿಕೆ ಸೇರಿದಂತೆ ಅರ್ಥ ವ್ಯವಸ್ಥೆಗೆ ಹೊರೆಯಾಗುವಂಥ ಘೋಷಣೆ ಮಾಡಿದರೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದೂ ಆರ್‌ಬಿಐ ಎಚ್ಚರಿಸಿದೆ. ಇದರಿಂದಾಗಿ ವಿತ್ತೀಯ ಕೊರತೆ ಪ್ರಮಾಣದಲ್ಲಿ ಶೇ.1ರಷ್ಟು ಹೆಚ್ಚಾಗಬಹುದು ಎಂದು ಮುನ್ಸೂಚನೆ ನೀಡಿದೆ.

ಷೇರು ಮಾರುಕಟ್ಟೆಯಲ್ಲಿ ಸಂತಸ
ಸಾಲ ನೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು ಮುಂಬೈ ಷೇರು ಪೇಟೆ ಹೂಡಿಕೆದಾರರಲ್ಲಿ ಸಂತಸ ಮೂಡಿಸಿದೆ. ಹೀಗಾಗಿ, ಸತತ ನಾಲ್ಕನೇ ದಿನವಾಗಿರುವ ಬುಧವಾರ ಸೂಚ್ಯಂಕ 174.33 ಅಂಕಗಳಷ್ಟು ಏರಿಕೆಯಾಗಿದೆ. ದಿನದ ಅಂತ್ಯಕ್ಕೆ ಸೂಚ್ಯಂಕ 31,671.71ರಲ್ಲಿ ಕೊನೆಗೊಂಡಿತು. ನಿಫ್ಟಿ 55.40 ಅಂಕ ಏರಿಕೆ ಕಂಡು, 9,914.90ರಲ್ಲಿ ಮುಕ್ತಾಯವಾಯಿತು. ಇನ್ನು ಅಮೆರಿಕದ ಡಾಲರ್‌ ಎದುರು ರುಪಾಯಿ ಮೌಲ್ಯ ಕೂಡ ದೃಢವಾಗಿಯೇ ಮುಕ್ತಾಯವಾಯಿತು.

Advertisement

ಸಂಬಳ ಕೊಡದಿದ್ದರೆ ಮುಷ್ಕರ: ಬ್ಯಾಂಕ್‌ ನೌಕರರ ಬೆದರಿಕೆ
ನೋಟುಗಳ ಅಮಾನ್ಯ ಘೋಷಣೆ ಬಳಿಕ ಹೆಚ್ಚುವರಿ ಅವಧಿಗೆ ಕೆಲಸ ಮಾಡಿದ್ದಕ್ಕೆ ಸಂಬಳ ಕೂಡ ಬಿಡುಗಡೆ ಮಾಡದಿದ್ದರೆ ಮುಷ್ಕರ ನಡೆಸುವುದಾಗಿ ಬ್ಯಾಂಕ್‌ ನೌಕರರ ಒಕ್ಕೂಟ ಬೆದರಿಕೆ ಹಾಕಿದೆ. 2016ರ ನ.8ರ ಘೋಷಣೆಯಾದ ಬಳಿಕ ಬ್ಯಾಂಕಿಂಗ್‌ ಕ್ಷೇತ್ರದ ನೌಕರರು 14 ಗಂಟೆಗಳ ಕಾಲ ಕೆಲಸ ಮಾಡಿದ್ದ ಉದಾಹರಣೆ ಕೂಡ ಇದೆ. ಬರೋಬ್ಬರಿ ಎಂಟು ಲಕ್ಷ ಉದ್ಯೋಗಿಗಳು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದ್ದರು. 11 ತಿಂಗಳು ಕಳೆದರೂ ಆ ಅವಧಿಯ ಸಂಬಳ ಪಾವತಿಯಾಗಿಲ್ಲ. ಸುಮಾರು 4 ಲಕ್ಷ ಸಿಬ್ಬಂದಿಗೆ ಹೆಚ್ಚುವರಿ ವೇತನವನ್ನು ಸರ್ಕಾರ ಪಾವತಿ ಮಾಡಬೇಕಾಗಿದೆ ಎಂದು ಒಕ್ಕೂಟ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next