Advertisement

Monday ಬಿಸಿ ಮಾಡ್ಬೇಡಿ

05:51 PM Oct 29, 2019 | mahesh |

ಹೊರಗೆ ದುಡಿಯಲು ಹೋಗುವ ಗಂಡಸರನ್ನೂ, ಶಾಲೆ-ಕಾಲೇಜಿಗೆ ಹೋಗೋ ಮಕ್ಕಳನ್ನು ಭಾನುವಾರದ ಮೂಡ್‌ನಿಂದ ಹೊರಗೆ ತಂದು ಮುಂದಿನ ಕೆಲಸಕ್ಕೆ ತಯಾರಿ ಮಾಡಿ ಕಳಿಸುವ ಮಹತ್ತರ ಜವಾಬ್ದಾರಿ ಅಮ್ಮಂದಿರದ್ದೇ. ಮಹಿಳೆಯೂ ಉದ್ಯೋಗಸ್ಥೆಯಾಗಿದ್ದರಂತೂ ಅವಳ ಪಾಡು ದೇವರಿಗೇ ಪ್ರೀತಿ.

Advertisement

“ವಾರ ಬಂತಮ್ಮಾ ಗುರುವಾರ ಬಂತಮ್ಮಾ, ರಾಯರ ನೆನೆಯಮ್ಮಾ’ ಎನ್ನುವ ಹಾಗೆ ಶನಿವಾರ, ಭಾನುವಾರಗಳ ಸಣ್ಣ ಬಿಡುವಿನ ನಂತರ ಬರುವ ಸೋಮವಾರಕ್ಕೆ, “ಮಂಡೆ ಬಂತಮ್ಮಾ, ಮಂಡೆ ಬಿಸಿ ಹೆಚ್ಚಿತಮ್ಮಾ, ಕೆಲಸವ ನೆನೆಯಮ್ಮಾ, ನೀ ಆಫೀಸಿಗೆ ಹೊರಡಮ್ಮಾ…’ ಅಂತ ಹಾಡು ಗುನುಗುವ ಪಾಡು ಇಂದಿನ ದಿನಗಳಲ್ಲಿ ಯಾರಿಗಿಲ್ಲ ಹೇಳಿ? ಕೆಲಸಕ್ಕೆ ಹೋಗೋ ಪುರುಷ, ಮಹಿಳೆಯರಿಗೆ ಬೆಳಗ್ಗೆ ಬೇಗ ಎದ್ದು ಮನೆ ಕೆಲಸಗಳನ್ನೆಲ್ಲಾ ಪೂರೈಸಿ ಹೊರಡೋ ತರಾತುರಿ, ಕಾಲೇಜು ವಿದ್ಯಾರ್ಥಿಗಳಂತೂ ದಿನಾ ತೆಗೆದುಕೊಂಡು ಹೋಗುವ ಒಂದೆರಡು ಪುಸ್ತಕಗಳನ್ನು ಹುಡುಕಿ, ಹೊರಡುವಷ್ಟರಲ್ಲಿ ಕಾಲೇಜಿನ ಗಂಟೆ ಬಾರಿಸಿರುತ್ತದೆ. ಶಾಲೆಗೆ ಹೋಗುವ ಪುಟ್ಟ ಮಕ್ಕಳ ಕತೆಯನ್ನಂತೂ ಕೇಳ್ಳೋದೇ ಬೇಡ. ಬೆಳಗಿನ ಸಕ್ಕರೆ ನಿದ್ದೆಯಿಂದ ಎಬ್ಬಿಸುವ ಅಮ್ಮನಿಗೊಂದಷ್ಟು ಶಪಿಸಿ, “ಯಾಕಾದ್ರೂ ಸೋಮವಾರ ಬರತ್ತೋ, ಶಾಲೆಗೆ ಯಾಕಾದ್ರೂ ಹೋಗ್ಬೇಕೋ…’ ಅಂತ ನಿದ್ದೆಗಣ್ಣಿನಲ್ಲೇ ನಿತ್ಯಕರ್ಮ ಮುಗಿಸುವ ಹೊತ್ತಿಗೆ, ಶಾಲಾ ವಾಹನದ ಹಾರನ್‌ನ ಸದ್ದು ಸೈರನ್‌ನಂತೆ ಕಿವಿಗಪ್ಪಳಿಸಿರುತ್ತದೆ.

ಆದರೂ, ಸೋಮವಾರದ ದಿನ ಹೆಚ್ಚು ಮಂಡೆ ಬಿಸಿಯಾಗೋದು ಮಹಿಳೆಯರಿಗೇ. ಹೊರಗೆ ದುಡಿಯಲು ಹೋಗುವ ಗಂಡಸರನ್ನೂ, ಶಾಲೆ-ಕಾಲೇಜಿಗೆ ಹೋಗೋ ಮಕ್ಕಳನ್ನು ಭಾನುವಾರದ ಮೂಡ್‌ನಿಂದ ಹೊರಗೆ ತಂದು ಮುಂದಿನ ಕೆಲಸಕ್ಕೆ ತಯಾರಿ ಮಾಡಿ ಕಳಿಸುವ ಮಹತ್ತರ ಜವಾಬ್ದಾರಿ ಅಮ್ಮಂದಿರದ್ದೇ. ಮಹಿಳೆಯೂ ಉದ್ಯೋಗಸ್ಥೆಯಾಗಿದ್ದರಂತೂ ಅವಳ ಪಾಡು ದೇವರಿಗೇ ಪ್ರೀತಿ. ಎಲ್ಲರ ಆಲಸ್ಯ ಬಡಿದೆಬ್ಬಿಸಿ, ಅವರನ್ನು ಹೊರಡಿಸಿ ಕಳಿಸಿ, ತಾನೂ ತಯಾರಾಗಿ ಹೊರಡುವಷ್ಟರಲ್ಲಿ ಭಾನುವಾರದ ರಜೆಯೂ ಬೇಡ, ಸೋಮವಾರದ ಆಲಸಿತನವೂ ಬೇಡ ಎನ್ನಿಸಿಬಿಡುತ್ತದೆ.

ಉದ್ಯೋಗಸ್ಥೆಯರಿಗೆ ಹೀಗೆ ಅನ್ನಿಸಲು ಕಾರಣಗಳೂ ಇವೆ. ದಿನಾ ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಮಾಡಲಾಗದ ಗೃಹಕೃತ್ಯಗಳನ್ನು (ಮನೆ ಒರೆಸುವುದು, ಅಡುಗೆಮನೆ ಸ್ವತ್ಛತೆ, ಬಟ್ಟೆ ತೊಳೆಯುವುದು, ಬೆಡ್‌ಶೀಟ್‌-ಕಿಟಕಿ ಪರದೆ ಸ್ವತ್ಛತೆ ಮುಂತಾದವು) ಮುಗಿಸಲು ಅವರಿಗೆ ಸಿಗುವುದು ಭಾನುವಾರವೊಂದೇ ದಿನ. ಆ ದಿನವಿಡೀ ಕೆಲಸ ಮಾಡಿ ಹೈರಾಣಾದರೆ, ಸೋಮವಾರದ ಬೆಳಗ್ಗೆ ಏಳಲು ಶಕ್ತಿ ಎಲ್ಲಿಂದ ಬರಬೇಕು? ಇನ್ನು, ಭಾನುವಾರ ಸಂಜೆ ಹೊರಗಡೆ ಸುತ್ತಾಡಿ, ಸಿನಿಮಾ ನೋಡಿ ಲೇಟಾಗಿ ಮನೆಗೆ ಬಂದು ಮಲಗಿದರೆ, ಮರುದಿನ ಏಳಲು ಕಷ್ಟವಾಗುತ್ತದೆ. ಹಾಗಾಗಿ, ಸೋಮವಾರವನ್ನು ಎನರ್ಜಿಟಿಕ್‌ ಆಗಿಸಲು ಶನಿ-ಭಾನುವಾರದ ರಜೆಯಲ್ಲಿಯೇ ಸ್ವಲ್ಪ ಪ್ಲಾನ್‌ ಮಾಡುವ ಅಗತ್ಯ ಇರುತ್ತದೆ. ಹೇಗೆ ಪ್ಲಾನ್‌ ಮಾಡಿಕೋಬೇಕು ಅಂದಿರಾ?

– ವಾರದ ಆರಂಭವನ್ನು ಲವಲವಿಕೆಯಿಂದ ಬರ ಮಾಡಿಕೊಂಡರೆ, ಇಡೀ ವಾರ ಖುಷಿಯಾಗಿರಬಹುದು. ಅಯ್ಯೋ, ಸೋಮವಾರ ಯಾಕಪ್ಪಾ ಬರುತ್ತೆ ಅಂತ ಪದೇ ಪದೆ ಪರಿತಪಿಸಬೇಡಿ.
– ಇಡೀ ವಾರ ಯಾವೆಲ್ಲಾ ಕೆಲಸಗಳನ್ನು ಪೂರೈಸಬೇಕು ಅಂತ ಯೋಜನೆ ಹಾಕಿಕೊಳ್ಳಿ. ಅದರಂತೆಯೇ ಕೆಲಸಗಳನ್ನು ಮಾಡಿ.
– ಶನಿ-ಭಾನುವಾರ, ಎರಡೂ ದಿನ ರಜೆ ಇರುವವರು ಕಷ್ಟದ ಕೆಲಸಗಳನ್ನೆಲ್ಲ (ಬಟ್ಟೆ ಒಗೆಯುವುದು, ಮನೆ ಗುಡಿಸಿ-ಒರೆಸುವುದು) ಶನಿವಾರವೇ ಮುಗಿಸಿಬಿಡಿ.
-ಭಾನುವಾರವನ್ನು ವಿಶ್ರಾಂತಿ, ಹವ್ಯಾಸಗಳಿಗಾಗಿ ಮೀಸಲಿಡಿ. ಆ ದಿನ ಹೆಚ್ಚು ಕೆಲಸ ಮಾಡಿ ಸುಸ್ತು ಮಾಡಿಕೊಳ್ಳಬೇಡಿ.
-ಸೋಮವಾರದ ಬೆಳಗ್ಗಿನ ತಿಂಡಿಗೆ ಹಿಂದಿನ ರಾತ್ರಿಯೇ ತಯಾರಿ ಮಾಡಿಕೊಳ್ಳಿ. (ಚಪಾತಿ ಹಿಟ್ಟು ಕಲಸುವುದು, ಪಲ್ಯಕ್ಕೆ ತರಕಾರಿ ಹೆಚ್ಚಿಡುವುದು ಇತ್ಯಾದಿ.)
-ಈ ವಾರ ಬೆಳಗ್ಗಿನ ತಿಂಡಿಗೆ ಏನೇನೆಲ್ಲಾ ಮಾಡಬಹುದು ಅಂತ ಮೊದಲೇ ಅಂದಾಜು ಮಾಡಿಕೊಂಡರೆ ಉತ್ತಮ. ಆಗ, ಬೆಳಗ್ಗೆದ್ದು “ಇವತ್ತೇನು ತಿಂಡಿ ಮಾಡಲಿ?’ ಅಂತ ಪೇಚಾಡುವುದು ತಪ್ಪುತ್ತದೆ.
-ಭಾನುವಾರದ ಮಜಾದಲ್ಲಿರುವ ಮಕ್ಕಳು ಹೋಮ್‌ವರ್ಕ್‌ ಮಾಡಿ ಮುಗಿಸಿದ್ದಾರ ಅಂತ ಸಂಜೆಯೇ ಚೆಕ್‌ ಮಾಡಿಕೊಳ್ಳಿ.
-ಮಕ್ಕಳು ಸ್ವಲ್ಪ ಶಿಸ್ತು ಕಲಿತರೆ ಅಮ್ಮಂದಿರ ಕೆಲಸ ಸುಲಭವಾಗುತ್ತದೆ. ಹಾಗಾಗಿ, ಪುಸ್ತಕ ಜೋಡಿಸಿಕೊಳ್ಳುವುದು, ಶೂ-ಟೈ ಹಾಕಿಕೊಳ್ಳೋದು, ಯೂನಿಫಾರ್ಮ್ಗೆ ಇಸಿŒ ಮಾಡುವುದು ಮುಂತಾದ ಸಣ್ಣಪುಟ್ಟ ಕೆಲಸಗಳ ಜವಾಬ್ದಾರಿಯನ್ನು ಅವರಿಗೇ ಬಿಟ್ಟುಬಿಡಿ.
– ವಾರಾಂತ್ಯದ ಮನೆಗೆಲಸದಲ್ಲಿ ಗಂಡ-ಮಕ್ಕಳ ನೆರವು ಪಡೆಯಿರಿ.

Advertisement

ಸುವರ್ಚಲಾ ಅಂಬೇಕರ್‌ ಬಿ.ಎಸ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next