ಭಾರತ ಕಂಡ ಶ್ರೇಷ್ಠ ಅತ್ಲಿಟ್ ‘ಹಾರುವ ಸಿಖ್’ ಎಂದೇ ಹೆಸರುವಾಸಿಯಾಗಿರುವ ಮಿಲ್ಖಾ ಸಿಂಗ್ ಅವರ ಮಗಳು ಮೋನಾ ಮಿಲ್ಖಾ ಸಿಂಗ್ ಅವರು ಕೋವಿಡ್ ವಿರುದ್ಧದ ಹೋರಾಟದಲ್ಲಿ ತಾನೊಬ್ಬ ಆರೋಗ್ಯ ಯೋಧರಾಗಿ ಮುಂಚೂಣಿಯಲ್ಲಿ ಹೋರಾಡುತ್ತಿದ್ದಾರೆ.
ಸ್ವತಃ ಮಿಲ್ಖಾ ಸಿಂಗ್ ಅವರೇ ಈ ವಿಚಾರವನ್ನು ಎ.ಎನ್.ಐ. ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕಳೆದ 20 ವರ್ಷಗಳಿಂದ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಮೋನಾ ಮಿಲ್ಖಾ ಸಿಂಗ್ ಅವರು ಇದೀಗ ಎಮರ್ಜೆನ್ಸಿ ರೂಂ ಡಾಕ್ಟರ್ ಆಗಿ ಈ ಸಂಕಷ್ಟದ ಸಂದರ್ಭದಲ್ಲಿ ಕರ್ತವ್ಯ ನಿರತರಾಗಿದ್ದಾರೆ.
ಮಾರ್ಚ್ 1ರಂದು ನ್ಯೂಯಾರ್ಕ್ ನಗರದಲ್ಲಿ ಮೊದಲ ಕೋವಿಡ್ ವೈರಸ್ ಸೋಂಕು ಪತ್ತೆಯಾಗಿತ್ತು. ಆದರೆ ಇಂದು ಅಮೆರಿಕಾದಲ್ಲಿ ಕೋವಿಡ್ ಹಾಟ್ ಸ್ಪಾಟ್ ಆಗಿ ನ್ಯೂಯಾರ್ಕ್ ಬದಲಾಗಿದೆ. ಮತ್ತು ಅಮೆರಿಕಾದಲ್ಲಿ ಉಂಟಾಗಿರುವ ಕೋವಿಡ್ ಸಂಬಂಧಿ ಸಾವುಗಳಲ್ಲಿ ಅತೀ ಹೆಚ್ಚಿನ ಸಾವು ಈ ನಗರದಲ್ಲೇ ಸಂಭವಿಸಿದೆ.
ಮೋನಾ ಮಿಲ್ಖಾ ಸಿಂಗ್ ಅವರು ನ್ಯೂಯಾರ್ಕ್ ನಲ್ಲಿರುವ ಮೆಟ್ರೋಪಾಲಿಟನ್ ಹಾಸ್ಪಿಟಲ್ ಸೆಂಟರ್ ನಲ್ಲಿ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಪ್ರಕರಣದಿಂದ ಈ ಆಸ್ಪತ್ರೆಗೆ ಬರುವ ರೋಗಿಗಳನ್ನು ಮೋನಾ ಅವರು ಪರೀಕ್ಷಿಸಿ, ಅವರ ದೇಹಸ್ಥಿತಿಯನ್ನು ಸ್ಥಿರಗೊಳಿಸಿ ಬಳಿಕ ಅಗತ್ಯವಿದಲ್ಲಿ ಅವರಿಗೆ ಕೃತಕ ಉಸಿರಾಟದ ನಳಿಕೆ ಅಳವಡಿಸುವ ಕಾರ್ಯವನ್ನು ಡಾಕ್ಟರ್ ಮೋನಾ ಅವರು ನಿಭಾಯಿಸುತ್ತಾರೆ ಎಂಬ ಮಾಹಿತಿಯನ್ನು ಅವರ ಸಹೋದರ ಗಾಲ್ಫರ್ ಜೀವ್ ಮಿಲ್ಖಾ ಸಿಂಗ್ ನೀಡಿದ್ದಾರೆ.
54 ವರ್ಷ ಪ್ರಾಯದ ಮೋನಾ ಮಿಲ್ಖಾ ಸಿಂಗ್ ಅವರು ಪಟಿಯಾಲಾ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದುಕೊಂಡಿದ್ದರು. ಮತ್ತು ಆ ಬಳಿಕ ವೈದ್ಯಕೀಯ ವೃತ್ತಿಗಾಗಿ ಅಮೆರಿಕಾಗೆ ಹೋದ ಮೋನಾ ಅವರು ಇದೀಗ ಕಳೆದ 20 ವರ್ಷಗಳಿಂದ ಅಲ್ಲಿಯೇ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.