Advertisement

ಮಗಳ ಕಣ್ಣೆದುರೇ ಅಮ್ಮನನ್ನು ಸಲಾಕೆಯಿಂದ ಹೊಡೆದ!

12:36 PM Mar 26, 2019 | pallavi |

ಸುಬ್ರಹ್ಮಣ್ಯ : ಪತಿಯನ್ನು ತ್ಯಜಿಸಿ ಬಂದು ಪ್ರಿಯತಮನೊಂದಿಗೆ ಸಂಸಾರ ನಡೆಸಿದ್ದ ಆಕೆ ತುಂಬು ಗರ್ಭಿಣಿಯಾಗಿದ್ದಾಗ ಅದೇ ಪ್ರಿಯಕರನಿಂದ ಕೊಲೆಯಾಗಿದ್ದಳು. ಈ ಪ್ರಕರಣದ ವಿಚಾರಣೆಯಲ್ಲಿ ನಾಲ್ಕು ವರ್ಷದ ಮಗು ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯೇ ಪ್ರಮುಖ ಸಾಕ್ಷಿಯಾಗಿ ಪರಿಗಣಿತವಾಗಿ ಕೊಲೆಗಾರ ಜೀವವಾಧಿ ಶಿಕ್ಷೆಗೆ ಒಳಗಾದ.

Advertisement

ಸುಳ್ಯ ತಾಲೂಕಿನ ಉಬರಡ್ಕ ಕುತ್ತಮೊಟ್ಟೆ ನಿವಾಸಿ ಕರುಣಾಕರ ಜೀವಾವಧಿ ಶಿಕ್ಷೆಗೊಳಗಾದ ಹಂತಕ. ಸೋಣಂಗೇರಿಯ ಯುವತಿ ಅರುಣಾಶ್ರೀಗೆ ಆತನೊಂದಿಗೆ ಪ್ರೇಮವಿತ್ತು. ಆದರೆ ಕರುಣಾಕರನಿಗೆ ಸುಳ್ಯ ಪೊರಕಲ್ಲಿನ ಯುವತಿಯ ಜತೆ ಅದಾಗಲೇ ವಿವಾಹವೂ ಆಗಿತ್ತು. ಸಂಸಾರದಲ್ಲಿ ಸಾಮರಸ್ಯ ಕಾಣದೆ ಆಕೆಗೆ ವಿಚ್ಛೇದನ ನೀಡಿದ್ದ. ವಿಚ್ಛೇದಿತ ಪತ್ನಿ ತನ್ನ ಗಂಡು ಮಗುವಿನ ಜತೆಗೆ ತವರು ಮನೆ ಸೇರಿದ್ದಳು.

ಆಕೆಗೂ ಮದುವೆಯಾಗಿತ್ತು!
ಕರುಣಾಕರ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ. ಅರಂಬೂರಿನಲ್ಲಿ ಶರಾಬು ಅಂಗಡಿ ನಡೆಸುತ್ತಿದ್ದ. ಶರಾಬು ನಿಷೇಧದ ಬಳಿಕ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ. ಅರುಣಾಶ್ರೀ ಕೂಡ ಮೊದಲು ಮದುವೆಯಾಗಿ ಗಂಡನಿಂದ ದೂರವಾಗಿದ್ದಳು. ಈಕೆ ಮತ್ತು ಕರುಣಾಕರ ಜತೆಯಲ್ಲಿ ವಾಸ ಮಾಡತೊಡಗಿದರು. ಇವರಿಬ್ಬರಿಗೆ ನಾಲ್ಕು ವರ್ಷದ ಹೆಣ್ಣು ಮಗು ಇತ್ತು. ಮಗುವನ್ನು ಸುಳ್ಯದ ಬೇಬಿ ಸಿಟ್ಟಿಂಗ್‌ಗೆ ಕರೆದೊಯ್ಯಲು ಆಟೋ ರಿಕ್ಷಾವನ್ನೂ ಗೊತ್ತುಪಡಿಸಲಾಗಿತ್ತು.

ಜಗಳ ಮಾಡುತ್ತಿದ್ದ
ಕರುಣಾಕರ ಮತ್ತು ಅರುಣಾಶ್ರೀ ಏಳು ವರುಷ ಒಟ್ಟಿಗೆ ಜೀವನ ಸಾಗಿಸಿದ್ದರೂ ಮದುವೆಯಾಗಿರಲಿಲ್ಲ. ನೋಂದಣಿ ವಿವಾಹವಾಗುವುದಾಗಿ ಕರುಣಾಕರ ಎಲ್ಲರ ಜತೆ ಹೇಳಿಕೊಂಡು ಬಂದಿದ್ದ. ಈ ನಡುವೆ ಅರುಣಾಶ್ರೀ ಗರ್ಭಿಣಿಯಾಗಿದ್ದಳು. ಆದರೆ, ರಿಕ್ಷಾ ಚಾಲಕನೊಬ್ಬನಿಗೂ ಅರುಣಾಶ್ರೀಗೂ ಸ್ನೇಹವಿದೆ ಎನ್ನುವ ಅನುಮಾನದಿಂದ ಕರುಣಾಕರ ನಿತ್ಯ ಆಕೆರೊಂದಿಗೆ ಜಗಳವಾಡುತ್ತಿದ್ದ.

ಅನುಮಾನವೇ ಕೊಲೆಗೆ ಕಾರಣ
2011ರ ಫೆ. 21ರ ರಾತ್ರಿ ಕರುಣಾಕರ ಸುಳ್ಯದಿಂದ ಮದ್ಯ ಸೇವಿಸಿಯೇ ಮನೆಗೆ ಬಂದಿದ್ದ. ಹಸಿ ಮೀನು ತಂದಿದ್ದ. ಮಗಳೂ ಶಾಲೆಯಿಂದ ಬಂದಿದ್ದಳು. ಮೀನು ಪದಾರ್ಥ ಮಾಡಲು ಸಜ್ಜುಗೊಳಿಸುತ್ತಿದ್ದ ಅರುಣಾಶ್ರೀಯೊಂದಿಗೆ ಜಗಳ ತೆಗೆದ ಕರುಣಾಕರ ಅಲ್ಲೇ ಇದ್ದ ಮರದ ಸಲಾಕೆಯಿಂದ ಆಕೆಯ ತಲೆಗೆ ಹೊಡೆದಿದ್ದ. ಹೊಡೆತದ ತೀವ್ರತೆಗೆ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು. ಈ ಕೊಲೆಯನ್ನು ಅವರ ಮಗಳು ನೋಡಿದ್ದಳು.

Advertisement

ಕರುಣಾಕರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸುಳ್ಯ ಪೊಲೀಸರು ಪುತ್ತೂರು ಜಿಲ್ಲಾ 5ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದಲ್ಲಿ ದೋಷರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 2013ರ ಆ. 14ರಂದು ಕರುಣಾ ಕರನಿಗೆ ಜೀವವಾಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಮಗು ಸಾಕ್ಷಿ ನುಡಿಯಿತು!
ವಿಚಾರಣೆ ವೇಳೆ ದಂಪತಿಯ ನಾಲ್ಕು ವರ್ಷದ ಹೆಣ್ಣು ಮಗು ನೀಡಿದ ಹೇಳಿಕೆಯನ್ನು ನ್ಯಾಯಾಲಯ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿತು. ಅಲ್ಲದೆ, ಅರುಣಾಶ್ರೀಯನ್ನು ಸಲಾಕೆಯಿಂದ ಹೊಡೆಯುವಾಗ ಮಗುವಿನ ಕಣ್ಣಿಗೂ ಗಾಯವಾಗಿದ್ದು ಪ್ರಕರಣಕ್ಕೆ ಪೂರಕ ಸಾಕ್ಷ್ಯವಾಗಿತ್ತು.

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next