Advertisement
ದೇವಾಲಯದ ಪ್ರಾದೇಶಿಕ ವೈಭವವನ್ನು ತೋರ್ಪಡಿಸುವಂತೆ ಈ ಸೀರೆಯ ವಿನ್ಯಾಸವನ್ನು ಮಾಡಿರುವುದು ಅಲ್ಲಿನ ನೇಯ್ಗೆಗಾರರ ವಿಶೇಷತೆ. ಈ ಭಾಗದಲ್ಲಿ 440ರಷ್ಟು ಕೈಮಗ್ಗದ ರೇಶಿಮೆ ಸೀರೆಯ ತಯಾರಕರಿದ್ದು, ಈ ಪ್ರದೇಶದ ಮುಖ್ಯ ವ್ಯವಹಾರ ಉದ್ದಿಮೆಯಾಗಿ ಮೊಳಕಾಲ್ಮೂರು ಸೀರೆ ಜನಪ್ರಿಯತೆ ಪಡೆದಿದೆ.
Related Articles
Advertisement
ಉದ್ದ ಅಂಚನ್ನು ಹೊಂದಿರುವ, ವಿವಿಧ ರಂಗಿನ ವಿನ್ಯಾಸದಲ್ಲಿ ಹೂವು, ಪ್ರಾಣಿ, ಪಕ್ಷಿ, ಹಣ್ಣುಗಳ ಚಿತ್ತಾರದಿಂದ ಕಂಗೊಳಿಸುವ ಮೊಳಕಾಲ್ಮೂರು ರೇಶಿಮೆ ಸೀರೆ ಸಾಂಪ್ರದಾಯಿಕ ಮೆರುಗನ್ನು ಹೊಂದಿರುವುದು ಮಹತ್ವಪೂರ್ಣ.ಚಿಕ್ಕ ಅಂಚನ್ನು ಹೊಂದಿರುವ ಸೀರೆಗಳೂ ಜನಪ್ರಿಯತೆ ಪಡೆದಿದ್ದು; ನವಿಲು, ಮಾವಿನಹಣ್ಣು ಹಾಗೂ ಬುಗುಡಿಯಾಕೃತಿಯ ವಿನ್ಯಾಸವನ್ನು ಹೊಂದಿರುತ್ತದೆ.
“ಮಹಾರಾಜಾ ನವಿಲಿನ ವಿನ್ಯಾಸ’ವನ್ನೇ ಮುಖ್ಯವಾಗಿ ಹೊಂದಿರುವ ಶುದ್ಧ ಮಲಬರಿ ರೇಶಿಮೆ ಸೀರೆಯು ಉತ್ಕೃಷ್ಟ ಗುಣಮಟ್ಟವನ್ನು ಹೊಂದಿದೆ. “ಬುಟ್ಟಾ’ ಸೀರೆಗಳೂ ಮೊಳಕಾಲ್ಮೂರು ಸೀರೆಯ ಒಂದು ವಿಶೇಷತೆ. ಪಾರಂಪರಿಕ ಹಾಗೂ ಕಂಪ್ಯೂಟರ್‌ಗಳಿಂದಲೂ ವಿನ್ಯಾಸ ಮಾಡಲಾಗುತ್ತಿರುವ ಇಂದಿನ ಮೊಳಕಾಲ್ಮೂರು ಬುಟ್ಟಾ ಸೀರೆಗಳು 2 ಅಂಚನ್ನೂ ಹೊಂದಿರುತ್ತದೆ. ಬುಟ್ಟಾ ಸೀರೆಗಳನ್ನು ಎರಡು ವೈವಿಧ್ಯಮಯ ರಂಗಿನ, ಕಾಂಟ್ರಾಸ್ಟ್ ಬಣ್ಣದ ನೂಲಿನಿಂದ ತಯಾರಿಸಲಾಗುತ್ತದೆ. ಮೊಳಕಾಲ್ಮೂರು ಸೀರೆಗಳನ್ನು ವಧುವಿಗಾಗಿಯೂ ತಯಾರಿಸಲಾಗುತ್ತದೆ. ಇದು ದುಬಾರಿ ವೆಚ್ಚದ ಸೀರೆಯಾಗಿದ್ದು ಉತ್ಕೃಷ್ಟ ಗುಣಮಟ್ಟದ ಜರಿಯನ್ನು ಬಳಸಿ ತಯಾರಿಸಲಾಗುತ್ತದೆ. ಅಂತೆಯೇ ವಧುವಿನ ಅಲಂಕಾರಕ್ಕೆ ಇದು ವೈಭವದ ಮೆರುಗನ್ನು ನೀಡುತ್ತದೆ. ಇಂದು ಮೊಳಕಾಲ್ಮೂರು ಸೀರೆ ಅಧಿಕವಾಗಿ ಬಳಕೆಯಾಗುವ ಪ್ರದೇಶಗಳೆಂದರೆ ಮೈಸೂರು, ಬೆಂಗಳೂರು, ಶಿವಮೊಗ್ಗ ಹಾಗೂ ಗುಲ್ಬರ್ಗಾ. ಇಲ್ಲಿ ಈ ಸಾಂಪ್ರದಾಯಿಕ ತೊಡುಗೆಯು ಮಹತ್ವಪೂರ್ಣವಾಗಿದೆ. ಈ ಸೀರೆಯು ಭಾರತದಾದ್ಯಂತ ಮಾರುಕಟ್ಟೆ ಹೊಂದಿದ್ದುದು ಕೂಡ ಇನ್ನೊಂದು ವಿಶೇಷ. ಅಮೆರಿಕ ಹಾಗೂ ಆಸ್ಟ್ರೇಲಿಯಾಗಳಿಗೆ ಅಧಿಕವಾಗಿ ರಫ್ತಾಗುವ ಈ ಸೀರೆ ಆಧುನಿಕತೆಗೆ ತಕ್ಕಂತೆ ಸಾಂಪ್ರದಾಯಿಕತೆಯ ಜೊತೆಗೆ ಹೊಸತನ್ನು ಅಳವಡಿಸಿಕೊಂಡು ಆಕರ್ಷಕತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇಂದು ಆನ್‌ಲೈನ್ ಸೌಲಭ್ಯಗಳಿಂದಾಗಿ ವಿಶ್ವಾದ್ಯಂತ ಎಲ್ಲೆಡೆಯೂ ಬೇಡಿಕೆಗೆ ತಕ್ಕಂತೆ ಮೊಳಕಾಲ್ಮೂರು ಸೀರೆಯ ಪೂರೈಕೆಯು ಸಾಧ್ಯವಾಗಿದೆ. ಈ ಒಂದು ಕಲಾತ್ಮಕ ಹಾಗೂ ಸಾಂಪ್ರದಾಯಿಕ ಸೀರೆಯ ಪಾರಂಪರಿಕ ಮಹತ್ವವನ್ನು ಉಳಿಸಿ ಬೆಳೆಸಲು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಕೈ ಜೋಡಿಸಿವೆ.
ಈ ಸೀರೆಯನ್ನು ತೊಡುವಾಗ, ಉಡುವ ಸೀರೆಗೆ ಸಾಂಪ್ರದಾಯಿಕ ಆಭರಣಗಳು ವಿಶೇಷ “ಲುಕ್’ ನೀಡುತ್ತವೆ. ಕತ್ತಿನ ಹಾರ, ಕಿವಿಯೋಲೆ ಹಾಗೂ ಸೊಂಟದ ಪಟ್ಟಿ ಸಾಂಪ್ರದಾಯಿಕ ವಿನ್ಯಾಸದೊಂದಿಗೆ ಈ ಸೀರೆಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಮೊಳಕಾಲ್ಮೂರು ಸೀರೆಯನ್ನು ಅಧಿಕ ಸಮಯ ಬಾಳಿಕೆ ಬರುವಂತೆ ಜತನದಿಂದ ಕಾಪಾಡಲು ಡ್ರೈಕ್ಲೀನ್ ವಿಧಾನ ಬಳಸಿದರೆ ಉತ್ತಮ. ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ, ತೇವಾಂಶ ಅಧಿಕವಿಲ್ಲದ ಹಾಗೂ ಅಧಿಕ ಉಷ್ಣತೆ ಇಲ್ಲದ ಪ್ರದೇಶದಲ್ಲಿ ಇರಿಸಿದರೆ ದೀರ್ಘಕಾಲವಾದರೂ, ರೇಶಿಮೆಯ ಹೊಳಪು, ನುಣುಪು ಹಾಗೂ ಮೆರುಗು ಮಾಸುವುದಿಲ್ಲ. ಹೀಗೆ ಕರುನಾಡಿನ ಸಾಂಪ್ರದಾಯಿಕ ಸೀರೆಯಾಗಿರುವ ಮೊಳಕಾಲ್ಮೂರು ಸೀರೆ ತನ್ನ ವಿಶಿಷ್ಟತೆಯೊಂದಿಗೆ ಜನಪ್ರಿಯವಾಗಿದೆ. ಅನುರಾಧಾ ಕಾಮತ್