ಮೊಳಕಾಲ್ಮೂರು: ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಮೊಳಕಾಲ್ಮೂರು ತಾಲೂಕಿನಲ್ಲಿ ಮಹಾಮಾರಿ ಕೊರೊನಾ ವೈರಸ್ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಾಲೂಕು ಆರೋಗ್ಯ ಇಲಾಖೆ ನಿರ್ಲಕ್ಷ್ಯ ತಾಳಿದೆ ಎಂಬ ಆರೋಪ ಕೇಳಿ ಬಂದಿದೆ.
ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿರುವ ತೆಲಂಗಾಣದ ಗಡಿ ಭಾಗದ ಆಂಧ್ರಪ್ರದೇಶದ ರಾಯದುರ್ಗ ತಾಲೂಕಿನಿಂದ ಜನರು ಮೊಳಕಾಲ್ಮೂರಿಗೆ ಭೇಟಿ ನೀಡುತ್ತಿರುತ್ತಾರೆ. ಆಂಧ್ರದ ರಾಯದುರ್ಗ ಮತ್ತು ಮೊಳಕಾಲ್ಮೂರು ತಾಲೂಕಿನ ಜನರ ಮಧ್ಯೆ ಒಡನಾಟವಿದೆ. ಅಲ್ಲದೆ ಹೆಚ್ಚಿನ ವ್ಯಾಪಾರ ವಹಿವಾಟು ಕೂಡ ನಡೆಯುತ್ತದೆ. ಕೊರೊನಾ ವೈರಸ್ ತಡೆಗೆ ರಾಜ್ಯ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಈ ಸೋಂಕು ಹರಡದಂತೆ ಜಿಲ್ಲೆ ಹಾಗೂ ವಿವಿಧ ತಾಲೂಕುಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರ ಸ್ವಕ್ಷೇತ್ರದಲ್ಲೇ ಕೊರೊನಾ ವೈರಸ್ ತಡೆಗೆ ಹೇಳಿಕೊಳ್ಳುವಂತಹ ಕ್ರಮ ಕೈಗೊಳ್ಳದೇ ಇರುವುದು ಕಂಡು ಬಂದಿದೆ.
ಈ ಬಗ್ಗೆ ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಡಾ|ಪದ್ಮಾವತಿಯವರನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮೇಲಂತಸ್ತಿನಲ್ಲಿನ ಒಂದು ಕೋಣೆಯ ಬಾಗಿಲಿಗೆ ಮಾತ್ರ ಕೊರೊನಾ ವೈರಸ್ ನಿಯಂತ್ರಣ ಕೊಠಡಿ ಎಂದು ಬರೆಯಲಾಗಿದೆ. ಆದರೆ ಆ ಕೋಣೆಯ ಒಳಗೆ ಆರು ಬೆಡ್ ಗಳನ್ನು ಮಾತ್ರ ಹಾಕಲಾಗಿದೆ. ಬೆಡ್‌ಗಳಿಗೆ ಹಾಸಿಗೆ, ಹೊದಿಕೆ ಹಾಕಿ ಸಿದ್ಧಗೊಳಿಸದೆ ಖಾಲಿ ಮಂಚಗಳನ್ನು ಹಾಕಲಾಗಿದೆ. ಕೊರೊನಾ ಸೋಂಕು ಹರಡದಂತೆ ಆಸ್ಪತ್ರೆಯಲ್ಲಿ ಕ್ರಮ ಕೈಗೊಳ್ಳದ ಬಗ್ಗೆ ವಿಚಾರಿಸಿದಾಗ ಬುಧವಾರ ಸಂಜೆ ಆಸ್ಪತ್ರೆಯ ಸಿಬ್ಬಂದಿ ಕೆಲ ಪರಿಕರಗಳನ್ನು ಹಾಕಲು ಮುಂದಾಗಿದ್ದರು. ಕೊರಾನಾ ಸೋಂಕು ಹರಡದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದವರು ಮುಂದಾಗಬೇಕಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ. ತಾಲೂಕು ಆಸ್ಪತ್ರೆಗಳಿಗೆ ಪಿ.ಪಿ.ಇ ಕಿಟ್ ನೀಡಲಾಗಿದೆ. ಕೊರೊನಾ ಬಗ್ಗೆ ಮೊಳಕಾಲ್ಮೂರು ತಾಲೂಕಿನಲ್ಲಿ ಜನ ಜಾಗೃತಿ ಮೂಡಿಸಲಾಗುವುದು.
ಡಾ| ಸಿ.ಎಲ್.
ಪಾಲಾಕ್ಷ, ಡಿಎಚ್‌ಒ