Advertisement

ಗರಿಗೆದರಿದ ರಾಜಕೀಯ ಚಟುವಟಿಕೆ

11:49 AM May 09, 2019 | Team Udayavani |

ಮೊಳಕಾಲ್ಮೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪಟ್ಟಣ ಪಂಚಾಯತ್‌ ಗಾದಿ ಹಿಡಿಯಲು ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ.

Advertisement

ಪಟ್ಟಣ ಪಂಚಾಯತ್‌ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಸ್ಪರ್ಧಾಕಾಂಕ್ಷಿಗಳಿಂದ ಅರ್ಜಿಗಳನ್ನೂ ಸ್ವೀಕರಿಸಲಾಗಿದೆ.

ಎರಡು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿರುವ ಪಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ನ‌ ಜಿ. ಪ್ರಕಾಶ್‌ ಸೇರಿದಂತೆ ಕೆಲವು ಮಾಜಿ ಸದಸ್ಯರು ಎರಡನೇ ಬಾರಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕ ಎಸ್‌. ತಿಪ್ಪೇಸ್ವಾಮಿ, ಜಿಪಂ ಸದಸ್ಯ ಡಾ| ಬಿ. ಯೋಗೇಶ್‌ಬಾಬು, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಎಸ್‌. ಖಾದರ್‌, ಹಿಂದೆ ಕಾಂಗ್ರೆಸ್‌ ತೊರೆದು ಮರಳಿ ಸೇರ್ಪಡೆಯಾಗಿರುವ ಹಿರಿಯ ನಾಯಕರಾದ ಕೆ. ಜಗಲೂರಯ್ಯ, ಅಬ್ದುಲ್ ಸುಭಾನ್‌ ಸಾಬ್‌, ಎಂ.ಎಸ್‌. ಮಾರ್ಕಂಡೇಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಟೇಲ್ ಜಿ. ಪಾಪನಾಯಕ ನೇತೃತ್ವದಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ತಂತ್ರ ರೂಪಿಸುತ್ತಿದ್ದಾರೆ.

ಮತ್ತೂಂದೆಡೆ ಈ ಬಾರಿ ಶತಾಯಗತಾಯ ಪಟ್ಟಣ ಪಂಚಾಯತ್‌ ಅನ್ನು ಕಮಲದ ತೆಕ್ಕೆಗೆ ತೆಗೆದುಕೊಳ್ಳಲೇಬೇಕೆಂದು ಹಠ ತೊಟ್ಟಿರುವ ಬಿಜೆಪಿ ಮುಖಂಡರು, ಶಾಸಕ ಬಿ. ಶ್ರೀರಾಮುಲು ಮಾರ್ಗದರ್ಶನದಲ್ಲಿ ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದಾರೆ. ಜಿಪಂ ಮಾಜಿ ಸದಸ್ಯ ಎಚ್.ಟಿ. ನಾಗಿ ರೆಡ್ಡಿ, ಬಿಜೆಪಿ ಮಂಡಲಾಧ್ಯಕ್ಷ ಟಿ. ರೇವಣ್ಣ ಮತ್ತಿತರ ಪ್ರಮುಖರು ತಮ್ಮ ಪಕ್ಷವನ್ನು ಗೆಲ್ಲಿಸಲು ಶ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ ಜಿದ್ದಾಜಿದ್ದಿ ಹಣಾಹಣಿಗೆ ಮೊಳಕಾಲ್ಮೂರು ಪಟ್ಟಣ ಸಾಕ್ಷಿಯಾಗಲಿದೆ.

ಹಿಂದೆ ಏನಾಗಿತ್ತು?
15 ಸದಸ್ಯ ಬಲದ ಪಪಂನಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ 6, ಬಿಎಸ್‌ಆರ್‌ಸಿ ಪಕ್ಷದ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಮತ್ತು ಜೆಡಿಎಸ್‌ ತಲಾ ಒಂದರಲ್ಲಿ ಜಯ ಗಳಿಸಿದ್ದರೆ, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು. ಆರಂಭದಲ್ಲಿ ಬಿಜೆಪಿ, ಜೆಡಿಎಸ್‌ ಹಾಗೂ ಓರ್ವ ಪಕ್ಷೇತರ ಸದಸ್ಯರ ಬೆಂಬಲ ಪಡೆದು ಬಿಎಸ್‌ಆರ್‌ಸಿ ಆಡಳಿತ ನಡೆಸಿತ್ತು. ಎರಡನೇ ಅವಧಿಗೆ ಜೆಡಿಎಸ್‌, ಬಿಜೆಪಿ ಹಾಗೂ ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್‌ಗೆ ಅಧಿಕಾರ ಭಾಗ್ಯ ಸಿಕ್ಕಿತ್ತು. ಪಟ್ಟಣದಲ್ಲಿ 6,239 ಪುರುಷರು ಹಾಗೂ 5,763 ಮಹಿಳಾ ಮತದಾರರಿದ್ದಾರೆ. ವಾರ್ಡ್‌ಗಳ ಸಮೀಕ್ಷೆ ನಡೆಸಿ 15 ವಾರ್ಡ್‌ಗಳಿಂದ 16 ವಾರ್ಡ್‌ಗಳಿಗೆ ಏರಿಕೆ ಮಾಡಲಾಗಿದೆ.

Advertisement

ಎಸ್‌. ರಾಜಶೇಖರ

Advertisement

Udayavani is now on Telegram. Click here to join our channel and stay updated with the latest news.

Next