ಮೊಳಕಾಲ್ಮೂರು: ಪಟ್ಟಣದಲ್ಲಿ ಹೆಸರಿಗಷ್ಟೇ ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಇದೆ. ಆದರೆ ಉದ್ಘಾಟನೆಯಾಗಿ ಏಳು ವರ್ಷವಾದರೂ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಗಡಿ ಭಾಗದ ಜನರ ಆರೋಗ್ಯ ರಕ್ಷಣೆ ಸಲುವಾಗಿ ಸರ್ಕಾರ ಕೋಟ್ಯಂತರ ರೂ. ವೆಚ್ಚದಲ್ಲಿ ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿದೆ. ಆದರೆ ಅಗತ್ಯ ಸೌಲಭ್ಯ, ವೈದ್ಯರು ಹಾಗೂ ಸಿಬ್ಬಂದಿಯನ್ನು ಒದಗಿಸಿಲ್ಲ. ಈ ಆಸ್ಪತ್ರೆ ಕೇವಲ 50 ಹಾಸಿಗೆಗಳನ್ನು ಮಾತ್ರ ಹೊಂದಿದ್ದು, ಜಿಪಂ ವ್ಯಾಪ್ತಿಗೆ ಒಳಪಟ್ಟಿದೆ. ನೂರು ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿದಲ್ಲಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಡಲಿದೆ. ಆಗ ಮತ್ತಷ್ಟು ಸೌಲಭ್ಯಗಳು ದೊರೆಯಲಿವೆ.
ತಾಲೂಕಿನ ಬಡವರು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ದೂರದ ನಗರ ಪ್ರದೇಶಗಳಿಗೆ ಹೋಗುವ ಅನಿವಾರ್ಯತೆ ಇದೆ. ಇದನ್ನು ತಪ್ಪಿಸಲು ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಗಿತ್ತು. ಆದರೆ ಇನ್ನೂ ಮೇಲ್ದರ್ಜೆಗೇರದೇ ಇರುವುದರಿಂದ ಸೌಲಭ್ಯಗಳು ಮರೀಚಿಕೆಯಾಗಿವೆ.
ಈಗಿರುವ 50 ಹಾಸಿಗೆಗಳ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ಚರ್ಮರೋಗ ತಜ್ಞರು, ಆಫೀಸ್ ಸೂಪರಿಡೆಂಡೆಂಟ್, ನರ್ಸಿಂಗ್ ಸೂಪರಿಡೆಂಡೆಂಟ್ (ಗ್ರೇಡ್-2), ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಕ್ಲರ್ಕ್ ಕಮ್ ಟೈಪಿಸ್ಟ್, ಸೀನಿಯರ್ ಫಾರ್ಮಸಿಸ್ಟ್, ಜೂನಿಯರ್ ಫಾರ್ಮಸಿಸ್ಟ್, ಸ್ಟಾಫ್ ನರ್ಸ್ ಹುದ್ದೆಗಳು ಭರ್ತಿಯಾಗಬೇಕಿದೆ. ದಂತ ವೈದ್ಯರು, ಇ.ಎನ್.ಟಿ ತಜ್ಞರು, ಫಿಜಿಷಿಯನ್, ಜನರಲ್ ಸರ್ಜನ್, 5 ಸ್ಟಾಫ್ ನರ್ಸ್ ಹಾಗೂ 10 ಜನ ನಾನ್ ಕ್ಲಿನಿಕ್ ಮತ್ತು 15 ಜನರು ಗ್ರೂಪ್ ಡಿ ಹುದ್ದೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಟ್ಟು 82 ಹುದ್ದೆಗಳ ಪೈಕಿ 27 ಜನರು ಕಾರ್ಯನಿರ್ವಹಿಸುತ್ತಿದ್ದಾರೆ.
ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದಲ್ಲಿ ಹೆಚ್ಚುವರಿಯಾಗಿ ಕಾರ್ನಿಯಾ ತಜ್ಞರು, ರೆಡಿಯಾಲಜಿಸ್ಟ್, ಸೀನಿಯರ್ ಡೆಂಟಲ್ ತಜ್ಞ, ಸೀನಿಯರ್ ಫಾರ್ಮಸಿಸ್ಟ್, ತುರ್ತು ಸೇವಾ ತಜ್ಞರು, ಸ್ಥಳೀಯ ನಿವಾಸಿ ವೈದ್ಯಾಧಿಕಾರಿ, ಸೀನಿಯರ್ ಎಕ್ಸ್‌ರೇ ತಜ್ಞರು, ಬ್ಲಿಡ್ ಬ್ಯಾಂಕ್ ತಜ್ಞರು, ತೀವ್ರ ನಿಗಾ ಘಟಕದ ತಜ್ಞ, ‘ಡಿ’ ದರ್ಜೆ ನೌಕರರು, ಶುಶ್ರೂಷಕರು, ಡಯಾಲಿಸಿಸ್ ಸಿಬ್ಬಂದಿಗಳನ್ನು ಪಡೆಯಬಹುದು. ಅಲ್ಲದೆ ಎರಡು ಆ್ಯಂಬುಲೆನ್ಸ್ ಹಾಗೂ ಶವ ಸಾಗಣೆ ವಾಹನ ಸೌಲಭ್ಯವೂ ಸಿಗುತ್ತದೆ. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಸಂಬಂಧಿಸಿದವರು ಇಚ್ಛಾಶಕ್ತಿ ತೋರಬೇಕಿದೆ.
ಈ ಭಾಗದ ಬಡವರು ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ಬೆಂಗಳೂರು ಆಸ್ಪತ್ರೆಗಳಿಗೆ ಹೋಗಬೇಕಿದೆ. ಆದ್ದರಿಂದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.
•
ಕೆ.ಜೆ. ಜಯಲಕ್ಷ್ಮೀ,
ಪ್ರೇರಣಾ ಸಂಸ್ಥೆ, ಮೊಳಕಾಲ್ಮೂರು
ಸರ್ಕಾರಿ ಆಸ್ಪತ್ರೆಯನ್ನು ನೂರು ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಅನುಮತಿ ನೀಡಿದರೆ ಈ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ದೊರೆಯಲಿದೆ.
•
ಡಾ| ತುಳಸಿರಂಗನಾಥ,
ತಾಲೂಕು ಆರೋಗ್ಯಾಧಿಕಾರಿ
ಸರ್ಕಾರದ ಗಮನಕ್ಕೆ ತಂದು ಈ ಆಸ್ಪತ್ರೆಯನ್ನು ನೂರು ಹಾಸಿಗೆಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನ ಮಾಡುತ್ತೇನೆ. ಈ ಭಾಗದ ಬಡ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತೇನೆ.
•
ಬಿ. ಶ್ರೀರಾಮುಲು, ಶಾಸಕರು