ಮೊಳಕಾಲ್ಮೂರು: ರಾಜ್ಯದ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಮ್ಮ ಸ್ವಕ್ಷೇತ್ರದಲ್ಲಿನ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗೆ 108 ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿರುವುದು ಈ ಕ್ಷೇತ್ರದ ದುರಂತ ಸಂಗತಿಯಾಗಿದೆ ಎಂದು ಪ್ರತಿಭಟನಾ ನಿರತ ಮುಖಂಡ ಜಿ. ಓಬಣ್ಣ ಆರೋಪಿಸಿದ್ದಾರೆ.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಎದುರು 108 ಆಂಬ್ಯುಲೆನ್ಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ರಸ್ತೆ ಅಪಘಾತದ ಗಾಯಾಳುಗಳು ಹಾಗೂ ರೋಗಿಗಳನ್ನು ಆಸ್ಪತ್ರೆಗೆ ಕರೆ ತರಲು ನಿಯೋಜಿಸಿರುವ 108 ಆಂಬ್ಯುಲೆನ್ಸ್ ಸೌಲಭ್ಯವಿಲ್ಲದ ಕಾರಣ ಜನತೆ ಕಂಗಾಲಾಗಿದ್ದಾರೆ. ಜೂ. 14 ರಂದು ತಾಲೂಕಿನ ನೇರ‌್ಲಹಳ್ಳಿ ಗ್ರಾಮದ ಸಮೀಪದ ಈರಣ್ಣನ ಮರಗಳ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 108 ತುರ್ತು ವಾಹನವು ಸಕಾಲಕ್ಕೆ ಬಾರದ ಕಾರಣ ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ.
ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೆ ಸುಮಾರು 6 ತಿಂಗಳಾದರೂ ಕ್ಷೇತ್ರದ ಶಾಸಕ, ಸಚಿವ ಬಿ.ಶ್ರೀರಾಮುಲು, ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷವಹಿಸಿದ್ದಾರೆ. ಈ ನಿರ್ಲಕ್ಷದಿಂದ ಅನಾರೋಗ್ಯಪೀಡಿತರು ಖಾಸಗಿ ವಾಹನಗಳಿಗೆ ಹೆಚ್ಚಿನ ಬಾಡಿಗೆ ಹಣ ತೆತ್ತು ದೂರದ ನಗರ ಪ್ರದೇಶದ ಆಸ್ಪತ್ರೆಗಳಿಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ. 108 ತುರ್ತು ವಾಹನವು ರಿಪೇರಿಗೆ ಹೋಗಿದೆ ಎಂದು ಹೇಳಿಕೊಂಡು ಗರ್ಭಿಣಿ ಮತ್ತು ಬಾಣಂತಿಯರಿಗೆ ಕಲ್ಪಿಸಿದ್ದ ನಗು ಮಗು ವಾಹನವನ್ನೇ ಬಳಸಿಕೊಂಡು ಆ ವಾಹನವೂ ಸಹ ರಿಪೇರಿ ಸ್ಥಿತಿಗೆ ತಲುಪಿದೆ. ಸಚಿವರು ಕೂಡಲೇ ತಾಲೂಕಿನ ಬಡ ಜನತೆಯ ಆರೋಗ್ಯ ರಕ್ಷಣೆಗಾಗಿ ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಮುಖಂಡ ಮೇಸ್ತ್ರಿ ಬೋರಣ್ಣ, ಓಬಣ್ಣ, ಮಹಮದ್ ರಫೀ, ಪಾಲಯ್ಯ, ಈರಣ್ಣ, ಗಣೇಶ್, ಮಹೇಶ್, ಬೋರಣ್ಣ, ಮರ‌್ಲಹಳ್ಳಿ ಓಬಣ್ಣ, ಬೋಸಯ್ಯ, ಸೂರಯ್ಯ, ರವಿ, ಮಹಾಂತೇಶ್, ಟ್ರ್ಯಾಕ್ಟರ್ ಬೋರಣ್ಣ ಹಾಗೂ ಹೆಚ್ಚಿನ ಸಾರ್ವಜನಿಕರು ಹಾಜರಿದ್ದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ನಿಯೋಜಿಸಿದ್ದ ಒಂದು ಆಂಬ್ಯುಲೆನ್ಸ್ ರಿಪೇರಿಗೆಂದು ತುಮಕೂರಲ್ಲಿದೆ. ಮತ್ತೊಂದು 108 ತುರ್ತು ವಾಹನದ ಚಾಲಕರು 4 ದಿನಗಳಿಗೊಮ್ಮೆ ರಜೆ ಮಾಡುವುದರಿಂದ ಲಭ್ಯವಿಲ್ಲದಾಗಿದೆ. ಈ ಕಾರಣದಿಂದ ನಗು ಮಗು ವಾಹನವನ್ನೇ ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು 108 ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು.
ಡಾ| ಪದ್ಮಾವತಿ, ತಾಲೂಕು
ಆರೋಗ್ಯಾಧಿಕಾರಿಗಳು,
ಮೊಳಕಾಲ್ಮೂರು