ಮೊಳಕಾಲ್ಮೂರು: ಬರ ನಾಡಿನ ಜನತೆಯ ಮಹತ್ಕಾಂಕ್ಷೆಯ ಶಾಶ್ವತ ಕುಡಿಯುವ ನೀರಿನ ತುಂಗಾ ಹಿನ್ನೀರಿನ ಯೋಜನೆಯ ಕಾಮಗಾರಿಯನ್ನು ತಾಲೂಕಿನಲ್ಲಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಹಶೀಲ್ದಾರ್ ಎಂ.ಬಸವರಾಜ್ ಮೆಗಾ ಕನ್‌ಸ್ಟ್ರಕ್ಷನ್‌ನ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇವರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ತುಂಗಾ ಹಿನ್ನೀರಿನ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಭೀಕರ ಬರ ತಾಲೂಕಿನ ಜನತೆಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ರವರು ಹೆಚ್ಚಿನ ಆದ್ಯತೆ ವಹಿಸಿ ತ್ವರಿತವಾಗಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದ ಮೇರೆಗೆ ಈ ಯೋಜನೆಯ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಈ ಯೋಜನೆಯ ಕಾಮಗಾರಿಗೆ ಯಾವುದೇ ಅಡೆತಡೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಸೂಚನೆ ನೀಡಿದರು.
ತಾಪಂನ ಇಒ ಪ್ರಕಾಶ್ ಮಾತನಾಡಿ, ತಾಲೂಕಿನಿಂದ ಹಾದು ಹೋಗುವ ತುಂಗಾ ಹಿನ್ನೀರಿನ ಕಾಮಗಾರಿಗೆ ಸಂಬಂಧಪಟ್ಟ ಅರಣ್ಯ, ಬೆಸ್ಕಾಂ, ಲೋಕೋಪಯೋಗಿ ಇಲಾಖೆ, ಬಿಎಸ್ ಎನ್‌ಎಲ್, ಸಾಮಾಜಿಕ ಅರಣ್ಯ, ಕಂದಾಯ ಹಾಗೂ ಇನ್ನಿತರ ಇಲಾಖೆಗಳಿಂದ ಏನಾದರೂ ತಡೆ ಇದ್ದಲ್ಲಿ ನಮ್ಮಗಳ ಗಮನಕ್ಕೆ ತಂದಲ್ಲಿ ಚರ್ಚಿಸಿ ಪರಿಹರಿಸಿ ಕಾಮಗಾರಿ ಕಾರ್ಯಕ್ಕೆ ಸಹಕಾರ ನೀಡಲಾಗುವುದು. ಪ್ರತಿ ತಿಂಗಳು ಈ ಬಗ್ಗೆ ಸಭೆ ಕರೆದು ಪರಿಹರಿಸಲಾಗುವುದು. ಈ ಕಾಮಗಾರಿ ಕೈಗೊಳ್ಳುವ ಸಂಬಂಧಪಟ್ಟ ಮೆಗಾ ಕನ್‌ಸ್ಟ್ರಕ್ಷನ್ ನ ಅಧಿಕಾರಿಗಳು ತ್ವರೀತವಾಗಿ ಈ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಮೆಗಾ ಕನ್‌ಸ್ಟ್ರಕ್ಷನ್ ನ ಜನರಲ್ ಮ್ಯಾನೇಜರ್ ವಿಜಯಕುಮಾರ್ ಮಾತನಾಡಿ, ತುಂಗಾ ಹಿನ್ನೀರಿನ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಈ ಕಾಮಗಾರಿ ಕಾರ್ಯಕ್ಕೆ 2,332 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈಗಾಗಲೇ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 309 ಕಿ.ಮೀ. ವರೆಗೂ ಪೈಪ್‌ಲೈನ್ ಹಾಕಬೇಕಿದೆ. ಈ ಪೈಕಿ 215 ಕಿ.ಮೀ ವರೆಗೆ ಪೈಪ್ ಲೈನ್ ಸರಬರಾಜು ಮಾಡಲಾಗಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಎ.ಇ.ಇ. ಸುಕುಮಾರ್ ಪವಾರ್, ವಲಯಾರಣ್ಯಾಧಿಕಾರಿ ನಾಗೇಂದ್ರ ನಾಯಕ, ಎ.ಇ.ಇ. ನಾಗರಾಜ್, ಲೋಕೋಪಯೋಗಿ ಇಲಾಖಾಧಿಕಾರಿ ಗಂಗಾಧರ, ಬೆಸ್ಕಾಂ ನ ಚಂದ್ರಕಾಂತ್, ಸಾಮಾಜಿಕ ಅರಣ್ಯಾಧಿಕಾರಿ ಗೋವಿಂದರಾಜ್, ಪ.ಪಂ.ನ ಮುಖ್ಯಾಧಿಕಾರಿ ಕಾಂತರಾಜ್, ಕಂದಾಯ ನಿರೀಕ್ಷಕರಾದ ಉಮೇಶ್, ಗೋಪಾಲ್, ಸಚಿವ ಬಿ.ಶ್ರೀರಾಮುಲು ಆಪ್ತ ಸಹಾಕ ಪಾಪೇಶ್,
ಪಾಲಯ್ಯ ಹಾಗೂ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.