ಮೊಳಕಾಲ್ಮೂರು: ತಾಲೂಕಿನ ಕಾಟನಾಯಕನಹಳ್ಳಿ ಮತ್ತು ರಾಂಪುರ ಗ್ರಾಮಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಒಂದು ಗಂಟೆ ನಂತರ ವರ್ತಕರು, ಬೀದಿ ಬದಿ ವ್ಯಾಪಾರಸ್ಥರು ಮತ್ತು ಆಟೋ ಚಾಲಕರು ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಸಹಕಾರ ನೀಡಬೇಕೆಂದು ತಹಶೀಲ್ದಾರ್ ಎಂ. ಬಸವರಾಜ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಲಾಕ್‌ಡೌನ್ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಪರಿಣಾಮ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ದಿನ ನಿತ್ಯ ಬೆಳಿಗ್ಗೆ 7 ರಿಂದ ಮಧ್ಯಾಹ್ನ ಒಂದು ಗಂಟೆವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿದೆ. ಕೋವಿಡ್ ನಿಯಂತ್ರಿಸಲು ಮಧ್ಯಾಹ್ನ ಒಂದು ಗಂಟೆಯಿಂದ ಬಂದ್ ಮಾಡುವ ಮೂಲಕ ಲಾಕ್‌ಡೌನ್ ಮಾಡಲಾಗುವುದು ಎಂದರು.
ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿರುವುದರಿಂದ ಆ ಪ್ರದೇಶಗಳಿಂದ ಬರುವವರಿಂದ ಅಂತರ ಕಾಯ್ದುಕೊಂಡು ಜಾಗರೂಕರಾಗಿರಬೇಕು. ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಿಎಸ್‌ಐ ಎಂ.ಕೆ. ಬಸವರಾಜ್ ಮಾತನಾಡಿ, ಜನತೆಯ ಆರೋಗ್ಯ ರಕ್ಷಣೆಗಾಗಿ ತಾಲೂಕು ಆಡಳಿತದೊಂದಿಗೆ ಸಹಕರಿಸಬೇಕು. ಹೊರ ಜಿಲ್ಲೆಯಿಂದ ಮತ್ತು ರಾಜ್ಯಗಳಿಂದ ಬರುವವರಿಗೆ ಮಾಸ್ಕ್ಗಳನ್ನು ಬಳಸಬೇಕೆಂದು ಅರಿವು ಮೂಡಿಸಬೇಕು. ಕೋವಿಡ್ ನಿಂದ ಆಗುವ ಅನಾಹುತಗಳನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದರು. ವರ್ತಕರ ಸಂಘದ ಅಧ್ಯಕ್ಷ ಮೇದಾರ ರಾಮು, ಸಂಘದ ಕೆ.ಟಿ. ರಾಜಶೇಖರ, ಪಪಂ ಮಾಜಿ ಸದಸ್ಯ ರಾಜಶೇಖರ ಗಾಯಕವಾಡ್, ಟೈಲರ್ ಬಸವರಾಜ್, ಅಶ್ವಿನಿ , ಎಂ.ಎಸ್. ನಾಗರಾಜ್, ರವಿ, ಬಸವರಾಜ್, ಆರೀಪುಲ್ಲಾ, ಅಬ್ದುಲ್ ಹಕೀಂ, ಬಿ.ಟಿ. ಶಿವಕುಮಾರ್, ಡಿ.ಎಚ್. ರಾಜು, ಹಫೀಜ್, ಇಸಾಕ್, ಕೆ.ಟಿ. ಮಂಜುನಾಥ, ಅಕ್ರಂವುಲ್ಲಾ, ಬೇಕರಿ ಸೈಫುಲ್ಲಾ ಮತ್ತಿತರರು ಇದ್ದರು.