Advertisement

ಜ್ಞಾನ ದೇಗುಲ ನಿರ್ವಹಣೆಗೆ ಸಿಬ್ಬಂದಿಯೇ ಇಲ್ಲ!

05:03 PM Oct 30, 2019 | Naveen |

ಮೊಳಕಾಲ್ಮೂರು: ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕು ಮೊಳಕಾಲ್ಮೂರಿನ ಕೇಂದ್ರ ಗ್ರಂಥಾಲಯ ಸಿಬ್ಬಂದಿ ಹಾಗೂ ಮೂಲ ಸೌಲಭ್ಯ ಕೊರತೆ ಎದುರಿಸುತ್ತಿದೆ.

Advertisement

ತಾಲೂಕು ಕೇಂದ್ರದಲ್ಲಿ ಕೇಂದ್ರ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ಹಲವು ದಶಕಗಳಿಂದ ಬಾಡಿಗೆ ಕಟ್ಟಡದಲ್ಲಿಯೇ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿತ್ತು. ಪಟ್ಟಣದ ಬುದ್ಧಿಜೀವಿಗಳು, ಹೋರಾಟಗಾರರು, ಪತ್ರಕರ್ತರು ಹಾಗೂ ಇಲಾಖಾಧಿಕಾರಿಗಳ ಪರಿಶ್ರಮದಿಂದ ಸಾಮರ್ಥ್ಯಸೌಧದ ಬಳಿ ತಾಲೂಕು ಪಂಚಾಯತ್‌ಗೆ ಸೇರಿದ್ದ ನಿರುಪಯುಕ್ತ ಕಟ್ಟಡವನ್ನು ತೆರವುಗೊಳಿಸಲಾಯಿತು.

2016-17ನೇ ಸಾಲಿನ ಇಲಾಖಾ ಮುಂದುವರಿಕೆ ಯೋಜನೆ ಅನುದಾನದಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಎರಡು ಅಂತಸ್ತಿನ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದೆ. ಸದ್ಯ ಗ್ರಂಥಾಲಯದಲ್ಲಿ 58 ಸಾವಿರ ಪುಸ್ತಕಗಳಿವೆ. ಚಿಕ್ಕ ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಲು ಕಾಮಿಕ್ಸ್‌ ಬುಕ್‌ಗಳನ್ನೂ ಇಡಲಾಗಿದೆ.

ನಾಡಿನ ಕವಿ, ಸಾಹಿತಿಗಳು ರಚಿಸಿದ ಉಪಯುಕ್ತವಾದ ಸಾಹಿತ್ಯ, ಕಾದಂಬರಿ, ನಾಟಕ, ವಿಡಂಬನೆ, ಹಾಸ್ಯ, ಆಧ್ಯಾತ್ಮಕ, ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆ ಪುಸ್ತಕಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಪುಸ್ತಕಗಳ ಸೌಲಭ್ಯ ಕಲ್ಪಿಸಲಾಗಿದೆ.

ಕಾನೂನು ಅರಿವಿಗಾಗಿ ಕಾನೂನು ಪುಸ್ತಕಗಳು, ಪದವಿ ತರಗತಿಯ ಪಠ್ಯಪುಸ್ತಕ ಸೇರಿದಂತೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತೆ ಸ್ಪರ್ಧಾತ್ಮಕ ಪುಸ್ತಕಗಳೂ ಇಲ್ಲಿವೆ.

Advertisement

ಸಿಬ್ಬಂದಿಯೇ ಇಲ್ಲ: ಓದುಗರಿಗೆ ಓದಲು ಹೆಚ್ಚಿನ ಪುಸ್ತಕಗಳು, ಆಸನ, ಕುಡಿಯುವ ನೀರು, ಶೌಚಾಲಯ, ಸಿಸಿ ಕ್ಯಾಮೆರಾ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ ಗ್ರಂಥಪಾಲಕರನ್ನು ವರ್ಗಾವಣೆ ಮಾಡಲಾಗಿದ್ದು, ಗ್ರಂಥಾಲಯ ಸಿಬ್ಬಂದಿಗಳ ಸೌಲಭ್ಯದಿಂದ ವಂಚಿತವಾಗಿದೆ. ಹೊರಗುತ್ತಿಗೆ ಆಧಾರದ ಗ್ರಂಥಸಹಾಯಕರೊಬ್ಬರೇ ಗ್ರಂಥಾಲಯವನ್ನು ನೋಡಿಕೊಳ್ಳಬೇಕಾದ ಸ್ಥಿತಿ ಇದೆ. ಈ ಗ್ರಂಥಾಲಯವನ್ನು ನಿರ್ವಹಣೆ ಮಾಡಬೇಕಾದ ಗ್ರಂಥಪಾಲಕರು, ಸಹಾಯಕರು ಹಾಗೂ ಜವಾನರ ಹುದ್ದೆಗಳು ಖಾಲಿ ಇವೆ.

ಚಳ್ಳಕೆರೆ ಗ್ರಂಥಾಲಯದ ಅ ಧಿಕಾರಿಯನ್ನು ವಾರಕ್ಕೆ ಎರಡ್ಮೂರು ದಿನ ನಿಯೋಜಿಸಲಾಗಿದ್ದು, ಬಹುತೇಕ ಓದುಗರಿಗೆ ಯಾವ ಪುಸ್ತಕಗಳು ಎಲ್ಲಿವೆ, ಹೇಗೆ ಪಡೆಯಬೇಕೆಂಬ ಮಾಹಿತಿಯೇ ಸಿಗುತ್ತಿಲ್ಲ. ಆದ್ದರಿಂದ ಜ್ಞಾನದೇಗುಲದ ಸೌಲಭ್ಯ ಸಮರ್ಪಕವಾಗಿ ದೊರೆಯಲು ಸಂಬಂಧಿಸಿದವರು ಕೂಡಲೇ ಸಿಬ್ಬಂದಿ ನೇಮಕಕ್ಕೆ ಮುಂದಾಗಬೇಕಿದೆ.

ಡಿಜಿಟಲ್‌ ಲೈಬ್ರರಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಕಂಪ್ಯೂಟರ್‌ ಜ್ಞಾನ ಇರುವ ತಂತ್ರಜ್ಞರ ಅಗತ್ಯವಿದೆ. ಪುಸ್ತಕಗಳ ಪ್ರತಿಗಳನ್ನು ಮುದ್ರಿಸಲು ಹಾಗೂ ಓದುಗರ ದಾಖಲಾತಿ ಪ್ರತಿಗಾಗಿ ಜೆರಾಕ್ಸ್‌ ಯಂತ್ರದ ಸೌಲಭ್ಯ ಕಲ್ಪಿಸಬೇಕಾಗಿದೆ. ಮೇಲಂತಸ್ತಿನ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಸ್ಪರ್ಧಾತ್ಮಕ ಪುಸ್ತಕಗಳ ಸೌಲಭ್ಯ ಕಲ್ಪಿಸುವ ಜೊತೆಗೆ ಮಹಿಳಾ ಓದುಗರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next