ಚಿತ್ರದುರ್ಗ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ.ಗೋಪಾಲ ಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಲೇ ಮೊಳ ಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಭಿನ್ನಮತ ಭುಗಿಲೆದ್ದಿದೆ. ಗೋಪಾಲಕೃಷ್ಣ ಮೊಳಕಾಲ್ಮೂರಿನಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳು ಕೆಲವು ದಿನಗಳಿಂದ ಕ್ಷೇತ್ರದಲ್ಲಿದ್ದವು. ಈಗ ಶಾಸಕ ಸ್ಥಾನಕ್ಕೆ ರಾಜೀ ನಾಮೆ ಸಲ್ಲಿಸಿರುವುದು ಅದಕ್ಕೆ ಇಂಬು ನೀಡಿದಂತಾಗಿದೆ. ಶಿರಸಿಯಲ್ಲಿ ಮಾತನಾಡುವಾಗ ವಯಸ್ಸಾಗಿದೆ, ಆರು ಬಾರಿ ಗೆದ್ದರೂ ಸಚಿವ ಸ್ಥಾನ ಸಿಗಲಿಲ್ಲ ಎಂಬ ಮಾತು ಗೊಂದಲ ಮೂಡಿಸಿದರೂ ರಾಂಪುರದ ಅವರ ನಿವಾಸದ ಬಳಿ ಬೆಂಬಲಿ ಗರು ಪಟಾಕಿ ಸಿಡಿಸಿ ಸಂಭ್ರಮಿಸಿರುವುದು ಮತ್ತೂಂದು ಅರ್ಥ ನೀಡುತ್ತಿದೆ.
ಇದೇ ವೇಳೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯೋಗೀಶ್‌ಬಾಬು ಬೆಂಬಲಿಗರು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದ ಮುಂದೆ ಜಮಾಯಿಸಿ ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಬಾರದೆಂಬ ಒತ್ತಾಯ ಮಾಡಿದ್ದಾರೆ. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆಯಾದ ಅನಂತರ ಮೊಳಕಾಲ್ಮೂರು ಕ್ಷೇತ್ರದಲ್ಲಿ ಭಾರೀ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಯೋಗೀಶ್‌ಬಾಬುಗೆ ತಿಪ್ಪೇಸ್ವಾಮಿ ಅಡ್ಡಗಾಲು ಹಾಕಬಹುದು ಎನ್ನುವ ಲೆಕ್ಕಾಚಾರ ನಡುವೆಯೇ ಅವರು ಪಕ್ಷ ತೊರೆ ದಿದ್ದು ಬಾಬು ಹಾದಿಯನ್ನು ಸುಗಮಗೊಳಿಸಿತ್ತು. ಮತ್ತೂಂದೆಡೆ ಇದೇ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದ ವಿ.ಎಸ್.ಉಗ್ರಪ್ಪ ತಟಸ್ಥರಾಗಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಗೋಪಾಲಕೃಷ್ಣ ಕಳೆದ ಬಾರಿ ಬಿಜೆಪಿ ಸೇರಿ ಕೂಡ್ಲಿಗಿ ಶಾಸಕರಾಗಿದ್ದರು. ಈಗ ಮತ್ತೆ ಮೊಳ ಕಾಲ್ಮೂರು ಕ್ಷೇತ್ರಕ್ಕೆ ಕಾಂಗ್ರೆಸ್ ಮೂಲಕ ಪಾದಾರ್ಪಣೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಯೋಗೀಶ್‌ಬಾಬು ಬೆಂಬಲಿ ಗರು ಹಾಗೂ ಕೆಲ ಕಾಂಗ್ರೆಸ್ ಕಾರ್ಯಕರ್ತರನ್ನು ರೊಚ್ಚಿ ಗೆಬ್ಬಿಸಿದೆ. ಮತ್ತೊಂದೆಡೆ ಎಮಾಜಿ ಸಂಸದ ಎನ್.ವೈ.ಹನುಮಂತಪ್ಪ ಪುತ್ರ ಎನ್.ವೈ.ಸುಜಯ್ ಕೂಡಾ ಮೊಳಕಾಲ್ಮೂರು ಟಿಕೆಟ್ ಆಕಾಂಕ್ಷಿಯಾಗಿದ್ದು ಮುಂದೆನಾಗಬಹುದು ಎನ್ನುವ ಕುತೂಹಲ ಮೂಡಿಸಿದೆ.
ಕಾರ್ಯಕರ್ತರ ಎಚ್ಚರಿಕೆ: ಈ ನಡುವೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆ ವೇಳೆ, ಮುಖಂಡರು ಮಾತನಾಡುತ್ತಿರುವಾ ಗಲೇ ಕಾರ್ಯಕರ್ತರು, ನಿಮ್ಮ ಭಾಷಣ ಬೇಕಾಗಿಲ್ಲ. ಯೋಗೀಶ್ ಬಾಬುಗೆ ಟಿಕೆಟ್ ಸಿಗುತ್ತೋ ಇಲ್ಲವೋ ತಿಳಿಸಿ, ಮೊದಲ ಪಟ್ಟಿಯಲ್ಲಿ ಯಾಕೆ ಪ್ರಕಟವಾಗಲಿಲ್ಲ. ಇನ್ನೆರಡು ದಿನ ಕಾದು ನೋಡುತ್ತೇವೆ. ಅಷ್ಟರಲ್ಲಿ ಸ್ಪಷ್ಟತೆ ಸಿಗದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಎಲ್ಲದಕ್ಕೂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಣೆಗಾರರಾಗ ಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಆದರೆ ಒಂದು ಕಾಲಕ್ಕೆ ಕಾಂಗ್ರೆಸ್ ಭದ್ರಕೋಟೆ ಯಾಗಿದ್ದ ಮೊಳಕಾಲ್ಮೂರು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಕ್ಷೇತ್ರ. ರಾಹುಲ್‌ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆ’ ಈ ಕ್ಷೇತ್ರದಲ್ಲಿ ಸಂಚರಿಸಿದ್ದು, ಇಲ್ಲಿ ಗೆಲ್ಲಲೇಬೇಕು ಎಂಬ ತೀರ್ಮಾನ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ಬಿಜೆಪಿಗೆ ಠಕ್ಕರ್ ಕೊಡಲು ಗೋಪಾಲಕೃಷ್ಣರ ಆಪರೇಶನ್ ಮಾಡಿರುವ ವದಂತಿಗಳಿವೆ.
-ತಿಪ್ಪೇಸ್ವಾಮಿ ನಾಕೀಕೆರೆ