Advertisement

ದಿಲ್ಲಿಯಲ್ಲಿ ಮೋಕ್ಷಂ

04:23 PM Dec 08, 2017 | Team Udayavani |

ಶಾಸ್ತ್ರೀಯತೆಯ ಪರಿಧಿಯಲ್ಲಿದ್ದು ಕೊಂಡು ನೃತ್ಯದಲ್ಲಿ ಅನೇಕ ಹೊಸ ಬಗೆಯ ಅನ್ವೇಷಣೆ ಗಳನ್ನು ಇಂದಿನ ಯುವ ಜನಾಂಗ ಮಾಡುತ್ತಾ ಬಂದಿದೆ. ಅಂಥ ಪ್ರಯತ್ನಗಳಲ್ಲಿ ವಿ| ಶ್ರಾವಣ್‌ ಉಳ್ಳಾಲ್‌ ಹಾಗೂ ಕಿರಣ್‌ ಉಳ್ಳಾಲ್‌ ಇವರ ಮೋಕ್ಷಂ ಕೂಡ ಒಂದು. ಶಾಸ್ತ್ರೀಯ ನೃತ್ಯ ಭರತನಾಟ್ಯ ಹಾಗೂ ಯಕ್ಷಗಾನವನ್ನು ಕೂಡಿಕೊಂಡು ನೀಡಿದಂತಹ ಪ್ರದರ್ಶನವಿದು.

Advertisement

ಇತ್ತೀಚೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಈ ಪ್ರಸ್ತುತಿಯು ವಿದ್ವಜ್ಜನ‌ರ ಸಮ್ಮುಖದಲ್ಲಿ ಪ್ರದರ್ಶನ ಗೊಂಡಿತು. ದೆಹಲಿ ಕರ್ನಾಟಕ ಸಂಘದಲ್ಲಿ ನಡೆದ “ಇಂದ್ರ ಧನುಷ್‌ ಫೆಸ್ಟಿವಲ್‌’ನಲ್ಲಿ ಮಂಗಳೂರಿನ ವಿ| ಶ್ರಾವಣ್‌ ಉಳ್ಳಾಲ್‌ ಹಾಗೂ ಕಿರಣ್‌ ಉಳ್ಳಾಲ್‌ ಈ “ಮೋಕ್ಷಂ’ ಪ್ರದರ್ಶನವಿತ್ತರು. ಭಾಗವತ ಪುರಾಣದಿಂದ ಆಯ್ದಂತಹ ಶ್ರೀ ಕೃಷ್ಣನ ಲೀಲೆಗಳ ಕಥಾಭಾಗಕ್ಕೆ “ಮೋಕ್ಷಂ’ ಎಂಬ ಶೀರ್ಷಿಕೆಯನ್ನು ನೀಡಲಾಗಿತ್ತು. ಇಲ್ಲಿ ಶ್ರಾವಣ್‌ ಉಳ್ಳಾಲರು ವಸುದೇವನಾಗಿ, ನಂದ ಮಹಾರಾಜನಾಗಿ, ಶ್ರೀಕೃಷ್ಣನಾಗಿ ಭರತನಾಟ್ಯದ ಮೂಲಕ ರಂಜಿಸಿದರು. ಕಿರಣ್‌ ಉಳ್ಳಾಲರು ಖಳ ಕಂಸನಾಗಿ, ಪೂತನಿಯಾಗಿ ಯಕ್ಷಗಾನದ ಮೂಲಕ ಪಾತ್ರವನ್ನು ನಿರ್ವಹಿಸಿದರು. ಕಂಸನ ಪ್ರವೇಶದಿಂದ ಆರಂಭಗೊಂಡ ಪ್ರಸ್ತುತಿಯು ಕಂಸನಿಗೆ ಕೇಳಿ ಬರುವಂತಹ ಅಶರೀರವಾಣಿ, ಕಂಸನಿಂದ ದೇವಕಿ ಹಾಗೂ ವಸುದೇವರ ಬಂಧನ, ಎಂಟನೆಯ ಮಗುವಾಗಿ ಕೃಷ್ಣನ ಜನನ, ಕಂದ ಕೃಷ್ಣನನ್ನು ಹೊತ್ತು ಗೋಕುಲಕ್ಕೆ ವಸುದೇವನ ಪಯಣ, ಪೂತನಿಯ ಪ್ರವೇಶ, ಪೂತನಿಯಿಂದ ಗೋಪಿಕಾ ಸ್ತ್ರೀಯ ಮಾರು ವೇಷಧಾರಣೆ, ಕೃಷ್ಣನಿಂದ ಪೂತನಿಯ ಪ್ರಾಣ ಹರಣ, ಕಂಸನಿಗೆ ಅಂತಕನಾಗಿ ಸ್ವಪ್ನದಲ್ಲಿ ಕಾಡುವ ಕೃಷ್ಣ, ಕೊನೆಯದಾಗಿ ಕೃಷ್ಣನಿಂದ ಕಂಸನ ಹನನ ದೊಂದಿಗೆ ಮಂಗಳ ಹಾಡಲಾಯಿತು. 

ನಿಖರ ಹೆಜ್ಜೆ ಗಾರಿಕೆಯೊಂದಿಗೆ ಶ್ರಾವಣ್‌ ಉಳ್ಳಾಲ್‌ ಗಮನಸೆಳೆದರೆ, ತಮ್ಮ ಅಭಿನಯದ ಮೂಲಕ ಕಿರಣ್‌ ಉಳ್ಳಾಲ್‌ ಮನಸೂರೆ ಗೊಂಡರು. ಈ ಎರಡೂ ಪ್ರಕಾರಗಳ ಆಂಗಿಕ, ವಾಚಿಕ, ಆಹಾರ್ಯ ಹಾಗೂ ಸಾತ್ವಿಕ ಅಭಿನಯಗಳಲ್ಲಿ ರಾಜಿ ಮಾಡಿಕೊಳ್ಳದೆ ಕಲೆಗೆ ಚ್ಯುತಿ ಬಾರದಂತೆ ಪ್ರದರ್ಶಿಸಿದ್ದು, ಈ ಇಬ್ಬರೂ ಕಲಾವಿದರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿತ್ತು. ಪ್ರಸ್ತುತಿಯು ಬಹುಜನರ ಮೆಚ್ಚುಗೆಗೆ ಪಾತ್ರವಾಯಿತು. ಇದನ್ನು ಪ್ರೇಕ್ಷಕರ ಕರತಾಡನ ಶ್ರುತಪಡಿಸಿತು. ದಿಲ್ಲಿಯ ಹವಾಮಾನ ವೈಪರೀತ್ಯವನ್ನು ಲೆಕ್ಕಿಸದೆ ಜನರು ಕಲಾಸಂಜೆಯ ರಸವನ್ನು ಸವಿದರು. 

ರೋಹಿಣಿ ಪ್ರವೀಣ್‌

Advertisement

Udayavani is now on Telegram. Click here to join our channel and stay updated with the latest news.

Next