ಚಿಕ್ಕಬಳ್ಳಾಪುರ: ಕೆಆರ್‌ಎಸ್ ಜಲಾಶಯ ನಿರ್ಮಾಣದ ಮೂಲಕ ಮಂಡ್ಯ, ಮೈಸೂರು ಸೇರಿ ಹಲವು ಜಿಲ್ಲೆಗಳಿಗೆ ನೀರೊದಗಿಸಿದ ವಿಶ್ವೇಶ್ವರಯ್ಯ ಅವರಂತ ಮಹನೀಯರು ಹುಟ್ಟಿದ ಚಿಕ್ಕಬಳ್ಳಾಪುರಕ್ಕೆ ನೀರೊದಗಿಸುವಲ್ಲಿ, ಕಾರ್ಖಾನೆಗಳನ್ನು ತರುವಲ್ಲಿ ಸಂಸದ ಎಂ.ವೀರಪ್ಪ ಮೊಯ್ಲಿ ವಿಫಲರಾಗಿದ್ದು, ಕ್ಷೇತ್ರಕ್ಕೆ ನೀರು ತರುವವರೆಗೂ ನಾನು ಸಾಯೊಲ್ಲ ಎನ್ನುವ ಮೊಯ್ಲಿ ಅತ್ತ ಸಾಯುವುದಿಲ್ಲ, ಇತ್ತ ನೀರು ಬರುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವ್ಯಂಗ್ಯವಾಡಿದರು.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಬೆಳಗ್ಗೆ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಪರ ನಗರದ ಮುಖ್ಯ ರಸ್ತೆಗಳಲ್ಲಿ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದ ಅವರು, ಎರಡು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿರುವ ಮೊಯ್ಲಿ ಕೊಡುಗೆ ಈ ಕ್ಷೇತ್ರಕ್ಕೆ ಶೂನ್ಯ ಎಂದರು.
ಸುಳ್ಳು ಹೇಳಿ ರಾಜಕಾರಣ: 10 ವರ್ಷಗಳಿಂದ ಎತ್ತಿನಹೊಳೆ ನೀರು ತರುತ್ತೇನೆಂದು ಹೇಳಿಕೊಂಡೇ ಈ ಭಾಗದ ರೈತಾಪಿ ಕೃಷಿ ಕೂಲಿಕಾರರಿಗೆ ಮೋಸ ಮಾಡಿದರು. ವಿಶ್ವೇಶ್ವರಯ್ಯ ಹುಟ್ಟಿ ಬೆಳೆದಿರುವ ಬಯಲುಸೀಮೆಗೆ ನೀರಾವರಿ ಯೋಜನೆಗಳನ್ನಾಗಲೀ, ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಇಲ್ಲಿನ ಜನೆತೆಗೆ ಸುಳ್ಳು ಹೇಳಿಕೊಂಡೇ ರಾಜಕೀಯ ಮಾಡುತ್ತಿದ್ದಾರೆ. ಇಂತಹವರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸಬೇಕೆಂದರು.
ರೋಡ್ ಶೋ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ, ಲೋಕಸಭಾ ಉಸ್ತುವಾರಿ ಸಚ್ಚಿದಾನಂದ ಮೂರ್ತಿ, ಸಂಚಾಲಕ ಆರ್.ಶ್ರೀನಿವಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ತಾಲೂಕು ಅಧ್ಯಕ್ಷ ಅಧ್ಯಕ್ಷ ಚಂದ್ರಶೇಖರ್, ನಗರ ಘಟಕದ ಅಧ್ಯಕ್ಷ ಎನ್.ಮಂಜುನಾಥ್, ಶ್ರೀನಿವಾಸ್, ಹನುಮಂತಪ್ಪ, ರಾಮಣ್ಣ, ಲಕ್ಷಿಪತಿ, ಕಲಾನಾಗರಾಜ್, ಪ್ರೇಮಲೀಲಾ, ಬೈರೇಗೌಡ, ಯುವ ಮೋರ್ಚಾದ ಸಿ.ಬಿ.ಕಿರಣ್, ಬಾಲು, ಎಬಿವಿಪಿ ವಿಭಾಗೀಯ ಕಾರ್ಯದರ್ಶಿ ಮಂಜುನಾಥರೆಡ್ಡಿ ಇದ್ದರು.
ರೋಡ್ ಶೋಗೆ ಕೈ ಕೊಟ್ಟ ಎಸ್.ಎಂ.ಕೃಷ್ಣ: ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ನಾಮಪತ್ರ ಸಲ್ಲಿಸಿದ ಬಳಿಕ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನದ ಮೂಲಕ ರೋಡ್ ಶೋ ನಡೆಸಿತು. ಆದರೆ ಅಭ್ಯರ್ಥಿ ಪರ ಮತಯಾಚನೆಗೆ ಆಗಮಿಸಬೇಕಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಹಾಗೂ ಚಿತ್ರನಟಿ ತಾರಾ ಮತ್ತಿತರರು ರೋಡ್ ಶೋಗೆ ಕೈ ಕೊಟ್ಟರು.
ಇದರಿಂದ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಆಗಮಿಸಿ ರೋಡ್ ಶೋ ನಡೆಸಿದರು. ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಜಮಾಯಿಸಿ ಮೈತ್ರಿ ಅಭ್ಯರ್ಥಿ ಮೊಯ್ಲಿ ವಿರುದ್ಧ ಬಲ ಪ್ರದರ್ಶನ ಮಾಡಿದರು. ನಗರದ ವಾಪಸಂದ್ರದಿಂದ ಆರಂಭಗೊಂಡ ಮರವಣಿಗೆ, ಎಂಜಿ ರಸ್ತೆ, ಗಂಗಮ್ಮ ಗುಡಿ, ಬಜಾರ್ ರಸ್ತೆ, ಬಿಬಿ ರಸ್ತೆಯಲ್ಲಿ ಸಂಚರಿಸಿದರು.