Advertisement

ಮೊಹಿದೀನ್‌ ನಿಸ್ವಾರ್ಥ ರಾಜಕಾರಣಿ:  ಸಿದ್ದರಾಮಯ್ಯ 

11:20 AM Jul 21, 2018 | Team Udayavani |

ಮಂಗಳೂರು: ಬಿ.ಎ. ಮೊಹಿದೀನ್‌ ಅವರು ರಾಜ್ಯಕಂಡ ಅತ್ಯಂತ ನಿಸ್ವಾರ್ಥ ರಾಜಕಾರಣಿ. ಎಲ್ಲ ವರ್ಗ ಹಾಗೂ ಜನಾಂಗದ ನಾಯಕರಾದ ಅವರ ಎಲ್ಲ ಆದರ್ಶಗಳು ಪ್ರತೀ ರಾಜಕಾರಣಿಗೆ ಬೆಳಕಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇತ್ತೀಚೆಗೆ ನಿಧನಹೊಂದಿದ ಉನ್ನತ ಶಿಕ್ಷಣ ಖಾತೆ ಮಾಜಿ ಸಚಿವ ಬಿ.ಎ. ಮೊಹಿದೀನ್‌ ಅವರಿಗೆ ಮಂಗಳೂರು ಪುರಭವನದಲ್ಲಿ ಶುಕ್ರವಾರ ಆಯೋಜಿಸಲಾದ “ನುಡಿ ನಮನ’ ಹಾಗೂ ಅವರ ಆತ್ಮಕಥೆ “ನನ್ನೊಳಗಿನ ನಾನು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಯಾರೂ ಅರ್ಜಿ ಸಲ್ಲಿಸಿ ಇಂಥದೇ ಜಾತಿಯಲ್ಲಿ ಜನಿಸುವುದಿಲ್ಲ. ಜಾತಿ, ಧರ್ಮಗಳಿಗೆ ಜೋತು ಬೀಳುವುದು ಮತಾಂಧರು. ಆದರೆ ಆದರ್ಶ ರಾಜಕಾರಣಿಗಳು ಹೀಗೆ ಮಾಡುವುದಿಲ್ಲ. ರಾಜಕಾರಣದಲ್ಲಿ ರಾಜಕೀಯ ಏರುಪೇರು ಆದರೂ ಅದನ್ನು ಸಮರ್ಥ
ವಾಗಿ ಎದುರಿಸುವ ಚಾಕಚಕ್ಯತೆ ಇರಬೇಕು. ಇಂದಿನ ದಿನಗಳಲ್ಲಿ ರಾಜಕೀಯ ಬದ್ಧತೆ ಇಲ್ಲದ ರಾಜಕಾರಣ ಮೇಳೈಸುತ್ತಿದೆ ಎಂದರು.
ವಿಧಾನಸಭಾಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌, ಮಾಜಿ ಸಚಿವ ಎಂ.ಸಿ. ನಾಣಯ್ಯ ಮಾತನಾಡಿ, ಬಿ.ಎ. ಮೊಹಿದೀನ್‌ ಅವರ ರಾಜಕೀಯ ಆದರ್ಶ ಹಾಗೂ ಅವರ ವ್ಯಕ್ತಿತ್ವ ನಮ್ಮೆಲ್ಲರಿಗೆ ದಾರಿದೀಪ ಎಂದರು. 

ಆತ್ಮಕಥೆ ಬಿಡುಗಡೆಗೊಳಿಸಿದ ಹಿರಿಯ ವಿದ್ವಾಂಸ ಡಾ| ಬಿ.ಎ. ವಿವೇಕ್‌ ರೈ ಮಾತನಾಡಿ, ಈ ಆತ್ಮಕಥೆಯಲ್ಲಿ ಮೊಹಿದೀನ್‌ ಅವರ ಸಾಮಾಜಿಕ ಬದುಕಿನ ಚಿತ್ರಣ, ಬಾಲ್ಯದ ಬದುಕು ಸಾಂಸ್ಕೃತಿಕ ಕರಾವಳಿಯ ಕಥನವನ್ನು ಕಟ್ಟಿ ಕೊಡುತ್ತವೆ. ಜಾತಿ ಸಂಘರ್ಷದ ಇಂದಿನ ದಿನಗಳಲ್ಲಿ ಜಿಲ್ಲೆ ಕಳೆದುಕೊಂಡ ಮೌಲ್ಯಗಳ ಆಕಾರ ಗ್ರಂಥವಾಗಿದೆ ಎಂದರು. 
ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯರಾದ ಬಿ.ಎಂ. ಫಾರೂಕ್‌, ಐವನ್‌ ಡಿ’ಸೋಜಾ, ಮೇಯರ್‌ ಭಾಸ್ಕರ್‌ ಕೆ., ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕರಾದ ಎನ್‌. ಯೋಗೀಶ್‌ ಭಟ್‌, ಮೊದಿನ್‌ ಬಾವಾ, ವಸಂತ ಬಂಗೇರ, ಜೆ.ಆರ್‌. ಲೋಬೋ, ಪ್ರಮುಖರಾದ ಸೈಯದ್‌ ಮುಹಮ್ಮದ್‌ ಬ್ಯಾರಿ, ವೈ. ಅಬ್ದುಲ್ಲಾ ಕುಂಞಿ, ಸದಾನಂದ ಪೂಂಜ, ಹರಿಕೃಷ್ಣ ಪುನರೂರು, ವಸಂತ ಆಚಾರಿ ಉಪಸ್ಥಿತರಿದ್ದರು. ಉಮರ್‌ ಟೀಕೆ ಪ್ರಸ್ತಾವನೆಗೈದರು. ಆಸೀಫ್‌ ಮಸೂದ್‌ ವಂದಿಸಿದರು. ಬಿ.ಎ. ಮುಹಮ್ಮದ್‌ ಆಲಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next