Advertisement

ಸ್ವಾತಂತ್ರ್ಯ ಮತ್ತು ಸಮಾನತೆಯ ಹೋರಾಟವನ್ನು ಸಾರುವ ಮೊಹರಂ

05:42 AM Sep 21, 2018 | |

ಮೊಹರಂ ಮುಖ್ಯವಾಗಿ ಸತ್ಯಕ್ಕಾಗಿ, ನ್ಯಾಯಕ್ಕಾಗಿ ನಿರಂಕುಶ ದಬ್ಟಾಳಿಕೆಯ ವಿರುದ್ಧ, ಧೀರತೆಯಿಂದ ಹೋರಾಡಿ, ಆತ್ಮಾರ್ಪಣೆ ಗೈದ ಹಝರತ್‌ ಇಮಾಂ ಹುಸೇನರನ್ನು ಸ್ಮರಿಸುವ ಜಾಗೃತಿಯ ದಿನವೂ, ಆ ಮಹಾನ್‌ ಚೇತನಕ್ಕೆ ಶ್ರದ್ಧಾಂಜಲಿಯನ್ನರ್ಪಿಸುವ ಪುಣ್ಯದ ದಿನವೂ ಆಗಿದೆ. 

Advertisement

ಇಸ್ಲಾಮಿನ ನಾಲ್ಕನೇ ಖಲೀಫ‌ರಾಗಿದ್ದ ಹಝರತ್‌ ಅಲಿ ಅವರು ಖೀಲಾಫ‌ತನ್ನು ನಿರ್ವಹಿಸಿದ ಅನಂತರ, ಐದನೇ ಖಲೀಫ‌ರಾಗಿ ಅಮೀರ್‌ ಮುಅವಿಯಾರವರು ಆಯ್ಕೆಯಾದರು. ಅಮೀರ್‌ ಮುಅವಿಯಾರವರು ಮರಣಿಸಿದ 
ಬಳಿಕ ನಾಯಕತ್ವದ ಯಾವ ಅರ್ಹತೆಯೂ ಇಲ್ಲದ ಅವರ ಪುತ್ರ ದುಷ್ಟ ಯಝೀದನು ಸರ್ವಾಧಿಕಾರಿಯಾದನು. ಆದರೆ ಹಝರತ್‌ ಅಲಿಯವರ ಸುಪುತ್ರ, ಇಮಾಂ ಹುಸೇನರಿಗೆ ಕೂಫಾದ ನಾಯಕತ್ವ ದೊರೆಯಬೇಕಿತ್ತು. ಹಝರತ್‌ ಇಮಾಂ ಹುಸೇನರು ಮಾತ್ರ ಆಧ್ಯಾತ್ಮಿಕ ವಿಚಾರಗಳಲ್ಲಿಯೇ ತಲ್ಲೀನರಾಗಿ ಕಾಲ ಕಳೆಯುತ್ತಿದ್ದರು. ಅಧಿಕಾರದ ಲಾಲಸೆ ಅವರಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಆದರೆ ಇಸ್ಲಾಮೀ ದೇಶದ ಆಡಳಿತ ಸೂತ್ರವನ್ನು ಕೈಗೆತ್ತಿಕೊಂಡ ದುಷ್ಟ ಯಝೀದನು ಅಧಿಕಾರ ದಾಹದಿಂದ ಧರ್ಮ, ನ್ಯಾಯ, ನೀಡಿ ಇವುಗಳನ್ನೆಲ್ಲಾ ಮರೆತು ತನ್ನ ಇಚ್ಛಾನುಸಾರವಾಗಿ, ಇಸ್ಲಾಮಿನ ಉನ್ನತ ಮೌಲ್ಯಗಳ ವಿರುದ್ಧವಾಗಿಯೇ ರಾಜ್ಯಭಾರವನ್ನು ನಿರ್ವಹಿಸುತ್ತಿದ್ದನು. 

ಅಧಿಕಾರ ಗದ್ದುಗೆಯನ್ನೇರಿದ ದುಷ್ಟ ಯಝೀದನ ದುರಾಡಳಿತದಿಂದ ಪ್ರಜೆಗಳು ಕಂಗೆಟ್ಟರು. ಕೂಫಾದ ಜನರ ಒತ್ತಾಯಕ್ಕೆ ಮಣಿದು ಹಝರತ್‌ ಇಮಾಂ ಹುಸೇನರು ತನ್ನ ತಾತರು ರೂಪಿಸಿದ ರಾಜಕೀಯ ಸ್ಥಿರತೆಯ ಪುನರುತ್ಥಾನಕ್ಕಾಗಿ ದುಷ್ಟ ಯಝೀದನ ವಿರುದ್ಧ ಹೋರಾಡಬೇಕಾದುದು ಅಂದು ಅನಿವಾರ್ಯವಾಗಿತ್ತು.
ಹಿಜರೀ ಶಕ ಅರುವತ್ತೂಂದರ ಮೊಹರಂ ತಿಂಗಳ ಹತ್ತರಂದು ಇರಾಕ್‌ ದೇಶದ ಯುಪ್ರಟಿಸ್‌ ನದೀ ತೀರದ ಕರ್ಬಲಾ ಮೈದಾನದಲ್ಲಿ ಯುಝೀದನ ಅಸಂಖ್ಯಾತ ಸೈನಿಕರನ್ನು ಹಝರತ್‌ ಇಮಾಂ ಹುಸೇನರು ಕೇವಲ ತನ್ನ ಎಪ್ಪತ್ತೆರಡು ಮಂದಿ ಅನುಯಾಯಿಗಳ ಜತೆಗೆ ಎದುರಿಸಿದರು. ಇದು ಹಝರತ್‌ ಇಮಾಂ ಹುಸೇನರು ಅನ್ಯಾಯದ ವಿರುದ್ಧ ನಡೆಸಿದ ಭೀಕರ ಹೋರಾಟವಾಗಿತ್ತು. ಈ ಕದನದಲ್ಲಿ ಸೋಲು ತನ್ನ ಪಾಲಿಗೆ ಖಚಿತವೆಂದು ಇಮಾಂ ಹುಸೇನರು ಭಾವಿಸಿದ್ದರೂ ಅದು ಸತ್ಯ, ನ್ಯಾಯ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಸಿದ ಅಪೂರ್ವ ಕದನವಾಗಿತ್ತು. ಹಝರತ್‌ ಇಮಾಂ ಹುಸೇನರು ಕರ್ಬಲಾ ರಣಾಂಗಣದಲ್ಲಿ, ವೀರಾವೇಶದಿಂದ ಹೋರಾಡಿ ಮೊಹರಂ ಹತ್ತರಂದು ಹುತಾತ್ಮರಾದರು.

ಹಝರತ್‌ ಇಮಾಂ ಹುಸೇನರು ಇಸ್ಲಾಮಿನ ಉನ್ನತ ಮೌಲ್ಯಗಳ ಸಂಸ್ಥಾಪನೆಗಾಗಿ ವೀರಾವೇಶದ ಹೋರಾಟದ ಮೂಲಕ ಅಮರ ಜ್ಯೋತಿಯೊಂದನ್ನು ಹೊತ್ತಿಸಿ ಹೋದರು. ಅವರು ಹುತಾತ್ಮರಾಗಿ ಇಂದು ಸಾವಿರದ ನಾನ್ನೂರು ವರ್ಷಗಳು ಸಂದರೂ ಆ ಜ್ಯೋತಿಯು ಇನ್ನೂ ನಂದದೇ ಅಮರವಾಗಿಯೇ ಉಳಿದಿದೆ. 

ಪ್ರವಾದಿ ಇಬ್ರಾಹಿಮರು ಇರಾಕ್‌ ದೇಶದ ಆಗಿನ ರಾಜನಾಗಿದ್ದ ದುಷ್ಟ ನಮೂದನ ನಿರಂಕುಶ ಪ್ರಭುತ್ವಕ್ಕೆ ಮಣಿಯದಿರಲು ಅವರನ್ನು ಉರಿಯುವ ಅಗ್ನಿ ಕುಂಡಕ್ಕೆ ದೂಡಿ ಕೊಲ್ಲಲು ಯತ್ನಿಸಿರುವುದೂ ಮೊಹರಂ ಹತ್ತರಂದು. ಆದರೆ ಪ್ರವಾದಿ ಇಬ್ರಾಹಿಮರು ಮಾತ್ರ ಪವಾಡ ಸದೃಶರಾಗಿ ಈ ಅನಾಹುತದಿಂದ ಪಾರಾಗಿ ಮನುಕುಲಕ್ಕೆ ಸತ್ಯ ಮತ್ತು ನ್ಯಾಯವನ್ನು ಲೀಲಾಜಾಲವಾಗಿ ತೋರಿಸಿಕೊಟ್ಟ ಮಹತ್ವದ ದಿನವೂ ಮೊಹರಂ ಹತ್ತರಂದೇ ಆಗಿದೆ. ಪ್ರವಾದಿ ಮೂಸಾರವರ ಬೋಧನೆಗಳನ್ನು ಧಿಕ್ಕರಿಸಿ ನಡೆದ ಸರ್ವಾಧಿಕಾರಿ ಫಿರ್‌ಔನನು ನೈಲ್‌ ನದಿಯಲ್ಲಿ ಮುಳುಗಿ ನಾಶವಾದ ದಿನವೂ ಮೊಹರಂ ಹತ್ತರಂದೇ ಆಗಿದೆ. ಒಟ್ಟಿನಲ್ಲಿ ಇತಿಹಾಸದುದ್ದಕ್ಕೂ ವಿಪತ್ತುಗಳು, ವಿನಾಶಗಳು ಮತ್ತು ಅನುಗ್ರಹಗಳು ಘಟಿಸಿ ಹೋದ ದಿನ ಮೊಹರಂ ಹತ್ತು. ಇದು ನಿರಂಕುಶ ಪ್ರಭುತ್ವಕ್ಕೆ, ಕೊಡಲಿ ಏಟನ್ನಿತ್ತ ಚಾರಿತ್ರಿಕ ದಿನವೂ, ಪ್ರಜಾಸತ್ತೆಯ ಅಭೂತಪೂರ್ವ ವಿಜಯದ ದಿನವೂ ಆಗಿದೆ. ಮೊಹರಂ ಹತ್ತು ಸರ್ವಾಧಿಕಾರಿ ಆಡಳಿತದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಅದ್ಭುತ ರಮ್ಯ ಕ್ಷಣ
ಗಳನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತದೆ. ಒಟ್ಟಿನಲ್ಲಿ ಮೊಹರಂನ ಇತಿಹಾಸವು ಸ್ವಾತಂತ್ರ್ಯ ಹಾಗೂ ಸಮಾನತೆಯ ಪ್ರೇಮಿಗಳಿಗೆ ಸ್ಫೂರ್ತಿದಾಯಕವಾಗಿದೆ. 

Advertisement

ಹಝರತ್‌ ಇಮಾಂ ಹುಸೇನರು ತನ್ನ ಬದುಕಿನುದ್ದಕ್ಕೂ ತೋರಿದ ಅಪೂರ್ವ ತ್ಯಾಗದ ಸ್ಫೂರ್ತಿಯು, ಮಾನವ ಬದುಕಿಗೆ ಇಂದು ಅಗತ್ಯವಾಗಿದೆ. ಸತ್ಯ ಹಾಗೂ ನ್ಯಾಯವನ್ನು ಬೆಂಬಲಿಸಿ, ಅಸತ್ಯ ಹಾಗೂ ಅನ್ಯಾಯವನ್ನು ವಿರೋಧಿಸಿ, ಸಮಾಜದಲ್ಲಿ ಪ್ರಾಮಾಣಿಕವಾಗಿ ಜೀವಿಸುವುದೇ ಬದುಕಿನ ಗುರಿ. ಸಾಮಾಜಿಕ ಹಿತಾಸಕ್ತಿಗಾಗಿ ಮಾಡುವ ತ್ಯಾಗವು, ಮನುಷ್ಯನಿಗೆ ಜೀವನದಲ್ಲಿ, ಸುಭಿಕ್ಷೆಯನ್ನೂ ನೆಮ್ಮದಿಯನ್ನೂ, ಆತ್ಮಸಂತೃಪ್ತಿಯನ್ನೂ ನೀಡಬಲ್ಲದು. 
ಮೊಹರಂ ತನ್ನ ವಿಶಾಲ ಅರ್ಥದಲ್ಲಿ ಸತ್ಯ, ನ್ಯಾಯ ಮತ್ತು ಸ್ವಾತಂತ್ರ್ಯ ಪ್ರೇಮದ ಉನ್ನತ ಆದರ್ಶಗಳನ್ನು ಮನುಕುಲಕ್ಕೆ ಸಾರುತ್ತದೆ. ಸತ್ಯ, ನ್ಯಾಯ ಮತ್ತು ಧರ್ಮದ ಉದಾತ್ತ ಆದರ್ಶಗಳನ್ನು ನಾವು ನಿತ್ಯದ ಬದುಕಿನಲ್ಲಿ ರೂಢಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಮತ್ತು ಅರ್ಥಪೂರ್ಣವಾಗುತ್ತದೆ. ಹಝರತ್‌ ಇಮಾಂ ಹುಸೇನರು ಸ್ವಾಭಿಮಾನವನ್ನೂ, ಉನ್ನತ ಆದರ್ಶಗಳನ್ನೂ ಬದುಕಿನಲ್ಲಿ ರೂಢಿಸಿಕೊಂಡಿದ್ದರು. ಆ ಆದರ್ಶಗಳಿಗಾಗಿಯೇ ಅವರು ಜೀವಿಸಿದರು, ಹೋರಾಡಿದರು ಮತ್ತು ಕರ್ಬಲಾ ರಣಾಂಗಣದಲ್ಲಿ ಹುತಾತ್ಮರಾಗಿ ವೀರ ಮರಣವನ್ನಪ್ಪಿದರು. ಹಝರತ್‌ ಇಮಾಂ ಹುಸೇನರ ಆದರ್ಶ ಜೀವನ ಮತ್ತು ಸ್ವಾಭಿಮಾನದ ಪ್ರತಿಷ್ಠೆಯು ಮಾನವ ಜೀವನಕ್ಕೆ ಸದಾ ಮಾರ್ಗದರ್ಶನ ನೀಡಬಲ್ಲದು.

* ಕೆ.ಪಿ. ಅಬ್ದುಲ್‌ ಖಾದರ್‌, ಕುತ್ತೆತ್ತೂರು

Advertisement

Udayavani is now on Telegram. Click here to join our channel and stay updated with the latest news.

Next