ಬೆಂಗಳೂರು: “ಐಟಿ ಕ್ಯಾಪಿಟಲ್’ ಖ್ಯಾತಿಯ ಬೆಂಗಳೂರು ನಗರ ಮೂಲಸೌಕರ್ಯಗಳ ಕೊರತೆ ಬಗ್ಗೆ ಖ್ಯಾತ ಐಟಿ ಉದ್ಯಮಿ ಹಾಗೂ ಮಣಿಪಾಲ್ ಗ್ಲೋಬಲ್ ಎಜುಕೇಷನ್‌ನ ಅಧ್ಯಕ್ಷ ಟಿ. ವಿ. ಮೋಹನ್‌ದಾಸ್ ಪೈ ಅವರ ಟ್ವೀಟ್ ಪ್ರಸ್ತಾಪಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ಯೋಗ್ಯತೆಯನ್ನು ಪ್ರಶ್ನಿಸಿದ್ದಾರೆ.
ಬೆಲೆ ಏರಿಕೆ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಈ ವಿಷಯ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
“ಬೆಂಗಳೂರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಎಂದು ಮೋಹನದಾಸ್ ಪೈ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ಹಣೆಬರಹ ಎಲ್ಲಿಗೆ ಬಂದಿದೆ ನೋಡಿ. ಇದು ಈ ಬಿಜೆಪಿ ಸರ್ಕಾರ ಯೋಗ್ಯತೆ.
ಬೆಂಗಳೂರಿನಲ್ಲಿ ಸರ್ಕಾರ ಕೆಲಸ ಮಾಡಲು ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಬೇಕು, ಇಲ್ಲವೇ ಹೈಕೋರ್ಟ್ ನಿರ್ದೇಶನ ನೀಡಬೇಕು. ಎಂತಹ ಸ್ಥಿತಿಗೆ ಬೆಂಗಳೂರನ್ನು ತಂದಿಟ್ಟಿದ್ದಾರೆ ಈ ಬಿಜೆಪಿಯವರು. ಮೋಹನ್‌ದಾಸ್ ಪೈ ಅವರ ಟ್ವೀಟ್ ಸರ್ಕಾರಕ್ಕೆ ಕನ್ನಡಿ ತೋರಿಸಿದೆ ಎಂದು ಕುಮಾರಸ್ವಾಮಿ ಬಿಜೆಪಿ ವಿರುದ್ದ ಹರಿಹಾಯ್ದರು.
ಪೈ ಟ್ವೀಟ್ ಏನಿತ್ತು:
“69 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿರುವ ಬೆಂಗಳೂರು ಮೂಲಭೂತ ಸೌಕರ್ಯಗಳಿಲ್ಲದೆ ಕೊರಗುತ್ತಿದೆ’ ಎಂದು ಟ್ವೀಟ್ ಮಾಡಿದ್ದ ಮೋಹನದಾಸ್ ಪೈ ಅದನ್ನು ಪ್ರಧಾನಿ ಮೋದಿಯವರಿಗೂ ಟ್ಯಾಗ್ ಮಾಡಿದ್ದರು. ಈ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆ, ಬೀದಿ ದೀಪ ಸೇರಿದಂತೆ ಮೂಸೌಕರ್ಯಗಳು ಸಮರ್ಪಕವಾಗಿಲ್ಲ. ಬಿಬಿಎಂಪಿ, ಬಿಡಿಎ ಸೇರಿ ಎಲ್ಲೇ ಏನೇ ಕೆಲಸ ಮಾಡಿಸಿಕೊಳ್ಳಬೇಕಾದರೆ ಲಂಚ ಕೊಡಬೇಕು. ಇದೆಂತಹ ಸರ್ಕಾರ. ಹಿಂದೆ ಕಾಂಗ್ರೆಸ್ಸೂ ಇದೇ ಮಾಡಿತ್ತು. ಈಗ ಬಿಜೆಪಿಯೂ ಅದನ್ನೇ ಮಾಡುತ್ತಿದೆ ಎಂದು ತುಂಬಾ ಕಟು ಮಾತುಗಳಲ್ಲಿ ಹೇಳಿದ್ದರು.