Advertisement

Mohammad Amir; ನಿವೃತ್ತಿಯಿಂದ ಹೊರಬಂದ ಆಮಿರ್; ಟಿ20 ವಿಶ್ವಕಪ್ ಗೆ ರೆಡಿ ಎಂದ ಪಾಕ್ ವೇಗಿ

01:01 PM Mar 25, 2024 | Team Udayavani |

ಇಸ್ಲಮಾಬಾದ್: ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಆಮಿರ್ ಅವರು ನಿವೃತ್ತಿ ವಾಪಾಸ್ ಪಡೆದಿದ್ದಾರೆ. ಈ ವರ್ಷದ ಜೂನ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಆಡಲು ತಾನು ಸಿದ್ದ ಎಂದು ಹೇಳಿದ್ದಾರೆ.

Advertisement

2020ರ ಅಂತ್ಯದಲ್ಲಿ ಆಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಪಾಕಿಸ್ಥಾನ ತನ್ನ ರಾಷ್ಟ್ರೀಯ ಕ್ರಿಕೆಟ್‌ ಆಯ್ಕೆ ಸಮಿತಿಯನ್ನು ವಿಸರ್ಜಿಸಿದ ಕೆಲವೇ ಕ್ಷಣಗಳಲ್ಲಿ ಆಮಿರ್ ತನ್ನ ನಿವೃತ್ತಿ ಹಿಂಪಡೆದ ನಿರ್ಧಾರವನ್ನು ಬಹಿರಂಗ ಮಾಡಿದ್ದಾರೆ.

“ಕೆಲವೊಮ್ಮೆ ನಾವು ನಮ್ಮ ನಿರ್ಧಾರಗಳನ್ನು ಮರುಪರಿಶೀಲಿಸಬೇಕಾದ ಹಂತಗಳಿಗೆ ಜೀವನವು ನಮ್ಮನ್ನು ತರುತ್ತದೆ. ನನ್ನ ಮತ್ತು ಪಿಸಿಬಿ ನಡುವೆ ಕೆಲವು ಸಕಾರಾತ್ಮಕ ಚರ್ಚೆಗಳು ನಡೆದಿವೆ, ಅಲ್ಲಿ ಅವರು ಗೌರವಯುತವಾಗಿ ನಾನು ಇನ್ನೂ ಆಡಬಹುದು ಎಂದು ಅನಿಸುವಂತೆ ಮಾಡಿದರು. ಕುಟುಂಬ ಮತ್ತು ಹಿತೈಷಿಗಳೊಂದಿಗೆ ಚರ್ಚಿಸಿದ ನಂತರ ನಾನು ಟಿ20 ವಿಶ್ವಕಪ್ ಗಾಗಿ ಪರಿಗಣಿಸಲು ಲಭ್ಯವಿದ್ದೇನೆ ಎಂದು ಘೋಷಿಸುತ್ತೇನೆ” ಎಂದು ಆಮಿರ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಆಲ್ ರೌಂಡರ್ ಇಮಾದ್ ವಾಸಿಂ ಕೂಡಾ ನಿವೃತ್ತಿಯಿಂದ ಹೊರಬರುವ ನಿರ್ಧಾರ ಘೋಷಿಸಿದ್ದರು. ಅವರು ಕೂಡಾ ಮುಂಬರುವ ಟಿ20 ವಿಶ್ವಕಪ್ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಆಯ್ಕೆ ಸಮಿತಿ ವಿಸರ್ಜನೆ

Advertisement

ಪಾಕಿಸ್ಥಾನ ತನ್ನ ರಾಷ್ಟ್ರೀಯ ಕ್ರಿಕೆಟ್‌ ಆಯ್ಕೆ ಸಮಿತಿಯನ್ನು ವಿಸರ್ಜಿಸಿದೆ. ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪಿಸಿಬಿ ಇಂಥದೊಂದು ಕ್ರಮಕ್ಕೆ ಮುಂದಾದದ್ದು ಅಚ್ಚರಿಗೆ ಕಾರಣವಾಗಿದೆ.

ರವಿವಾರ ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಮತ್ತು ಮುಖ್ಯ ಆಯ್ಕೆಗಾರ ವಹಾಬ್‌ ರಿಯಾಜ್‌ ನಡುವೆ ನಡೆದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಟಿ20 ವಿಶ್ವಕಪ್‌ ಪಂದ್ಯಾವಳಿಗೂ ಸ್ವಲ್ಪ ಮೊದಲು ನೂತನ ಆಯ್ಕೆ ಸಮಿತಿಯನ್ನು ರಚಿಸುವುದಾಗಿ ಪಿಸಿಬಿ ಮೂಲಗಳು ತಿಳಿಸಿವೆ.

ಅಫ್ರಿದಿ ನಾಯಕತ್ವ ಅನುಮಾನ

ಇದೇ ವೇಳೆ ವೇಗಿ ಶಾಹಿನ್‌ ಶಾ ಅಫ್ರಿದಿ ಪಾಕಿಸ್ಥಾನ ಟಿ20 ನಾಯಕರಾಗಿ ಮುಂದು ವರಿಯುವ ಸಾಧ್ಯತೆ ಕಡಿಮೆ ಎಂಬುದಾಗಿ ಮೊಹ್ಸಿನ್‌ ನಖ್ವಿ ಸೂಚನೆ ನೀಡಿದ್ದಾರೆ. ಕೀಪರ್‌ ಮೊಹಮ್ಮದ್‌ ರಿಜ್ವಾನ್‌ ಸೀಮಿತ ಓವರ್‌ಗಳ ತಂಡದ ನಾಯಕರಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next