ಇಸ್ಲಮಾಬಾದ್: ಪಾಕಿಸ್ಥಾನದ ಎಡಗೈ ವೇಗಿ ಮೊಹಮ್ಮದ್ ಆಮೀರ್ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಆಮೀರ್ ಇನ್ನು ಮುಂದೆ ನಿಗದಿತ ಓವರ್ ಮಾದರಿಯ ಕ್ರಿಕೆಟ್ ನಲ್ಲಿ ಮಾತ್ರ ಅಡಲಿದ್ದಾರೆ.
ಸಾಂಪ್ರದಾಯಿಕ ಕ್ರಿಕೆಟ್ ಮಾದರಿಯಲ್ಲಿ ಪಾಕಿಸ್ಥಾನವನ್ನು ಪ್ರತಿನಿಧಿಸಿದ್ದು ನನಗೆ ನಿಜಕ್ಕೂ ಹೆಮ್ಮೆಯ ವಿಷಯ. ಏಕದಿನ ಮತ್ತು ಟಿ – ಟ್ವೆಂಟಿ ಕ್ರಿಕೆಟ್ ಗೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ನಾನು ಟೆಸ್ಟ್ ಕ್ರಿಕೆಟ್ ಅನ್ನು ತೊರೆಯುವ ನಿರ್ಧಾರ ಮಾಡಿದ್ದೇನೆ ಎಂದು ಆಮಿರ್ ವಿದಾಯದ ಬಳಿಕ ಹೇಳಿದ್ದಾರೆ.
2009ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡುವಾಗ ಆಮಿರ್ ಗೆ 17 ವರ್ಷ. ಆಡಿದ 36 ಪಂದ್ಯಗಳಿಂದ 119 ವಿಕೆಟ್ ಪಡೆದಿದ್ದಾರೆ. 27ರ ಹರೆಯದ ಆಮಿರ್ ಮುಂದಿನ ವರ್ಷ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಅನ್ನು ಯೋಚನೆಲ್ಲಿರಿಸಿ ವಿದಾಯ ನಿರ್ಧಾರ ಕೈಗೊಂಡಿದ್ದಾರೆ.
2010ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಅಪರಾಧಕ್ಕಾಗಿ ಆಗಿನ ಪಾಕ್ ನಾಯಕ ಸಲ್ಮಾನ್ ಭಟ್, ಮೊಹಮ್ಮದ್ ಆಸಿಫ್ ಜೊತೆ ಆಮೀರ್ ಜೈಲು ವಾಸ ಅನುಭವಿಸಿದ್ದರು. 2016ರಲ್ಲಿ ಮತ್ತೆ ಪಾಕ್ ತಂಡ ಸೇರಿದ ಆಮೀರ್ ತನ್ನ ಕಮ್ ಬ್ಯಾಕ್ ಪಂದ್ಯ ಆಡಿದ್ದು ಅದೇ ಲಾರ್ಡ್ಸ್ ಮೈದಾನದಲ್ಲಿ. ಅದಾದ ನಂತರ 22 ಟೆಸ್ಟ್ ಪಂದ್ಯವಾಡಿದ ಆಮಿರ್ 68 ವಿಕೆಟ್ ಪಡೆದಿದ್ದಾರೆ.