ಮೊಹಾಲಿ: ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ ರವೀಂದ್ರ ಜಡೇಜಾ ಮತ್ತು ಇತರ ಬೌಲರ್ ಗಳ ನೆರವಿನಿಂದ ಭಾರತ ತಂಡ ಪ್ರವಾಸಿ ಲಂಕಾ ವಿರುದ್ಧದ ಮೊಹಾಲಿ ಟೆಸ್ಟ್ ಪಂದ್ಯವನ್ನು ಕೇವಲ ಮೂರೇ ದಿನದಲ್ಲಿ ಗೆದ್ದುಕೊಂಡಿದೆ. ಭಾರತೀಯ ಸ್ಪಿನ್ನರ್ ಗಳ ದಾಳಿಗೆ ಕಂಗಾಲಾದ ಶ್ರೀಲಂಕಾ ಇನ್ನಿಂಗ್ಸ್ ಮತ್ತು 222 ರನ್ ಅಂತರದ ಸೋಲು ಕಂಡಿದೆ. ಇದರೊಂದಿಗೆ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಸಾಧಿಸಿದೆ.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಲಂಕಾ ಮೊದಲ ಇನ್ನಿಂಗ್ಸ್ ನಲ್ಲಿ 174 ರನ್ ಮತ್ತು ಫಾಲೋ ಆನ್ ಪಡೆದು ಎರಡನೇ ಇನ್ನಿಂಗ್ಸ್ ನಲ್ಲಿ 178 ರನ್ ಗೆ ಆಲೌಟಾಯಿತು.
ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಗೆ 108 ರನ್ ಗಳಿಸಿದ್ದ ಲಂಕಾ ಇಂದು ಸತತ ವಿಕೆಟ್ ಕಳೆದುಕೊಂಡಿತು. ಪತ್ತುನ್ ನಿಸಾಂಕ ಅವರು ಅರ್ಧಶತಕವೊಂದೇ ಲಂಕಾ ಇನ್ನಿಂಗ್ಸ್ ನ ಹೈಲೈಟ್ಸ್. ಅವರು ಅಜೇಯ 61 ರನ್ ಗಳಿಸಿದರು. ಕೊನೆಯ ನಾಲ್ಕು ಬ್ಯಾಟರ್ ಗಳು ಶೂನ್ಯಕ್ಕೆ ಔಟಾದರು. ರವೀಂದ್ರ ಜಡೇಜಾ ಐದು ವಿಕೆಟ್ ಕಿತ್ತರೆ, ಬುಮ್ರಾ ಮತ್ತು ಅಶ್ವಿನ್ ತಲಾ ಎರಡು ವಿಕೆಟ್ ಕಿತ್ತರು. ಒಂದು ವಿಕೆಟ್ ಶಮಿ ಪಾಲಾಯಿತು.
ಇದನ್ನೂ ಓದಿ:ವಾರ್ನ್ ಕೋಣೆ ಮತ್ತು ಸ್ನಾನದ ಟವೆಲ್ ನಲ್ಲಿ ರಕ್ತದ ಕಲೆಗಳು ಪತ್ತೆ; ಥಾಯ್ಲೆಂಡ್ ಪೊಲೀಸರು
400 ರನ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಲಂಕಾ ಎರಡನೇ ಮತ್ತೆ ಸುಧಾರಣೆ ಕಾಣಲಿಲ್ಲ. ಜಡೇಜಾ ಮತ್ತು ಅಶ್ವಿನ್ ದಾಳಿಗೆ ನಲುಗಿದ ಲಂಕನ್ ಆಟಗಾರರು ಸತತ ವಿಕೆಟ್ ಒಪ್ಪಿಸಿದರು. 51 ರನ್ ಗಳಿಸಿದ ವಿಕೆಟ್ ಕೀಪರ್ ನಿರೋಶನ್ ಡಿಕವೆಲ್ಲಾ ಅವರದ್ದೇ ಗರಿಷ್ಠ ಗಳಿಕೆ. ಉಳಿದಂತ ಧನಂಜಯ ಡಿಸಿಲ್ವ 30 ರನ್, ಮ್ಯಾಥ್ಯೂಸ್ 28 ರನ್, ನಾಯಕ ಕರುಣರತ್ನೆ 27 ರನ್ ಗಳಿಸಿದರು.
ಭಾರತದ ಪರ ಜಡೇಜಾ ಮತ್ತು ರವಿ ಅಶ್ವಿನ್ ತಲಾ ನಾಲ್ಕು ವಿಕೆಟ್ ಪಡೆದರೆ, ಶಮಿ ಎರಡು ವಿಕೆಟ್ ಕಿತ್ತರು. ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.
ಅಶ್ವಿನ್ ದಾಖಲೆ: ಲಂಕಾದ ಅಸಲಂಕಾ ವಿಕೆಟ್ ಕಿತ್ತ ವೇಳೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಮಾದರಿಯಲ್ಲಿ 435ನೇ ವಿಕೆಟ್ ಪಡೆದರು. ಇದರೊಂದಿಗೆ ಮಾಜಿ ನಾಯಕ ಕಪಿಲ್ ದೇವ್ ಅವರ 434 ವಿಕೆಟ್ ದಾಖಲೆಯನ್ನು ಅಶ್ವಿನ್ ಹಿಂದಿಕ್ಕಿದರು. ಈ ಮೂಲಕ ಅನಿಲ್ ಕುಂಬ್ಳೆ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಭಾರತೀಯನೆನಿಸಿದರು.
ಒಟ್ಟಾರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್ 9ನೇ ಸ್ಥಾನದಲ್ಲಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅಶ್ವಿನ್ 12ನೇ ಸ್ಥಾನದಲ್ಲಿದ್ದರು. ರಿಚರ್ಡ್ ಹ್ಯಾಡ್ಲಿ (431), ರಂಗನಾ ಹೆರಾತ್ (432), ಮತ್ತು ಕಪಿಲ್ ದೇವ್ (434) ದಾಖಲೆ ಮುರಿದ ಅಶ್ವಿನ್ 9ನೇ ಸ್ಥಾನಕ್ಕೇರಿದ್ದಾರೆ.