Advertisement

ಮೊಗ್ರಾಲ್‌ ಕುಡಿಯುವ ನೀರಿನ ಯೋಜನೆ ಟ್ಯಾಂಕ್‌ಗೆ ಸೀಮಿತ !

01:18 AM Apr 30, 2019 | Team Udayavani |

ಕುಂಬಳೆ: 2001ರಿಂದ 2016ರ ಅವಧಿಯಲ್ಲಿ ತ್ರಿಸ್ತರ ಪಂಚಾಯತ್‌ ವತಿಯಿಂದ ಮತ್ತು ಶಾಸಕರ ನಿಧಿಯಿಂದ ಕುಂಬಳೆ ಗ್ರಾಮ ಪಂಚಾಯತ್‌ನ ಮೊಗ್ರಾಲಿನ ವಿವಿಧೆಡೆಗಳಲ್ಲಿ ಸುಮಾರು 50 ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಕೈಗೊಂಡ ಕುಡಿಯುವ ನೀರಿನ ವಿವಿಧ ಯೋಜನೆಗಳು ವ್ಯರ್ಥವಾಗಿವೆೆ. ಕುಡಿಯುವ ನೀರಿನ ಯೋಜನೆಯಲ್ಲಿ ಕೆಲವೆಡೆ ಕೇವಲ ಟ್ಯಾಂಕ್‌ಗಳನ್ನು ಮಾತ್ರ ನಿರ್ಮಿಸಲಾಗಿದೆ.

Advertisement

ಮೊಗ್ರಾಲಿನ ಎರಡು ಪರಿಶಿಷ್ಟ ಜಾತಿ ಕಾಲನಿಗಳ ಸಹಿತ ನಾಲ್ಕು ಕುಡಿಯುವ ನೀರಿನ ಯೋಜನೆಗಳು ಅಪೂರ್ಣವಾಗಿ ಹಳ್ಳ ಹಿಡಿದಿವೆೆ. ಕುಂಬಳೆ ಗ್ರಾಮ ಪಂಚಯತ್‌ನ 17, 18, 19ನೇ ವಾರ್ಡಿಗೊಳಪ್ಪಟ್ಟ ಮೊಗ್ರಾಲ್‌ ಕುಡಿಯುವ ನೀರಿನ ಯೋಜನೆಯಲ್ಲಿ ಕೈಗೊಂಡ ಕಾಡಿಯಂಕುಳಂ, ರಹಮತ್‌ ನಗರ, ಬನ್ನಾತ್ತಕಡವು ಮತ್ತು ಕೊಪ್ಪಳ ಗಾಂಧಿನಗರಗಳಲ್ಲಿ ಕೇವಲ ಟ್ಯಾಂಕ್‌ ಮಾತ್ರ ನಿರ್ಮಿಸಲಾಗಿದೆ. ಈ ಪ್ರದೇಶಗಳಲ್ಲಿ ಕೆಲವೊಂದು ಕೊಳವೆಬಾವಿ ಮತ್ತು ಕೊಳವಿದ್ದರೂ ಇದರಿಂದ ನೀರು ಈ ವರೆಗೆ ಕಾಂಕ್ರೀಟ್‌ ಟ್ಯಾಂಕ್‌ಗೆ ಹರಿದಿಲ್ಲ. ಸಂಬಂಧಪಟ್ಟವರಲ್ಲಿ ಹಲವು ಬಾರಿ ವಿನಂತಿಸಿದರೂ ಸಮಸ್ಯೆಗೆ ಪರಿಹಾರವಾಗಿಲ್ಲ.

ಕಾಡಿಯಂಕುಳಂ ಯೋಜನೆಯನ್ನು ಎಸ್ಟಿಮೇಟಿನ ಲೋಪದ ನೆಪದಲ್ಲಿ 2003ರಲ್ಲಿ ಜಿಲ್ಲಾ ಪಂಚಾಯತ್‌ ಯೋಜನೆಯನ್ನು ಅರ್ಧದಲ್ಲಿ ಮೊಟಕುಗೊಳಿಸಿದೆ.

ಅರ್ಧದಲ್ಲಿದ್ದ ರಹಮತ್‌ ನಗರದ ಕುಡಿಯುವ ನೀರು ಯೋಜನೆಯನ್ನು ಬ್ಲಾಕ್‌ ಪಂಚಾಯತ್‌ ಬಳಿಕ ಕೈಗೆತ್ತಿ ಬಾತಿಷಾ ಕುಡಿಯುವ ನೀರಿನ ಯೋಜನೆಯಾಗಿ ಮರು ನಾಮಕರಣ ಮಾಡಿ ಹೊಸಯೋಜನೆಯಾಗಿ ಮಾರ್ಪಡಿಸಿದರೂ ಇದು ಇನ್ನೂ ಅಪೂರ್ಣವಾಗಿದೆ.

ಕೊಪ್ಪಳ ಗಾಂಧಿನಗರ ಎಸ್‌.ಸಿ.ಕಾಲನಿಯ ಕುಡಿಯುವ ನೀರಿನ ಯೋಜನೆ ಕೇವಲ ಟ್ಯಾಂಕ್‌ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿದೆ.

Advertisement

ಬಣ್ಣತ್ತಾನಂಕಡವು ಪರಿಶಿಷ್ಟ ಜಾತಿ ಕಾಲನಿಲಯಲ್ಲಿ,ಓರ್ವ ಖಾಸಗಿ ವ್ಯಕ್ತಿ ನೀಡಿದ ಸ್ಥಳದಲ್ಲಿ 2015-16ನೇ ಆರ್ಥಿಕ ವರ್ಷದಲ್ಲಿ ಸರಕಾರದ ನಿಧಿಯಿಂದ ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲಾಗಿದೆ. ಟ್ಯಾಂಕ್‌ ನಿರ್ಮಿಸಿ ಪೈಪ್‌ ಅಳವಡಿಸಲಾಗಿದೆ. ಆದರೆ ಕಾಲನಿ ವಾಸಿಗಳಿಗೆ ನೀರು ಮಾತ್ರ ಇನ್ನೂ ಹರಿದೇ ಇಲ್ಲ.

2014ರಲ್ಲಿ ಮಂಜೇಶ್ವರ ಶಾಸಕರ ನಿಧಿಯಲ್ಲಿ ಕಾಡಿಯಂಕುಳಂ ಎಂಬಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ ಸ್ಥಳೀಯ ಕೃಷಿಕರಿಗಾಗಿ ಕೊಳವೊಂದನ್ನು ನಿರ್ಮಿಸಿದೆ. ಆದರೆ ಇದು ಕೂಡ ಕೃಷಿಕರಿಗೆ ಉಪಯೋಗವಾಗದೆ ಕೇವಲ ಇಂಗು ಗುಂಡಿಯಾಗಿ ಉಳಿದಿದೆ. ಈ ಕೊಳಕ್ಕೆ ಮೋಟಾರ್‌ ಮತ್ತು ಪೈಪ್‌ ಅಳವಡಿಸದೆ ಭ್ರಷ್ಟಾಚಾರ ನಡೆಸಲಾಗಿದೆ ಎಂಬುದಾಗಿ ಕೃಷಿಕರ ಆರೋಪವಾಗಿದೆ.

ಅವ್ಯವಹಾರ ಆರೋಪ
ಕುಡಿಯುವ ನೀರಿನ ಯೋಜನೆ ಎಂಬುದಾಗಿ ಕೇವಲ ಕಾಂಕ್ರಿಟ್‌ ಟ್ಯಾಂಕ್‌ ಮಾತ್ರ ನಿರ್ಮಿಸಿ ಗುತ್ತಿಗೆದಾರರೊಂದಿಗೆ ಚುನಾಯಿತರು ಶಾಮೀಲಾಗಿ ಜೇಬು ತುಂಬಿಸುವ ಈ ಯೋಜನೆಯ ಅವ್ಯವಹಾರವನ್ನು ಸಮಗ್ರ ತನಿಖೆಗೊಳಪಡಿಸಬೇಕೆಂಬುದಾಗಿ ಸ್ಥಳೀಯ ಮೊಗ್ರಾಲ್‌ ದೇಶೀಯವೇದಿ ಸಂಘಟನೆ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದೆ. ಒಟ್ಟಿನಲ್ಲಿ ಗಾಳಿ, ನೀರಿನೊಂದಿಗೂ ಹರಿದಾಡುವ ಭ್ರಷ್ಟಾಚಾರ‌ ನಿಗ್ರಹಕ್ಕೆ ಕಡಿವಾಣ ಇಲ್ಲವಾಗಿದೆ.

ಅವ್ಯವಹಾರ ನಡೆದಿದೆ
ಕೇವಲ ಗುತ್ತಿಗೆದಾರರಿಗಾಗಿ ಮಾತ್ರ ಕೈಗೊಂಡ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿರುವುದಾಗಿ ವಿಜಿಲೆನ್ಸ್‌ ತನಿಖೆಯಿಂದ ಬಹಿರಂಗಗೊಂಡಿದೆ.ಆದರೆ ಈ ತನಕ ಅವ್ಯವಹಾರ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿಲ್ಲ. ಆದುದರಿಂದ ಜಿಲ್ಲಾಧಿಕಾರಿಯವರು ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
-ಎಂ. ಮೂಸಾ ಮೊಗ್ರಾಲ್‌, ಮಾಜಿ ಸದಸ್ಯರು ಕುಂಬಳೆ ಗ್ರಾಮ ಪಂಚಾಯತ್‌

ಸ್ಥಳ ದಾನ ನೀಡಿದರೂ ನೀರಿಗೆ ವ್ಯವಸ್ಥೆಯಿಲ್ಲ
ಗಾಂಧೀನಗರದ ಕುಡಿಯುವ ನೀರಿನ ಯೋಜನೆಗಾಗಿ ತನ್ನ 4 ಸೆಂಟ್ಸ್‌ ಸ್ವಂತ ಸ್ಥಳವನ್ನು ಉಚಿತವಾಗಿ ನೀಡಿರುವೆ. ಆದರೆ ಇಲ್ಲಿ ಕೇವಲ ಟ್ಯಾಂಕ್‌ಮಾತ್ರ ನಿರ್ಮಿಸಿ ಭ್ರಷ್ಟಾಚಾರ ನಡೆಸಲಾಗಿದೆ. ಈ ಅವ್ಯವಹಾರದ ತನಿಖೆಯಾಗಬೇಕಿದೆ.
-ಎ. ಅಬ್ದುಲ್‌ ಖಾದರ್‌, ಸ್ಥಳ ನೀಡಿದರೂ ನೀರು ದೊರೆಯದೆ ವಂಚನೆಗೊಳಗಾದ ಬೆಸ್ತ

Advertisement

Udayavani is now on Telegram. Click here to join our channel and stay updated with the latest news.

Next