Advertisement

ಮೋಗ್‌ ಕರ್ನ್ ಕಾಜಾರ್‌ ಜಾಲ್ಯಾಂವ್‌ ಕಾಜಾರ್‌ ಝಾವ್ನ್ ಮೋಗ್‌ ಕೆಲೊ

07:23 PM Feb 13, 2020 | Sriram |

ಮಂಗಳೂರು ಜೆಪ್ಪು ಬಳಿ ಚರ್ಚ್‌ನ ಸಮೀಪ ಒಳರಸ್ತೆಯೊಂದರಲ್ಲಿ ಕೊಂಚ ಸಾಗಿದರೆ ಸಾಕು, “ಪ್ರೋಸ್ಪೆರೊ’ ಫ‌ಲಕ ಇರುವ ಮನೆ ಸಿಗುತ್ತದೆ. “ಯೆಯಾ ಯೆಯಾ’ ಎಂದು ಬರಮಾಡಿ ಕೊಳ್ಳುತ್ತಾರೆ ಮನೆಯ ಯಜಮಾನ ಮಾಂಡ್‌ ಸೋಭಾಣ್‌ ಖ್ಯಾತಿಯ ಎರಿಕ್‌ ಒಝೇರಿಯೊ. ಮೊಗಸಾಲೆಯಲ್ಲೊಂದು ಹಳೆಯ ಕಾಲದ್ದೆನ್ನಬಹುದಾದ ಮರದ ಬೆಂಚು. ಅದಕ್ಕೆ ಒರಗಿ ಒಂದಿಷ್ಟು ಹೊತ್ತು ಕುಳಿತುಕೊಳ್ಳುವಷ್ಟರಲ್ಲಿ ಮನೆಯ ಯಜಮಾನಿ¤ ಜಾಯ್ಸ ಒಝೇರಿಯೊ “ಹಾಂಗಾ ಕಿತ್ಯಾಕ್‌. ಬಿತ್ತರ್‌ ಯೇಯಾ’ ಎಂದು ಕರೆಯುತ್ತಾರೆ. ಚಾವಡಿಯೊಳಗೆ ಕಾಲಿಡುತ್ತ ಸೋಫಾದಲ್ಲಿ ಕುಳಿತು ಗೋಡೆಯಲ್ಲಿ ತೂಗಿಸಿರುವ ಸುಂದರವಾದ ಕಲಾಕೃತಿಗಳತ್ತ, ಹಳೆಯಕಾಲವನ್ನು ನೆನಪಿಸುವ ಕಪ್ಪು-ಬಿಳುಪು ಚಿತ್ರಗಳತ್ತ ಕಣ್ಣು ಹಾಯಿಸುವಾಗಲೇ, “ಊಲಂವ್‌R ಸುರು ಕರ್ಯಾಂ’ ಎಂದ ಎರಿಕ್‌, ತಮ್ಮ ಶ್ರೀಮತಿಯತ್ತ ನೋಡಿ, “ಗಾಂವಾcéತ್‌ ತುಂ ಹುಷಾರ್‌ ಮØಗ್‌ ಸಕಾxಂಕೀ ಗೊತ್ತಾಸ. ಅತಾಂ ಉಲಯ್‌ ಪಳೆಯಾಂ’ ಎಂದರು. ಜಾಯ್ಸ ಮಾತನಾಡತೊಡಗಿದರೆ, ಎರಿಕ್‌ ಮಾತಿಗೆ ಮಾತು ಸೇರಿಸುತ್ತ ಹೋದರು.

Advertisement

ನಾವಿಬ್ಬರು ಪ್ರೀತಿಸಿ ಮದುವೆಯಾದವರು. ಪ್ರತಿ ಬಾರಿ ವ್ಯಾಲೆಂಟೈನ್ಸ್‌ ಡೇ ಬಂದಾಗ ನಾವು ಪ್ರೀತಿಸಿದ ದಿನಗಳು ನೆನಪಾಗುತ್ತವೆ. ನಾವಾಗ ಜೆಪ್ಪು ಚರ್ಚ್‌ನಲ್ಲಿ ಪ್ರಾರ್ಥನೆಗೆ, ಸಭೆಗೆ ಬಂದು ಸೇರುತ್ತಿದ್ದೆವು. ಯಾವುದೋ ಸುಂದರ ಕ್ಷಣದಲ್ಲಿ ಪರಸ್ಪರ ನೋಡಿಕೊಂಡೆವು. ಹಾಗೆಂದು ಮೊದಲ ಬಾರಿ ನೋಡುವುದಲ್ಲ. ನನ್ನ ತಾಯಿಮನೆಯೂ ಇಲ್ಲಿಯೇ ಸನಿಹದಲ್ಲಿ ಅಂದರೆ ಜೆಪ್ಪುವಿನಲ್ಲಿಯೇ ಇದ್ದದ್ದು. ಬಹಳ ಕಾಲದಿಂದ ಪರಸ್ಪರ ನೋಡಿ, ಮಾತಾಡಿಕೊಳ್ಳುತ್ತಿದ್ದವರೇ ನಾವು. ಆದರೆ, ಅಂದಿನ ಕ್ಷಣ ಮಾತ್ರ ದೃಷ್ಟಿಯನ್ನು ಕದಲಿಸದೆ ನೋಡಿದ್ದೆವು.

ನಾನವರಿಗೆ ಯಾಕೆ ಇಷ್ಟವಾದೆನೋ ಗೊತ್ತಿಲ್ಲ. ಪ್ರೀತಿಗೆ ಕಾರಣಗಳು ಬೇಕಿಲ್ಲ ನೋಡಿ. ಬಹುಶಃ ನಮ್ಮ ಅಂತರಂಗದಲ್ಲಿದ್ದ ಸಂಗೀತದ ಸಂವೇದನೆ ನಮ್ಮನ್ನು ಹತ್ತಿರಕ್ಕೆ ತಂದಿರಬೇಕು. ಮದುವೆಗೆ ನಮ್ಮ ಮನೆಯವರ ಆಕ್ಷೇಪವೇನೂ ಇರಲಿಲ್ಲ. 46 ವರ್ಷಗಳ ಹಿಂದಿನ ಒಂದು ದಿನ. ನನಗಾಗ 22 ವರ್ಷ. ಇವರಿಗೆ 25 ಇರಬಹುದು. ಮದುವೆಯಾಗಿ ಇವರ ಮನೆಯನ್ನು ಪ್ರವೇಶಿಸಿದೆ. ಮನೆ, ಮನೆಯಂಗಳ ದೊಡ್ಡದೇ. ಆದರೆ, ಸಿರಿವಂತರೇನೂ ಅಲ್ಲ. ಕೂಡುಕುಟುಂಬ. ಎರಿಕ್‌ ಬೆಳಗ್ಗೆ ಹೋದರೆ ಬರುವುದು ತಡರಾತ್ರಿ. ಕೆಲವೊಮ್ಮೆ ಎರಡು-ಮೂರು ದಿನ ಸುದ್ದಿ ಇಲ್ಲ. ಎಲ್ಲರೂ ಜೊತೆಯಲ್ಲಿದ್ದುದರಿಂದ ಹೇಗೋ ದಿನಗಳು ಸಾಗುತ್ತಿದ್ದವು.

ಎಲ್ಲಿಗೆ ಹೋಗುತ್ತಾರೆ ಎಂದು ಕೇಳುತ್ತೀರಾ? ಹೋರಾಟದಲ್ಲಿ, ಚಳುವಳಿಯಲ್ಲಿ ಭಾಗವಹಿಸುತ್ತ ಮನೆಯನ್ನು ಮರೆತೇ ಬಿಡುತ್ತಿದ್ದರು. ಟ್ರೇಡ್‌ ಯೂನಿಯನ್‌ ಅಂತೇನೊ ಕಟ್ಟಿಕೊಂಡು ಯಾವಾಗಲೂ ಬಿಝಿ. ನಾನೂ ಇವರೊಂದಿಗೆ ಕೆಲವೆಡೆ ಧರಣಿ ಸತ್ಯಾಗ್ರಹಗಳಲ್ಲಿ ಭಾಗವಹಿಸಿದ್ದಿದೆ. ಇವರಿಗೆ ಬೆದರಿಕೆಯ ಪತ್ರಗಳು ಬಂದಾಗ, “ಸುಮ್ಮನೆ ಇವೆಲ್ಲ ಎಂತಕ್ಕೆ ನಮಗೆ, ಬಿಟ್ಟು ಬಿಡಿ’ ಎಂದು ಹೇಳಿದ್ದೂ ಇದೆ. ಇವರು ಕೇಳಬೇಕಲ್ಲ !

ಎರಿಕ್‌ ಕರ್ನಾಟಕ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು. ಆದರೆ, ಚಳುವಳಿ, ಹೋರಾಟ ಎಂದುಕೊಂಡು ಉದ್ಯೋಗಕ್ಕೆ ಸರಿಯಾಗಿ ಹೋಗಲಿಲ್ಲ. ಕೆಲಸ ಹೋಯಿತು. ಅದು ನನ್ನ ಪಾಲಿಗೆ ಪರೀಕ್ಷಾ ಕಾಲ! ಆಗ ಖಾಸಗಿ ಕಂಪೆನಿಯಲ್ಲಿ ಸ್ಟೆನೋ ಆಗಿ ಕೆಲಸ ಮಾಡುತ್ತಿದ್ದೆ. ಅದರಿಂದಾಗಿ ಫ‌ಕ್ಕನೆ ತೊಂದರೆಯಾಗಲಿಲ್ಲ. ಇಬ್ಬರು ಮಕ್ಕಳು ಸಣ್ಣವರು. ಕಷ್ಟಪಟ್ಟು ಬೆಳೆಸುವ ಹೊಣೆ ನನ್ನದೇ. ಇವರು ಯಾವತ್ತೂ ಮನೆಯ ಬಗ್ಗೆ ತಲೆಕೆಡಿಸಿಕೊಂಡವರಲ್ಲ , ಅಡುಗೆಮನೆಯತ್ತ ಸುಳಿದವರೂ ಅಲ್ಲ. ಚಹಾ ಮಾಡುವುದೊಂದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಮೂಗಿನ ಮೇಲೆ ಸಿಟ್ಟು ಬೇರೆ! ಸಿಟ್ಟು ಬಂದರೆ ನನಗೆಂದಲ್ಲ , ಯಾರಿಗಾದರೂ ಬೈದು ಬಿಡುವುದೇ. ಇವರಿಗೇನು, ಅನ್ನಿಸಿದ್ದನ್ನು ತತ್‌ಕ್ಷಣ ಹೇಳಿಬಿಡುತ್ತಾರೆ. ಮತ್ತೆ ಮರೆತೂ ಬಿಡುತ್ತಾರೆ. ನನಗೆ ಮಾತ್ರ ಬಹಳ ಕಾಲ ಅದೇ ಕಾಡುತ್ತಿರುತ್ತದೆ.

Advertisement

ಹಾಗೆಂದು, ಎಷ್ಟು ನಿಷ್ಠುರವಾದಿಯೋ ಅಷ್ಟೇ ಮೃದು ಹೃದಯಿ. ಇಲ್ಲದಿದ್ದರೆ, ಎಲ್ಲವನ್ನೂ ಬುದ್ಧಿಪೂರ್ವಕ ಯೋಚಿಸುವ ಇವರಿಗೆ ಭಾವಪ್ರಧಾನವಾದ ಸಂಗೀತದ ಆಸಕ್ತಿ ಉಂಟಾದದ್ದಾದರೂ ಹೇಗೆ? ಇವತ್ತು ಇವರನ್ನು ಸಾಮಾಜಿಕ ಕಾರ್ಯಕರ್ತನೆನ್ನುವುದಕ್ಕಿಂತ ಹಾಡುಗಾರನಾಗಿ ಜನ ಗುರುತಿಸುತ್ತಾರೆ. ನಮ್ಮಲ್ಲಿ ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಮದುಮಗ ಸೂಟುಬೂಟು ಧರಿಸುತ್ತಾರೆ. ಆ ಸಂದರ್ಭದಲ್ಲಿ ಹಾಡುವ ಹಾಡುಗಳು ಪಾಶ್ಚಾತ್ಯ ಸಂಗೀತದ ಶೈಲಿಯನ್ನು ಅನುಸರಿಸುವಂತಿವೆ. ಆದರೆ ಎರಿಕ್‌, ಮದುಮಕ್ಕಳ ಪೋಷಾಕಿನಲ್ಲಿ ದೇಸೀಯತೆಯನ್ನು ತರಲು ಪ್ರಯತ್ನಿಸಿದರು. ಸಾಂಪ್ರದಾಯಿಕ ಸಂಗೀತ ಶೈಲಿಯ ಅಂದರೆ, ಸಂಗೀತಗಾರರು ಹಿಮ್ಮೇಳವಾದನ ಸಾಮಗ್ರಿಗಳ ಜೊತೆಗೆ ನೆಲದ ಮೇಲಿನ ಹಾಸಿನ ಮೇಲೆ ಕುಳಿತುಕೊಂಡು ದೇಸಿ ಶೈಲಿಗೆ ಹತ್ತಿರವಾಗಿರುವಂತೆ ಸಂಗೀತವನ್ನು ಪ್ರಸ್ತುತಿಗೊಳಿಸುವಲ್ಲಿ ಮೊದಲ ಹೆಜ್ಜೆಯನ್ನಿರಿಸಿದರು.

ಈ ಹೊಸ ಸಂಗೀತ ಶೈಲಿಯ ಬಗ್ಗೆ ಆರಂಭದಲ್ಲಿ ತುಂಬ ವಿರೋಧವಿತ್ತೆನ್ನಿ. ಆಮೇಲೆ ಜನ ಮೆಚ್ಚಿಕೊಳ್ಳತೊಡಗಿದರು. 1986ರಲ್ಲಿ ಸಮಾನಾಸಕ್ತರೊಂದಿಗೆ ಸೇರಿಕೊಂಡು ಮಾಂಡ್‌ ಸೊಭಾಣ್‌ ಸಂಸ್ಥೆ ಕಟ್ಟಿದರು. ಅದು 34 ವರ್ಷಗಳಿಂದಲೂ ಸಕ್ರಿಯವಾಗಿದೆ. ಪ್ರಸ್ತುತ ಮಂಗಳೂರಿನ ಶಕ್ತಿನಗರದ “ಕಲಾಂಗಣ್‌’ ನಲ್ಲಿ ನಿರಂತರ ಸಂಗೀತ-ನಾಟಕ ಚಟುವಟಿಕೆಗಳು ನಡೆಯುತ್ತಿವೆ. ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುವಾಗಲೆಲ್ಲ ನಮ್ಮ ಹಳೆ ಮನೆಯ ಅಂಗಳದಲ್ಲಿಯೇ ಆಗ ಅಭ್ಯಾಸ ಮಾಡಿಸುತ್ತಿದ್ದುದಿತ್ತು. ಭಜನ್‌ ಅಲ್ಲದ, ಕವ್ವಾಲಿ ಅಲ್ಲದ, ಪಾಶ್ಚಾತ್ಯ ಮಾದರಿಯನ್ನು ಅನುಸರಿಸದ, ಆದರೆ ಎಲ್ಲವನ್ನೂ ಒಳಗೊಳ್ಳುವ, ಒಂದು ವಿಶಿಷ್ಟ ಬಗೆಯ ಕ್ರಿಶ್ಚಿಯನ್‌ ಸಂಗೀತವನ್ನು ಇವರು ರೂಪಿಸಿದರು. ನಾನು ಕೂಡ ಇವರ ತಂಡದಲ್ಲಿ ಗಾಯಕಿಯಾಗಿ ಭಾಗವಹಿಸತೊಡಗಿದೆ.

ಕೆಲವೊಮ್ಮೆ ತಮಾಷೆಯಾಗಿ ಹೇಳುತ್ತೇನೆ- ಇವರು ಮನೆಯಲ್ಲಿದ್ದಾಗ ಮಾತ್ರ ನಮ್ಮವರು! ಮನೆಯಿಂದ ಹೊರಹೋದರೆ ಮತ್ತೆ ಅವರದೇ ಲೋಕ. ಚಳುವಳಿ ಎಂದರೆ ಚಳುವಳಿಯೇ ಸರ್ವಸ್ವ. ಹಾಡಲು ಹೋದರೆ ಸಂಗೀತವೇ ಪ್ರಪಂಚ. ಮರಳಿ ಬರುವವರೆಗೆ ನಮ್ಮ ನೆನಪೇ ಇಲ್ಲ. ಇಂಥ ಸಮರ್ಪಣಾಭಾವ ಇಲ್ಲದಿದ್ದರೆ ಯಾವುದೇ ಸಾಧನೆ ಮಾಡುವುದು ಕಷ್ಟವೇ.

ನನ್ನ ಪ್ರೀತಿಯ ಹಾಡು
ಪ್ರಸಿದ್ಧ ಕೊಂಕಣಿ ಕವಿ ಚಾಫ್ರಾ ಡಿ’ಕೋಸ್ತಾರಲ್ಲಿ ಎರಿಕ್‌ಗೆ ಗುರುಭಾವ. ಚಾಫ್ರಾ ನನಗೂ ಗುರುವೇ. ಆದರೆ, ನನಗೆ ಹಾಡಲು ಕಲಿಸಿಕೊಟ್ಟದ್ದು ಎರಿಕ್‌. ಗಾಯನದಲ್ಲಿ ಗುರುಗಳೇನೋ ಹೌದು, ಬದುಕಿನಲ್ಲಿ ಮಾತ್ರ ಇವರನ್ನು ನನ್ನ ಶಿಷ್ಯ ಎನ್ನುತ್ತೇನೆ. ಇವರು “ಅಲ್ಲ’ ಎನ್ನುವುದಿಲ್ಲ. ನಗುತ್ತಾರೆ!

ಚಾಫ್ರಾ ಡಿ’ಕೋಸ್ತಾ ರಚಿಸಿದ ತುಂಬ ಹಾಡುಗಳಿಗೆ ಇವರು ಸಂಗೀತ ಕೊಟ್ಟಿದ್ದಾರೆ, ಹಾಡಿದ್ದಾರೆ. ಇವರಿಗಾಗಿಯೇ ಚಾಫ್ರಾ ಹಾಡುಗಳನ್ನು ಬರೆದದ್ದೂ ಇದೆ. ನನಗೆ ಇಷ್ಟವಾಗುವ ಹಾಡು ಇದು- ತುಜ್ಯಾ ಕೆಸಾಂಕ್‌ ಚೊಯ್ತಾನಾ ಮೊಗಾ ಮØಜೆಂ ಕಾಳಿಜ್‌ ಭರುನ್‌ ಯೆತಾ|
ತೊಂಡಾರ್‌ ಚರೆcಂ ವಾದಾಲ್‌ ಉಟುನೇ ತಕ್ಲಿ ಕೆಸಾಂತ್‌ ಪುರೊನ್‌ ಮೌ|
ಇದರ ಭಾವಾರ್ಥವನ್ನು ಹೀಗೆ ಸಂಗ್ರಹಿಸಿ ಹೇಳಬಹುದು- ನಿನ್ನ ಕೂದಲು ನೋಡುವಾಗ ಎನ್ನ ಹೃದಯ ತುಂಬಿ ಬರುತ್ತದೆ. ಅದರಲ್ಲಿ ಮುಖಮುಚ್ಚಿ ಅಳಬೇಕು ಅಂತ ಆಸೆಯಾಗುತ್ತದೆ. ಆದರೆ, ನಿನ್ನ ಬಾಬ್‌ ಪಿನ್‌ ಚುಚ್ಚಿ ನನ್ನ ಮುಖದಲ್ಲಿ ರಕ್ತ ಬಂದಿದೆ…

ಇದನ್ನು ಹಾಡುವಾಗ ಇವರು ಎಷ್ಟೊಂದು ಪರವಶರಾಗುತ್ತಾರೆ! ಒಂದು ರೀತಿಯ ಸೆಂಟಿಮೆಂಟಲ್‌ ಸಾಂಗ್‌. ಪ್ರೀತಿಸಿದ ಆ ದಿನಗಳು ನೆನಪಾಗಿ ನಾನು ಕೂಡ ತನ್ಮಯಳಾಗುತ್ತೇನೆ.

ನನಗೆ ಇಷ್ಟವಾಗುವ ಹಾಡು ಯಾವುದೆಂದು ಕೇಳುತ್ತೀರಾ?
ಬಿರಿ ಬಿರಿ ಪಾವಾÕ ತುಂ ಯೆಯಿ ನಾಕಾರೆ ಮØಜ್ಯಾ ಪಾಪಿಯಾಚ್ಯಾ ಲಗ್ನಾ ದಿವಾÕ ಯೆಯಿ ನಾಕಾರೆ ಯೆಯಿ ನಕಾರೆ ಇದನ್ನು ಹಾಡಲು ಕಲಿಸಿದ್ದು ಇವರೇ. ನಾನಿದನ್ನು ಎಷ್ಟೊಂದು ಭಾವುಕಳಾಗಿ ಹಾಡುತ್ತೇನೆ. ನಮ್ಮ ಕಡೆ ಒಂದು ನಂಬಿಕೆ ಇದೆ- ಹಸಿ ತೆಂಗಿನಕಾಯಿ ಅಥವಾ ತುರಿದ ತೆಂಗಿನಕಾಯಿ ತಿಂದರೆ, ಅಂಥವರ ಮದುವೆಗೆ ಮಳೆ ಬರುತ್ತದೆ- ಅಂತ. ಹಾಗೆ, ತುರಿದ ತೆಂಗಿನಕಾಯಿ ತಿಂದು ತಪ್ಪೆಸಗಿದವಳೊಬ್ಬಳು ತನ್ನ ಮದುವೆಯ ದಿನ, “ನಾನು ಪಾಪಿ! ಹನಿ ಹನಿ ಮಳೆಯೇ, ನನ್ನ ಮದುವೆಯ ದಿನ ದಯವಿಟ್ಟು ಬರಬೇಡ’ ಎಂದು ಪ್ರಾರ್ಥಿಸುವ ಪದ್ಯವಿದು. ಇದನ್ನು ಹಾಡುತ್ತ ನನ್ನನ್ನು ನಾನೇ ಮರೆತುಬಿಡುತ್ತೇನೆ.ನನ್ನ ಕೈಯ ಮೀನು ಸಾರು ಇವರಿಗೆ ಬಹು ಇಷ್ಟ. ಕೋಳಿ ಮತ್ತಿತರ ಮಾಂಸ ಇವರು ತಿನ್ನುವುದಿಲ್ಲ. ಚಹಾ-ಕಾಫಿ ಬಿಟ್ಟರೆ ಬೇರೇನೂ ಕುಡಿದವರೂ ಅಲ್ಲ.

ಉಳಿದವರಿಗೂ “ಕುಡಿಯಬಾರದು’ ಎಂದೇ ಹೇಳುವವರು. ಸಿಗರೇಟು-ಬೀಡಿಯ ವ್ಯಸನವೂ ಇವರ ಬಳಿ ಸುಳಿದಿಲ್ಲ.ಮೊದಲು ಇವರು ಓಡಾಡುತ್ತಿದ್ದದ್ದು ಸೈಕಲ್‌ನಲ್ಲಿ. ಆಮೇಲೆ, ಒಂದು ಲ್ಯಾಂಬ್ರೆಟ್ಟಾ ಸ್ಕೂಟರ್‌ ಬಂತು. ಅದಾದರೋ ಕೆಲವೊಮ್ಮೆ ಸ್ಟಾಟೇì ಆಗುತ್ತಿರಲಿಲ್ಲ. ದೂಡುತ್ತ ಸ್ವಲ್ಪ ದೂರದವರೆಗೆ ಓಡಿಕೊಂಡು ಹೋಗಿ, ಸ್ಟಾರ್ಟ್‌ ಆದ ಬಳಿಕ ಹಾರಿ ಕುಳಿತುಕೊಳ್ಳುತ್ತಿದ್ದರು. ಕೆಲವೊಮ್ಮೆ ಸ್ಕೂಟರ್‌ ಸ್ಟಾರ್ಟ್‌ ಆಗದಿರಲು ಟ್ಯಾಂಕ್‌ನಲ್ಲಿ ಪೆಟ್ರೋಲ್‌ ಮುಗಿದಿರುವುದು ಕಾರಣ ಎಂಬ ಸಾಮಾನ್ಯ ಜ್ಞಾನವೂ ಇವರಿಗಿಲ್ಲ ! ಇದೇ ಸ್ಕೂಟರ್‌ನಲ್ಲಿ ನಾನು ಇವರೊಂದಿಗೆ ಊರಿಡೀ ಸುತ್ತಿದ್ದೇನೆ. ಒಮ್ಮೆ ಕುಂದಾಪುರಕ್ಕೆ ಹೋಗಿದ್ದೆವು. ಆಗಲೂ ಅದೇ ವೈಖರಿ! ಇವರು ಸ್ಕೂಟರ್‌ ದೂಡುತ್ತ ಓಡೋಡಿ ಬರುತ್ತಿದ್ದರೆ ನಾನೂ ಅನುಸರಿಸಿ ಕೊಂಡು ಓಡಿ ಬಂದಿದ್ದೆ. ಸ್ಟಾರ್ಟ್‌ ಆದ ಕೂಡಲೇ ಇವರ ಜೊತೆಗೆ ನಾನೂ ಹಾರಿ ಕುಳಿತುಕೊಂಡು “ಉಸ್ಸಪ್ಪ’ ಎನ್ನುತ್ತ ನಿಟ್ಟುಸಿರು ಬಿಡುತ್ತಿದ್ದೆ. 2008ರ ಲ್ಲಿರಬೇಕು, ಮಾಂಡ್‌ ಸೊಭಾಣ್‌ನ ಗಿನ್ನೆಸ್‌ ದಾಖಲೆಯಾದಾಗ ಇವರಿಗೊಂದು ಅಭಿನಂದನ ಕಾರ್ಯಕ್ರಮ ನಡೆಯಿತು. ಆಗ ಉದಾರಿಗಳಾದ ರೊನಾಲ್ಡ್‌ ಕುಲಾಸೊ ಅವರು 5 ಲಕ್ಷ ರೂಪಾಯಿ ಕೊಟ್ಟು ಗೌರವಿಸಿದರು. ಆ ಹಣದಲ್ಲಿ ಒಂದು ಕಾರು ತೆಗೆದುಕೊಳ್ಳುವ ನಿರ್ಧಾರ ಮಾಡಿದೆವು.

ಇವರು ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾಗಿದ್ದರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ, ವಿಶ್ವಕೊಂಕಣಿ ಕಲಾರತ್ನ ಬಿರುದು ಬಂದಿದೆ… ಎಲ್ಲವೂ ಹೌದು. ಆದರೆ, ಕೈಯಲ್ಲಿ ಹಣ ಉಳಿಯುವುದೇ ಇಲ್ಲ. ಇವರ ಬಳಿ ಒಂದು ಫೋನ್‌ ಕೂಡ ಇರಲಿಲ್ಲ. ಪತ್ರಕರ್ತರು, ಗೆಳೆಯರು ಒತ್ತಾಯ ಮಾಡಿ ಒಂದು ಫೋನ್‌ ತೆಗೆದುಕೊಳ್ಳುವಂತಾಯಿತು. ಇವರ ಕೈಗೆ ನೂರು ರೂಪಾಯಿ ಕೊಟ್ಟು ನೋಡಿ- ಅವರಿವರಿಗೆ ಹಂಚಿ ಬರುತ್ತಾರೆ. ಎಲ್ಲರೂ ಭಾವಿಸುತ್ತಾರೆ- ಪ್ರಶಸ್ತಿ ಬಂದಿದೆ, ಸಂಮಾನ ಆಗಿದೆ- ಇವರಲ್ಲಿ ತುಂಬ ದುಡ್ಡಿರಬಹುದು ಅಂತ. ಆದರೆ, ಉಳಿತಾಯ ಶೂನ್ಯವೇ. ಆದರೆ ನಮ್ಮ ಪುಣ್ಯ; ನಾವು ಯಾರಿಗೂ ಅನ್ಯಾಯ ಮಾಡಿಲ್ಲ , ನಮ್ಮ ಇಬ್ಬರು ಮಕ್ಕಳು ಚೆನ್ನಾಗಿ ಓದಿ ವಿದೇಶಕ್ಕೆ ಹೋಗಿ ಒಳ್ಳೆಯ ಉದ್ಯೋಗ ಹಿಡಿದು ನಮಗೆ ಆಧಾರವಾಗಿದ್ದಾರೆ.

ಗೃಹಿಣಿಯರಿಗೆ ಕಾಲಕ್ಷೇಪ ಮಾಡುವುದು ಕಷ್ಟವಲ್ಲ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಕೆಲಸದವರನ್ನು ಇಟ್ಟುಕೊಂಡಿಲ್ಲ. ನಾನೇ ಮನೆಯ ಎಲ್ಲ ಕೆಲಸಗಳನ್ನು ಮಾಡುತ್ತಿರುತ್ತೇನೆ. ಹಾಗಾಗಿ, ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಮಧ್ಯಾಹ್ನದ ಬಳಿಕ ಉದಯವಾಣಿ ಓದುತ್ತ ಕೂರುತ್ತೇನೆ. ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದುತ್ತಲೇ ಸಂಜೆಯಾಗಿ ಬಿಡುತ್ತದೆ. ಇವರಿಗೆ ಓದುವ ಅಭ್ಯಾಸ ಮೊದಲಿನಿಂದಲೂ ಕಡಿಮೆ. ಹಾಡುತ್ತಿರುತ್ತಾರೆ. ಇಲ್ಲದಿದ್ದರೆ, ಸಾರೇಗಾಮ ಕ್ಯಾರವಾನ್‌ನಲ್ಲಿ ಪದ್ಯ ಕೇಳುತ್ತಿರುತ್ತಾರೆ.

ಈಗ ಇವರ ಆರೋಗ್ಯ ಹದಗೆಟ್ಟಿದೆ. ಪಾಯಸ, ಸಿಹಿ ಎಂದರೆ ಮೊದಲಿನಿಂದಲೂ ಇಷ್ಟ. ಈಗಲೂ ಕೊಟ್ಟರೆ ತಿನ್ನುತ್ತಾರೆ! ನಾನು ಬಿಡ ಬೇಕಲ್ಲ. ಆದರೆ, ಹಾಡಲು ತೊಡಗಿದರೆಂದರೆ ಇವರು ಪೂರ್ಣ ಆರೋಗ್ಯವಂತರಾಗಿಬಿಡುತ್ತಾರೆ.

ಇತ್ತೀಚೆಗೆ ಯಾರೋ ಇವರ ಪರವಾಗಿ ಪ್ರಾರ್ಥನೆ ಮಾಡುವುದಕ್ಕೆ ಬಂದಿದ್ದರು. ಅವರು ಒಳ್ಳೆಯ ಮನಸ್ಸಿನಿಂದಲೇ ಬಂದಿದ್ದರೆನ್ನಿ. ಇವರಿಗೆ ಇಷ್ಟವಾಗಲಿಲ್ಲ. “ಬೇಡ’ ಎಂದರು. ಇವರು ಇಷ್ಟು ನಿಷ್ಠುರಿಯಾದದ್ದು ನನಗೆ ಇಷ್ಟವಾಗಲಿಲ್ಲ. ಆದರೆ, ಅವರೆಲ್ಲಿ ನನ್ನ ಮಾತು ಕೇಳುತ್ತಾರೆ! ಇವತ್ತು ಬೆಳಗ್ಗೆ , “ನೀನು ಮಾಡಿದ ಉಪ್ಪಿಟ್ಟು-ಅವಲಕ್ಕಿ ಚೆನ್ನಾಗಿಲ್ಲ’ ಎಂದು ನೇರವಾಗಿ ಹೇಳಿದರು. ಸಮಾಜದಲ್ಲಾಗಲಿ, ಕುಟುಂಬದಲ್ಲಾಗಲಿ ಒಳಗೊಂದು-ಹೊರಗೊಂದು ಎಂಬ ಮನಸ್ಸು ಅವರಲ್ಲಿಲ್ಲ. ಆಗಲೇ ನಾನು ಹೇಳಿದಂತೆ, ಅನ್ನಿಸಿದನ್ನು ಖಡಕ್ಕಾಗಿ ಹೇಳಿಬಿಡುವುದೇ.

ನಾನು ಎಲ್ಲವನ್ನು ತಾಳ್ಮೆಯಿಂದ ಸ್ವೀಕರಿಸುವುದನ್ನು ನೋಡಿ, “ನಿನ್ನ ಈ ಗುಣ ನಿನ್ನ ಅಮ್ಮನಿಂದ ಬಂದದ್ದು’ ಎಂದು ಎರಿಕ್‌ ಹೇಳುವುದುಂಟು. ಹೌದು, ಇವರು ಹೇಳಿದ್ದರಲ್ಲಿ ನಿಜವಿದೆ.

ಒಮ್ಮೆ ಏನಾಯಿತೆಂದರೆ…
ಇವರು, ದೇಶವಿಡೀ ಸುತ್ತಾಡಿದ್ದಾರೆ. ವಿವಿಧ ದೇಶಗಳಿಗೆ ಹೋಗಿ ಬಂದಿದ್ದಾರೆ. ಹಲವೆಡೆ ಸಂಮಾನಗಳೂ ಆಗಿವೆ. ಹೆಚ್ಚಿನ ಕಡೆಗೆ ನಾನೂ ಕೂಡ ಹೋಗಿದ್ದೇನೆ. ಒಮ್ಮೆ ಮಸ್ಕತ್‌ಗೆ ಹೋಗುವಾಗ ನಡೆದ ಘಟನೆ ಇನ್ನೂ ನೆನಪಿನಲ್ಲಿದೆ. ನಮ್ಮಲ್ಲಿ ಒಂದಷ್ಟು ಸಂಗೀತ ಉಪಕರಣಗಳಿದ್ದವು. ಅವನ್ನೆಲ್ಲ ವಿಮಾನ ನಿಲ್ದಾಣದ ಅಧಿಕಾರಿಗಳು ಕೊಂಡೊಯ್ಯಲು ಬಿಡಲಿಲ್ಲ. ಗಿಟಾರ್‌, ವಯಲಿನ್‌ನಂಥ ಉಪಕರಣಗಳನ್ನು ಬಿಟ್ಟು ಬೇರೇನನ್ನೂ ಆ ಅಧಿಕಾರಿಗಳು ನೋಡಿರಲಿಲ್ಲ. ಕೊನೆಗೆ ಅವುಗಳನ್ನು ಅಲ್ಲಿಯೇ ಬಿಟ್ಟು ಹೋದೆವು. ಮಸ್ಕತ್‌ನಲ್ಲಿ ಲಭ್ಯವಿದ್ದ ಕೆಲವು ಉಪಕರಣಗಳನ್ನು ಸಂಗ್ರಹಿಸಿ ಹೇಗೋ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟದ್ದು ನನಗೂ ಮರೆಯಲಾರದ ಅನುಭವ. ಸವಾಲು ಮುಂದಿರುವಾಗ ಏನು ಮಾಡುವುದು ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಜಾಯಮಾನ ಇವರದಲ್ಲ ಎಂಬುದಕ್ಕೆ ಈ ಉದಾಹರಣೆ ಹೇಳಿದೆ.
-ಜಾಯ್ಸ ಒಜೇರಿಯೊ

ಜಾಯ್ಸ ಒಝೇರಿಯೊ

Advertisement

Udayavani is now on Telegram. Click here to join our channel and stay updated with the latest news.

Next