ಅಹಮದಾಬಾದ್: ಗುಜರಾತ್ ನ ಕರಾವಳಿ ಪ್ರದೇಶವಾದ ಪೋರಬಂದರ್ ನಲ್ಲಿ ಭಯೋತ್ಪಾದಕ ನಿಗ್ರಹ ದಳ ಐಸಿಸ್ ಜಾಲವನ್ನು ಪತ್ತೆಹಚ್ಚಿದ್ದು, ಮಹಿಳೆ ಸೇರಿದಂತೆ ಶಂಕಿತ ನಾಲ್ವರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:Karnataka ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ: ಸಿದ್ದರಾಮಯ್ಯ
ಬಂಧಿತರಲ್ಲಿ ಮೂವರು ಶ್ರೀನಗರ ಮೂಲದವರಾಗಿದ್ದು, ಮಹಿಳೆ ಸೂರತ್ ಪ್ರದೇಶಕ್ಕೆ ಸೇರಿದ್ದವಳಾಗಿದ್ದಾಳೆ ಎಂದು ವರದಿ ಹೇಳಿದೆ. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಐಸಿಸ್ ಜಾಲದಲ್ಲಿ ಸಕ್ರಿಯರಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಝೀ ನ್ಯೂಸ್ ವರದಿ ಮಾಡಿದೆ.
ಡಿಐಜಿ ದೀಪನ್ ಭಂದ್ರನ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಜೋಶಿ ಅವರ ನೇತೃತ್ವದ ಎಟಿಎಸ್ ಅಧಿಕಾರಿಗಳ ತಂಡ ಶಂಕಿತ ಆರೋಪಿತರ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿ ಮಾಹಿತಿ ಕಲೆಹಾಕಿತ್ತು. ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಅಫ್ಘಾನಿಸ್ತಾನಕ್ಕೆ ಪರಾರಿಯಾಗಲು ಯತ್ನ:
ಬಂಧಿತ ನಾಲ್ವರು ಆರೋಪಿಗಳು ಅಫ್ಘಾನಿಸ್ತಾನಕ್ಕೆ ಪರಾರಿಯಾಗಿ, ಅಲ್ಲಿ ಐಸಿಸ್ ಉಗ್ರ ಸಂಘಟನೆಗೆ ಸೇರಿ, ತರಬೇತಿ ಪಡೆಯಲು ಸಿದ್ಧತೆ ನಡೆಸಿದ್ದರು. ಶ್ರೀನಗರದಿಂದ ಪೋರಬಂದರ್ ಗೆ ಆಗಮಿಸಿದ್ದ ಆರೋಪಿಗಳು, ಸ್ಥಳೀಯ ಮಹಿಳೆಯ ನೆರವಿನೊಂದಿಗೆ ಬೋಟ್ ಅನ್ನು ಬಾಡಿಗೆ ಪಡೆದು ಅಫ್ಘಾನಿಸ್ತಾನಕ್ಕೆ ಪರಾರಿಯಾಗಲು ಸಂಚು ರೂಪಿಸಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.