Advertisement

ಶ್ರೀಕೃಷ್ಣ ಮಠಕ್ಕೆ ಮೋದಿ ಭೇಟಿ: ಇನ್ನೂ ಮುಗಿಯದ ಕುತೂಹಲ

09:57 AM May 01, 2018 | |

ಉಡುಪಿ: ಪ್ರಧಾನಿ ಮೋದಿ ಮಂಗಳವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಸಾಧ್ಯತೆ ಕ್ಷೀಣಿಸಿದೆ.  ಪ್ರಸ್ತುತ ನಿಗದಿಯಾಗಿರುವ ಕಾರ್ಯಕ್ರಮದ ಸಮಯಪಟ್ಟಿಯಂತೆ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿಯಾಗುವುದಿಲ್ಲ. ಜತೆಗೆ ಸಭೆಯಲ್ಲದೇಯಾವುದೇ ಮಾತುಕತೆ, ಭೇಟಿಯೂ ಇಲ್ಲ. ಇದನ್ನು ಖಚಿತವಾಗಿ ಹೇಳಲು ಒಪ್ಪದ ಪೊಲೀಸ್‌ ಅಧಿಕಾರಿಗಳು, ಹೆಚ್ಚುವರಿ ಪೊಲೀಸ್‌ ಭದ್ರತೆಯನ್ನು ವಾಪಸು ತೆಗೆದುಕೊಳ್ಳಲಾಗಿದೆ. ಒಂದುವೇಳೆ ಭೇಟಿ ಇದೆ ಎಂದಾದರೆ ಕೂಡಲೇ ಎಸ್‌ಪಿಜಿ ಸಿಬಂದಿಯೊಂದಿಗೆ ಪೊಲೀಸರು ಕಾರ್ಯ ಪ್ರವೃತ್ತರಾಗುವರು ಎಂದು ತಿಳಿಸಿದ್ದಾರೆ. ಭೇಟಿಯ ಸಾಧ್ಯತೆ ತೀರಾ ಕಡಿಮೆ ಎಂಬ ಮಾಹಿತಿ ಮಠದವರಿಗೂ ನೀಡಲಾಗಿದೆ ಎನ್ನಲಾಗಿದೆ. 

Advertisement

ಸಾರ್ವಜನಿಕ ದರ್ಶನ ಇಲ್ಲ
ಆದರೂ ಯಾವುದೇ ಕ್ಷಣದಲ್ಲಿ ಮೋದಿಯವರು ನಿರ್ಧಾರ ಬದಲಿಸುವ ಸಾಧ್ಯತೆ ಇರುವುದರಿಮದ ಮಂಗಳವಾರ ಬೆಳಗ್ಗಿನ ಪೂಜೆ ಬೇಗ ಮುಗಿಯಲಿದ್ದು, 12.30 ಯಿಂದ 4. 30 ವರೆಗೆ ಸಾರ್ವಜನಿಕರಿಗೆ ಕೃಷ್ಣ ದರ್ಶನ ಅವಕಾಶ ಇಲ್ಲ. ಮಠದ ಸುತ್ತಮುತ್ತಲಿನ ಎಲ್ಲ ಅಂಗಡಿಗಳನ್ನು ಮುಚ್ಚಲು ಪೊಲೀಸರು ಸೂಚನೆ ನೀಡಿದ್ದಾರೆ. ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭದ್ರತೆಯ ಪೂರ್ಣ ಮಾಹಿತಿಯನ್ನು ಮಠದವರಿಗೂ ಬಿಟ್ಟುಕೊಟ್ಟಿಲ್ಲ. ಎಸ್‌ಪಿಜಿ ಎಐಜಿಪಿ ಸ್ವತಃ ಪರಿಶೀಲನೆ ನಡೆಸಿದ್ದಾರೆ. ಶ್ರೀಕೃಷ್ಣ ಮಠವನ್ನು ಸುತ್ತುವರಿದಿರುವ ಅಷ್ಟಮಠಗಳ ಸುತ್ತಲೂ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ.

ಪೇಜಾವರ ಶ್ರೀಗಳೊಂದಿಗೆ ಮಾತುಕತೆ?
ಮೂಲಗಳ ಪ್ರಕಾರ ಪ್ರಧಾನಿ ಹೆಲಿಪ್ಯಾಡ್‌ನಿಂದ ಸಮಾವೇಶ ಸ್ಥಳಕ್ಕೆ ತೆರಳುವ ಮಧ್ಯೆ ಮಠಕ್ಕೆ ಭೇಟಿ ಕೊಟ್ಟು ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಇನ್ನೊಂದು ಮೂಲದ ಪ್ರಕಾರ ಸಮಾವೇಶ ಮುಗಿಸಿ ಮರಳುವಾಗ ಭೇಟಿ ನಡೆಯಲಿದೆ. ಭೇಟಿಯ ಸಮಯ ಯಾವ ಕ್ಷಣದಲ್ಲೂ ಬದಲಾಗಬಹುದು, ರದ್ದಾಗಲೂಬಹುದು. ಈ ಮೊದಲು ಮೋದಿಯವರು ಮಠದಲ್ಲೇ ಊಟ ಮಾಡುವರು ಎಂದೂ ಹೇಳಲಾಗಿತ್ತು. ಆದರೆ ಯಾವುದೂ ಇನ್ನೂ ಖಚಿತಗೊಂಡಿಲ್ಲ.

ಚುನಾವಣೆ ನಂತರ ಮತ್ತೂಮ್ಮೆ ಉಡುಪಿಗೆ ?
ಬಿಜೆಪಿ ಪಕ್ಷದ ಮೂಲಗಳು ಮತ್ತೂಂದು ಅಂಶವನ್ನು ಖಚಿತಪಡಿಸಿದ್ದು, ಚುನಾವಣೆ ಮುಗಿದ ಬಳಿಕ ಪಾದೂರು ಕಚ್ಚಾತೈಲ ಸಂಗ್ರಹ ಘಟಕವನ್ನು ಉದ್ಘಾಟನೆಗೆ ಪ್ರಧಾನಿ ಉಡುಪಿಗೆ ಭೇಟಿ ನೀಡುವರು. ಈ ಸಂದರ್ಭದಲ್ಲಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಪರ್ಯಾಯ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥರನ್ನು ಭೇಟಿಯಾಗುವರು.

ಅಪರಾಹ್ನ ನಡೆಯಿತು ರಿಹರ್ಸಲ್‌ 
ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಎಂಜಿಎಂ ಮೈದಾನದ ವರೆಗೆ ಭದ್ರತಾ ಅಭ್ಯಾಸ ಸೋಮವಾರ ಅಪರಾಹ್ನ ನಡೆಯಿತು. 3.15ರ ಸುಮಾರಿಗೆ ಒಳರಸ್ತೆಗಳಲ್ಲಿ ಬರುವ ವಾಹನಗಳನ್ನು  ತಡೆದು, ಜನಸಂಚಾರವನ್ನೂ ಸ್ಥಗಿತಗೊಳಿಸಲಾಯಿತು. 3.30ರಿಂದ 4.30ರ ನಡುವೆ ಆದಿಉಡುಪಿಯಿಂದ ಎಂಜಿಎಂ ಮೈದಾನ ರಸ್ತೆಯುದ್ದಕ್ಕೂ ಝೀರೋ ಟ್ರಾಫಿಕ್‌ ವ್ಯವಸ್ಥೆಯಲ್ಲಿ ಪೊಲೀಸರು, ಎಸ್‌ಪಿಜಿ ರಿಹರ್ಸಲ್‌ ನಡೆಸಿದರು. ರಾ.ಹೆ. 66 ಅನ್ನು ಕೂಡ ಬ್ಲಾಕ್‌ ಮಾಡಲಾಗಿತ್ತು. ಸುಮಾರು 25 ವಾಹನಗಳು ಪಾಲ್ಗೊಂಡಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next