Advertisement

ಮೋದಿ ಧರ್ಮಸ್ಥಳ ಭೇಟಿ ಹಿನ್ನೆಲೆ: ಎಡಿಜಿಪಿಯಿಂದ ಭದ್ರತೆ ಪರಿಶೀಲನೆ

10:36 AM Oct 26, 2017 | |

ಬೆಳ್ತಂಗಡಿ/ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅ. 29ರಂದು ಧರ್ಮಸ್ಥಳ ಹಾಗೂ ಉಜಿರೆಗೆ ಆಗಮಿಸುವ ಹಿನ್ನೆಲೆಯಲ್ಲಿ ಬುಧವಾರ ಎಡಿಜಿಪಿ ಆಲೋಕ್‌ ಮೋಹನ್‌ ಅವರು ಭದ್ರತಾ ಪರಿ ಶೀಲನೆ ನಡೆಸಿದರು.

Advertisement

ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿ ಅನಂತರ ಉಜಿರೆಗೆ ಬಂದು ಕಾರ್ಯಕ್ರಮ ನಡೆ ಯುವ ಸ್ಥಳ, ಹೆಲಿಪ್ಯಾಡ್‌ ಇತ್ಯಾದಿ ಕಡೆಗಳಲ್ಲಿ ಪರಿಶೀಲಿಸಿದರು. ಎಡಿಜಿಪಿ ಅವರ ಜತೆ ಪಶ್ಚಿಮ ವಲಯ ಐಜಿಪಿ ಹೇಮಂತ್‌ ನಿಂಬಾಳ್ಕರ್‌, ದ.ಕ. ಜಿಲ್ಲಾ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ, ಕಾರ್ಕಳ ಎಎಸ್‌ಪಿ ಹೃಷೀಕೇಶ್‌ ಅವರಿದ್ದರು. ಇದಕ್ಕೂ ಮುನ್ನ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು ಇದರಲ್ಲಿ ಬೆಳ್ತಂಗಡಿ ತಾಲೂಕಿನ ಅಧಿಕಾರಿಗಳೂ ಭಾಗವಹಿಸಿದ್ದರು.

ಹೆಲಿಪ್ಯಾಡ್‌ ವೀಕ್ಷಣೆ
ಎಡಿಜಿಪಿ ಅವರು ಧರ್ಮಸ್ಥಳದ ಹೆಲಿಪ್ಯಾಡ್‌ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್‌, ಕೃಷ್ಣ ಸಿಂಗ್‌, ಎ. ವೀರು ಶೆಟ್ಟಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಪ್ರಸಾದ್‌ ಅಜಿಲ, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಶಂಕರ್‌ ಮೊದಲಾದವರು ಇದ್ದರು.

ಡಾ| ಹೆಗ್ಗಡೆ ಜತೆ ಮಾತುಕತೆ
ಬಳಿಕ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಕಾರ್ಯಕ್ರಮದ ಬಗ್ಗೆ ಚರ್ಚಿಸಿದರು. ಅನಂತರ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಮಂಗಳೂರಿಗೆ ತೆರಳಿದರು.

ಅಘೋಷಿತ ಬಂದ್‌
ಪ್ರಧಾನಿ ಆಗಮನ ಸಂದರ್ಭ ಭದ್ರತೆಗಾಗಿ ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಬಂದ್‌ ವಾತಾವರಣ ಕಂಡು ಬರಲಿದೆ. ಧರ್ಮಸ್ಥಳದಲ್ಲಿ ಶನಿವಾರ ಅಪರಾಹ್ನದಿಂದ ರವಿವಾರ ಅಪರಾಹ್ನದ ವರೆಗೆ ಅಂಗಡಿ ಮುಂಗಟ್ಟು ಗಳನ್ನು ಮುಚ್ಚುವಂತೆ ಮಾಲಕ ರಿಗೆ ಸೂಚನೆ ಕೊಡಲಾಗಿದೆ. ಜತೆಗೆ ಉಜಿರೆ – ಧರ್ಮಸ್ಥಳ ದಾರಿಯ ಎಲ್ಲ ಅಂಗಡಿಗಳನ್ನೂ ರವಿವಾರ ಮುಚ್ಚ ಬೇಕಾಗಿ ಬರಬಹುದು ಎನ್ನಲಾಗಿದೆ. 

Advertisement

2,000 ಪೊಲೀಸರ ನಿಯೋಜನೆ 
ಬಂದೋಬಸ್ತು ಕಾರ್ಯಕ್ಕಾಗಿ ಅಧಿಕಾರಿಗಳು ಮತ್ತು ಸಿಬಂದಿ ಸೇರಿ ದಂತೆ ಒಟ್ಟು 2,000 ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ. 10 ಎಸ್‌ಪಿ ದರ್ಜೆಯ ಅಧಿಕಾರಿಗಳು, 150 ಪೊಲೀಸ್‌ ಅಧಿಕಾರಿಗಳು (ಪಿಎಸ್‌ಐ, ಪಿಐ ಮತ್ತು ಡಿವೈಎಸ್‌ಪಿ) ಇರುತ್ತಾರೆ ಎಂದವರು ವಿವರಿಸಿದ್ದಾರೆ.

ನಕ್ಸಲರಿಗೆ ಶೋಧ
ನಕ್ಸಲ್‌ ಬಾಧಿತ ಪ್ರದೇಶಗಳಲ್ಲಿ ನಕ್ಸಲ್‌ ನಿಗ್ರಹ ದಳದ ಸಿಬಂದಿ ಶೋಧ ಆರಂಭಿಸಿದ್ದಾರೆ. 25 ಎಎನ್‌ಎಫ್‌ ತಂಡಗಳು ಈ ಕಾರ್ಯದಲ್ಲಿ ನಿರತ ವಾಗಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ವಿಧ್ವಂಸಕ ಕೃತ್ಯ ನಿಗ್ರಹ ತಪಾಸಣಾ ತಂಡಗಳು ಈಗಾಗಲೇ ಧರ್ಮಸ್ಥಳದಲ್ಲಿ ಬೀಡು ಬಿಟ್ಟಿದ್ದು, ಜನರ ಆಗುಹೋಗುಗಳ ಪರಿ ಶೀಲನೆ ಮತ್ತು ತಪಾಸಣೆ ನಡೆಸುತ್ತಿವೆ. ಎಸ್‌ಪಿಜಿ ಪಡೆಗಳು ಗುರುವಾರ ಆಗ ಮಿಸಿ ಭದ್ರತಾ ಕಾರ್ಯದಲ್ಲಿ ನಿರತವಾಗಲಿವೆ.

ಧರ್ಮಸ್ಥಳ: ಭಕ್ತರಿಗೆ ನಿರ್ಬಂಧ
ಪ್ರಧಾನಿ ನರೇಂದ್ರ ಮೋದಿ ಅವರು ಅ. 29ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಲಿರುವುದರಿಂದ ಅ. 28ರ ಮಧ್ಯಾಹ್ನ 2 ಗಂಟೆಯಿಂದ ಅ. 29ರ ಮಧ್ಯಾಹ್ನ 2 ಗಂಟೆಯ ತನಕ ಶ್ರೀ ಕ್ಷೇತ್ರದಲ್ಲಿ ಇತರ ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅವಕಾಶ‌ವಿರುವುದಿಲ್ಲ. ಇದರಿಂದ ಭಕ್ತರಿಗಾಗುವ ಅನನುಕೂಲತೆಗೆ ವಿಷಾದಿಸುತ್ತೇವೆ, ಭಕ್ತರು ಸಹಕರಿಸಬೇಕು ಎಂದು ಕ್ಷೇತ್ರದ ಪ್ರಕಟನೆಯಲ್ಲಿ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next