ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಗಡಿ ಜಿಲ್ಲೆ ಬೆಳಗಾವಿಗೆ ಎ.27ರಂದು ರಾತ್ರಿ ಆಗಮಿಸಿ ವಾಸ್ತವ್ಯ ಮಾಡುತ್ತಿರುವುದರಿಂದ ಬೆಳಗಾವಿ ನಗರದೆಲ್ಲೆಡೆ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.
ಮೋದಿ ಗೋವಾದಲ್ಲಿ ಚುನಾವಣ ಪ್ರಚಾರ ಮುಗಿಸಿ ನೇರವಾಗಿ ವಿಮಾನ ಮೂಲಕ ಬೆಳಗಾವಿಗೆ ಆಗಮಿಸಲಿದ್ದಾರೆ. ರಾತ್ರಿ ಬೆಳಗಾವಿಯ ಹೊಟೇಲ್‌ನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಈಗಾಗಲೇ ಭದ್ರತಾ ಪಡೆ ಬೆಳಗಾವಿಗೆ ಬಂದಿಳಿದಿದ್ದು, ಮೋದಿ ವಾಸ್ತವ್ಯ ಮಾಡುತ್ತಿರುವ ಸ್ಥಳದ ಸುತ್ತಲೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಸುಮಾರು 50ರಿಂದ 60 ಮಂದಿ ಎಸ್‌ಪಿಜಿಯವರು ಜೊಲ್ಲೆ ಸಮೂಹಕ್ಕೆ ಸೇರಿರುವ ಬೆಳಗಾವಿಯ ಕಾಕತಿ ಸಮೀಪದ ಐಟಿಸಿ ವೆಲ್‌ಕಮ್ ಹೊಟೇಲ್‌ಗೆ ಬಂದಿಳಿದಿದ್ದಾರೆ. 3-4 ದಿನಗಳಿಂದ ಭದ್ರತೆ ಪರಿಶೀಲನೆ ನಡೆಸುತ್ತಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಸಹಿತ ಹಿರಿಯ ಅಧಿ ಕಾರಿಗಳೊಂದಿಗೆ ನಿರಂತರ ಸಭೆ ನಡೆಸುತ್ತಿದ್ದಾರೆ. ಹೊಟೇಲ್ ಪಕ್ಕದಲ್ಲಿ ಎಷ್ಟು ಕಟ್ಟಡಗಳಿವೆ, ಸುತ್ತಲೂ ಜನರ ಓಡಾಟ ಹೇಗಿರುತ್ತದೆ, ಈ ಪ್ರದೇಶದಲ್ಲಿ ವಾಹನ ಸಂಚಾರ ಹೇಗೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಎ.27ರಂದು ರಾತ್ರಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ರಸ್ತೆ ಮಾರ್ಗ ವಾಗಿಯೇ ಕಾಕತಿಯ ಐಟಿಸಿ ವೆಲ್‌ಕಮ್ ಹೊಟೇಲ್‌ಗೆ ಪ್ರಧಾನಿ ತೆರಳಲಿದ್ದಾರೆ. ಸಾಂಬ್ರಾದಿಂದ ಮುತಗಾ, ಬಸವನಕುಡಚಿ ಮಾರ್ಗವಾಗಿ ಗಾಂಧಿ ನಗರದಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಕಾಕತಿ ಹೋಟೆಲ್‌ಗೆ ತಲುಪಲಿದ್ದಾರೆ.
ಮಾಲಿನಿ ಸಿಟಿ ಮೈದಾನದಲ್ಲಿ ಎ.28ರಂದು ನಡೆಯಲಿರುವ ಬಿಜೆಪಿ ಚುನಾವಣ ಪ್ರಚಾರ ಸಮಾವೇಶದಲ್ಲಿ ಮೋದಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ.