ಬಾಗಲಕೋಟೆ/ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನಮ್ಮ ಬಗ್ಗೆ ಸೀದಾರುಪಯ್ಯ ಸರ್ಕಾರ ಎಂದು ಜರಿದಿದ್ದು, ಪ್ರಧಾನಿ ಹುದ್ದೆಯಲ್ಲಿದ್ದುಕೊಂಡು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದು ಮಾತನಾಡಬಾರದಿತ್ತು. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ? ಅವರ ಮಾತಿಗೆ ಮೂರು ಕಾಸಿನ ಬೆಲೆಯಿಲ್ಲ, ದಾಖಲೆ ಇಲ್ಲದೆ ಆಡುವ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕೊಪ್ಪಳ ತಾಲೂಕಿನ ಬಸಾಪೂರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಪ್ರಧಾನಿ ಸ್ಥಾನದ ಘನತೆ, ಗೌರವವನ್ನೇ ಮೋದಿ ಹಾಳು ಮಾಡಿದ್ದಾರೆ. ನಮ್ಮ ಬಗ್ಗೆ ಕೀಳು ಮಟ್ಟಕ್ಕಿಳಿದು ಮಾತನಾಡುವ ಇಂತಹ ಪ್ರಧಾನಿಯನ್ನು ನಾನು ನೋಡಿಯೇ ಇಲ್ಲ. ಒಬ್ಬ ಪ್ರಧಾನಿಯಾಗಿ ದಾಖಲೆ ಇಲ್ಲದೆ ಆರೋಪ ಮಾಡ್ತಿದ್ದಾರೆ. ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಶೇ.20ರಷ್ಟು ಕಮಿಷನ್ ಸರ್ಕಾರ ಎಂದು ಆರೋಪಿಸಿದ್ದಾರೆ. ದಾಖಲೆ ಇದ್ರೆ ಅದನ್ನು ಬಹಿರಂಗ ಪಡಿಸಲಿ. ಆದರೆ, ಮೋದಿಯದ್ದು ಶೇ.90ರಷ್ಟು ಕಮಿಷನ್ ಪಡೆಯುವ ಸರ್ಕಾರ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶೇ.100 ಕಮಿಷನ್ ಸರ್ಕಾರವಾಗಿತ್ತು ಎಂದರು.
ಮೋದಿ ಗುಜರಾತ್‌ನಲ್ಲಿ ಸಿಎಂ ಆಗಿದ್ದಾಗ 9 ವರ್ಷ ಲೋಕಾಯುಕ್ತರನ್ನೇ ನೇಮಿಸಿಲ್ಲ. ಅಣ್ಣಾ ಹಜಾರೆ ಜತೆ ಹೋರಾಟ ಮಾಡಿದ ಬಿಜೆಪಿ 4 ವರ್ಷದಿಂದ ಲೋಕಪಾಲ್ ಬಿಲ್ ಪಾಸ್ ಮಾಡಿಲ್ಲ. ನೀರವ್ ಮೋದಿ, ಲಲಿತ್ ಮೋದಿ, ವಿಜಯ ಮಲ್ಯ ಲೂಟಿ ಮಾಡಿ ದೇಶ ಬಿಟ್ಟು ಹೊರಟು ಹೋಗಿದ್ದಾರಲ್ಲ, ಅವರಿಗೆ ಯಾರು ಕುಮ್ಮಕ್ಕು ಕೊಡುತ್ತಿದ್ದಾರೆ. ಅವರಿಗೆಲ್ಲ ಹಿಂದಿನ ಸರ್ಕಾರ ದುಡ್ಡು ಕೊಟ್ಟಿರಬಹುದು. ಆದರೆ, ಮೋದಿ ಸರ್ಕಾರದ ಅವ ಧಿಯಲ್ಲಿ ಅವರೆಲ್ಲ ದೇಶ ಬಿಟ್ಟು ಹೋಗಿದ್ದಾರಲ್ಲ. ಮೋದಿ ಇದಕ್ಕೇನು ಹೇಳ್ತಾರೆ ಎಂದು ಪ್ರಶ್ನಿಸಿದರು.
ಪ್ರಧಾನಿ ಮಧ್ಯ ಪ್ರವೇಶಿಸಲಿ: ಮಹದಾಯಿ ಬಗ್ಗೆ ಕರೆದು ಮಾತನಾಡುವುದಕ್ಕೆ ರಾಹುಲ್ ಗಾಂ ಧಿ ಪ್ರಧಾನಿಯಲ್ಲ. ರಾಹುಲ್ ರಾಜ್ಯಕ್ಕೆ ಬಂದಾಗ ಮಹದಾಯಿ ವಿಚಾರ ಅವರ ಗಮನಕ್ಕಿರಲಿಲ್ಲ. ಸಂವಹನ ಕೊರತೆಯಿಂದ ರಾಹುಲ್ ನೇರ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಮಹದಾಯಿ ವಿಚಾರದ ಬಗ್ಗೆ ಮೋದಿ ಕರೆದು ಮಾತನಾಡಬೇಕು. ಗೋವಾ ಮುಖ್ಯಮಂತ್ರಿ ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತಾಡಬೇಕು ಎಂದರು.
ನಾನು ಅಧಿವೇಶನದಲ್ಲಿ ಈಗಾಗಲೇ ಲೆಕ್ಕ ಕೊಟ್ಟಿದ್ದೇನೆ. ಈ ರಾಜ್ಯದ ಜನರಿಗೆ ನಾನು ಲೆಕ್ಕ ಕೊಡಬೇಕು. ಅಮಿತ್ ಶಾಗೆ ಲೆಕ್ಕ ಕೊಡುವ ಅಗತ್ಯವಿಲ್ಲ. ಕುಮಾರಸ್ವಾಮಿ, ದೇವೇಗೌಡರು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಈಗ ಮುಂದೆ ಮಾಡ್ತಿನಿ ಅಧಿಕಾರ ಕೊಡಿ ಎನ್ನುತ್ತಿದ್ದಾರೆ. ದೇವೇಗೌಡರೇನು ನನ್ನನ್ನು ಬೆಳೆಸಿಲ್ಲ. ನಾನೇ ಸ್ವಂತ ಬೆಳೆದು, ಗೆದ್ದು ಬಂದಿದ್ದೇನೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ