ನರೇಂದ್ರ ಮೋದಿ ಅವರು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ದೇಶೀಯವಾಗಿದ್ದಾರೆ !
ಇದರರ್ಥ ಅವರು ವಿದೇಶೀಯ ರೀತಿಯೆಂದಲ್ಲ. ಈ ಚುನಾವಣೆ ಜಾಥಾಗಳಲ್ಲಿ ಅವರು ಹೆಚ್ಚು ಪ್ರಾದೇ ಶಿಕ ಸಂಸ್ಕೃತಿಯನ್ನು ಅನುಸರಿಸುತ್ತಿದ್ದರು. ಆಯಾ ಪ್ರದೇಶಗಳ ಭಾಷೆಯಲ್ಲಿ ಕೆಲವು ಸಾಲು, ಸಂಸ್ಕೃತಿಯ ಕ್ರಮಗಳ ಆನುಸರಣೆ, ದಿರಿಸು- ಇತ್ಯಾದಿ.
ಬಹುತೇಕ ತಮ್ಮ ಪ್ರತಿ ಪ್ರಚಾರ ಕಾರ್ಯವನ್ನೂ ಸ್ಥಳೀಯ ನೆಲೆಯಿಂದಲೇ ಆರಂಭಿಸುತ್ತಿದ್ದುದು ವಿಶೇಷ. ತಮ್ಮ ಭಾಷಣಗಳಲ್ಲೂ ಆಯಾ ಪ್ರಾದೇ ಶಿಕ ಅಸ್ಮಿತೆಗೆ ಪ್ರಾಧಾನ್ಯ ನೀಡುತ್ತಿದ್ದರು. ಬಿಜೆಪಿ ಸಂಘಟಿಸಿದ್ದ ಬಹುತೇಕ ಸಭೆಗಳಲ್ಲಿ ಇದನ್ನು ಕಾಣಬಹುದು. ಅದರಲ್ಲೂ ಆಯಾ ಪ್ರದೇಶದ ಸಂಸ್ಕೃತಿ ಮತ್ತು ಆಚರಣೆಗಳನ್ನು ಪ್ರೋತ್ಸಾಹಿಸುವ, ಬೆಂಬಲಿ ಸುವ ಮಾತುಗಳೂ ಇರುತ್ತಿದ್ದವು. ಹಾಗಾಗಿಯೇ 2014ರ ಮೋದಿಗಿಂತ ಈ ಮೋದಿ (ವರ್ಶನ್ 2.0) ಹೆಚ್ಚು ದೇಶೀಯವಾಗಿ ಕಾಣುತ್ತಾರೆ.
ಮತದಾನದ ದಿನಾಂಕ ಘೋಷಣೆಯಾದ ದಿನದಿಂದ ಆರಂಭಿಸಿ ಮೋದಿಯವರು ಒಟ್ಟು 142 ಪ್ರಚಾರ ಸಭೆ ಮತ್ತು ಜಾಥಾಗಳನ್ನು ಉದ್ದೇಶಿಸಿ ಮಾತನಾಡಿದ್ದರು. 51 ದಿನಗಳಲ್ಲಿ ಮೋದಿ ಪ್ರತಿ ರಾಜ್ಯದಲ್ಲಿ 2-4 ಸಭೆಗಳನ್ನು ನಡೆಸಿದ್ದರು. ಆಗ ಸ್ಥಳೀಯರ ಗಮನವನ್ನು ಸೆಳೆಯಲು, ಮನವನ್ನು ಕದಿಯಲು ಬಳಸಿದ್ದು ಸ್ಥಳೀಯ ಸಂಸ್ಕೃತಿಗಳ ಆರಾಧನೆ. ಆಯಾ ಪ್ರದೇಶಗಳ ಮಹಾತ್ಮರ ಉಲ್ಲೇಖ, ಸಂಸ್ಕೃತಿಯ ಪ್ರಸ್ತಾವವೆಲ್ಲವೂ ಮೋದಿ ಯನ್ನು ಆಪ್ತಗೊಳಿಸಿದವು ಎಂಬುದು ಸ್ಪಷ್ಟ.
ಉದಾಹರಣೆಗೆ, ಫೆಬ್ರವರಿಯಲ್ಲಿ ಮೋದಿಯವರು ಹುಬ್ಬಳ್ಳಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಆರಂಭಿಸಿದ್ದು ಕನ್ನಡದಲ್ಲಿ. ಬಳಿಕ ಜನರನ್ನು ಮುಟ್ಟಿದ್ದು ಉತ್ತರ ಕರ್ನಾಟಕ ಭಾಗದ ವೀರ ವನಿತೆ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕನಕದಾಸರು, ಕುಮಾರವ್ಯಾಸ ಎಲ್ಲರನ್ನೂ ಪ್ರಸ್ತಾವಿಸಿದರು. ಅಲ್ಲಿಗೇ ನಿಲ್ಲಲಿಲ್ಲ, ವರಕವಿ ದ. ರಾ. ಬೇಂದ್ರೆ, ಗಾನಗಂಗೆ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಷಿ, ಕುಮಾರ ಗಂಧರ್ವ ಎಲ್ಲರನ್ನೂ ಪ್ರಸ್ತಾವಿಸಿದರು. ಇದಷ್ಟೇ ಸಾಕು ಜನರ ಮನದೊಳಗೆ ಇಳಿಯಲು. ಅವರಲ್ಲಿ ಅವರಾಗಿ ಬಿಡುವುದು ಮೋದಿಯವರ ಮಾತಿನ ಲಕ್ಷಣ.
ಪಶ್ಚಿಮ ಬಂಗಾಲದಲ್ಲಿ ಬಂಗಾಲಿ ಭಾಷೆಯಲ್ಲಿ ಆರಂಭ, ಒಡಿಸ್ಸಾದಲ್ಲಿ ಅಲ್ಲಿನ ಭಾಷೆ ಬಳಕೆ, ಮಹಾ ರಾಷ್ಟ್ರದಲ್ಲಿ ಮರಾಠಿ ಹೀಗೆ.. ಭಾಷಣದ ಆರಂಭದಲ್ಲೇ ಎಲ್ಲರೊಳಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುವುದು ವಿಶೇಷ. ಅಷ್ಟೇ ಅಲ್ಲ, ಭಾಷಣದ ಕೊನೆಯಲ್ಲಿ ಆಯಾ ಭಾಷೆಯಲ್ಲೋ, ಅಲ್ಲಿನ ಮಹಾತ್ಮರನ್ನೋ, ವರ್ತಮಾನದ ಸಾಧಕರನ್ನೋ ಉಲ್ಲೇಖೀಸುತ್ತಿದ್ದರು. ಆಗ ಮೋದಿ ಎಲ್ಲರ ಕಣ್ಣಲ್ಲಿ ಅವರೊಳಗೊಬ್ಬನಾಗಿ ಬಿಡುತ್ತಿದ್ದರು.
ದಿರಿಸು-ಬಿರುಸು
ಮೋದಿ ಅವರು ತಮ್ಮ ವಸ್ತ್ರಗಳ ಮೇಲೆ ಅತೀವ ಕಾಳಜಿ ಹೊಂದಿದವ ರಾಗಿದ್ದರು. ಬೆಳಗ್ಗೆ ಮಧ್ಯಪ್ರದೇಶದಲ್ಲಿ ರ್ಯಾಲಿ ನಡೆಸಿ ಬಳಿಕ ಕೇರಳದಲ್ಲಿ ರ್ಯಾಲಿಗೆ ಬಂದಾಗ ಕೇರಳ ಶೈಲಿಯ ವಸ್ತ್ರಗಳಲ್ಲಿ ಮೋದಿ ಕಾಣುತ್ತಿದ್ದರು. ಮಧ್ಯಪ್ರದೇಶದಲ್ಲಿ ಅಲ್ಲಿನ ವೇಷಭೂಷಣದಲ್ಲಿ ಮೋದಿ ಇರುತ್ತಿದ್ದರು. ಅವರು ದಿನದಲ್ಲಿ 3 ರಾಜ್ಯಗಳಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದರೆ ಮೂರೂ ಕಡೆಯೂ ಅಲ್ಲಿನದ್ದೇ ದಿರಿಸು.
- ಕಾರ್ತಿಕ್ ಅಮೈ