ಬಳ್ಳಾರಿ: ಕೇಂದ್ರದಲ್ಲಿ ಐದು ವರ್ಷ ಅಧಿಕಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಗಿಂತ ಖಾಸಗಿ ಕಂಪನಿಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದೇ ಹೆಚ್ಚು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮುಖಂಡರಾದ ಭಾಸ್ಕರ್‌ರೆಡ್ಡಿ ಆರೋಪಿಸಿದರು. ನಗರದ ಗಾಂಧಿ ಭವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಸನ್ನದು ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳಿ ಬಂಡವಾಳಶಾಹಿಗಳನ್ನು ರಕ್ಷಣೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬಂಡವಾಳ ಶಾಹಿಗಳ ರಕ್ಷಕರಾಗಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ತೊಲಗಿಸಲು ಕಾರ್ಮಿಕ ವರ್ಗವು ಪಣತೊಟ್ಟಿದೆ ಎಂದು ತಿಳಿಸಿದರು.
ಬಂಡವಾಳ ಶಾಹಿಗಳ ಖಾಸಗಿ ಕಂಪನಿಗಳು ಅಭಿವೃದ್ಧಿಯಿಂದಾಗಿ ಸಾರ್ವಜನಿಕ ಕ್ಷೇತ್ರದ ಬಿಎಸ್‌ಎನ್‌ಎಲ್ ಸಂಸ್ಥೆಯು ಭಾರಿ ನಷ್ಟ ಅನುಭವಿಸುತ್ತಿದ್ದು, ಸಿಬ್ಬಂದಿಗೆ ವೇತನ ನೀಡಲಾಗದೆ ಮುಚ್ಚುವ ಸ್ಥಿತಿಗೆ ತಲುಪಿವೆ. ಇದಕ್ಕೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರವೇ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ 5 ವರ್ಷಗಳ ಆಡಳಿತದಲ್ಲಿ ದೇಶದ ಬೆಳವಣಿಗೆಗಿಂತ ಒಬ್ಬ ಖಾಸಗಿ ಮಾಲೀಕನ ಅಭಿವೃದ್ಧಿಗಾಗಿ ಶ್ರಮಿಸಿದ್ದೇ ಹೆಚ್ಚು. ಖಾಸಗಿ ಕಂಪನಿಗಳ ಉತ್ತೇಜನಕ್ಕಾಗಿ ರಿಯಾಯಿತಿಯನ್ನೂ ಕೊಡುತ್ತಿದ್ದಾರೆ. ಆದರೆ, ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿದ್ದಾರೆ ಎಂದರು.
ವಿವಿಧ ಕ್ಷೇತ್ರಗಳಲ್ಲಿನ ಅಸಂಘಟಿತ ಕಾರ್ಮಿಕರ 44 ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಬಂಡವಾಳಶಾಹಿಗಳ, ಮಾಲೀಕರ ಪರವಾಗಿ ಕೇವಲ 4 ಕಾಯ್ದೆಗಳನ್ನಾಗಿ ಬದಲಾಯಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಜಾರಿಯಲ್ಲಿದ್ದ ಈ 44 ಕಾರ್ಮಿಕ ಕಾನೂನುಗಳನ್ನು ಪ್ರಧಾನಿ ನರೇಂದ್ರ ಮೋದಿ ಬಂದ ಬಳಿಕ ತಿದ್ದುಪಡಿಗೆ ಉತ್ಸುಕತೆ ತೋರಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಕಾರ್ಮಿಕರಿಗೆ ದೊಡ್ಡ ಕೊಡಲಿ ಪೆಟ್ಟು ಬಿದ್ದಿದೆ. ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಸಣ್ಣ ಪುಟ್ಟ ಕಾರ್ಮಿಕರಿಗೆ ಉಳಿಗಾಲವಿಲ್ಲ. ಹಾಗಾಗಿ ಬಿಜೆಪಿ ಸೋಲಿಸಲು ಕಾರ್ಮಿಕ ವರ್ಗ ಪಣ ತೊಡಬೇಕು. ನಮ್ಮ ಹಕ್ಕುಗಳ ಮತ್ತು ಕಾಯ್ದೆಗಳ ರಕ್ಷಣೆಗೆ ಸಂಘಟಿತ ಹೋರಾಟದ ಅಗತ್ಯತೆ ಇದೆ ಎಂದರು.
ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕಾರ್ಮಿಕರಿಗೆ ನ್ಯಾಯ ಒದಗಿಸಿಲ್ಲ. ಎಲ್ಲರೂ ತಮ್ಮ ಹಿತಕ್ಕಾಗಿ ಆಡಳಿತ ನಡೆಸಿದರೆಯೇ ಹೊರತು ಕಾರ್ಮಿಕರ, ರೈತರ ಹಿತವನ್ನು ಯಾರೂ ನೋಡಲಿಲ್ಲ. ರೈತರ, ಕಾರ್ಮಿಕರ, ಜನವಿರೋಧಿ
ನೀತಿಗಳನ್ನು ಜಾರಿಗೆ ತಂದಿರುವವರ ವಿರುದ್ಧ ಹೋರಾಡದಿದ್ದರೆ ನಮ್ಮ ಬದುಕು ದುಸ್ತರವಾಗಲಿದೆ ಎಂದರು.
ಎಲ್ಲ ಪಕ್ಷಗಳಿಗೆ ಬಂಡವಾಳಶಾಹಿಗಳ ಹಿತವೇ ಮುಖ್ಯವಾಗಿದೆ. ಕಾರಣ ಒಬ್ಬ ಸಂಸದನ ಚುನಾವಣಾ ವೆಚ್ಚ 50 ಕೋಟಿ ರೂ. ಕೊಡುವುದು ಬಂಡವಾಳಶಾಹಿಗಳು. ಹಾಗಾಗಿ ಕಾರ್ಮಿಕರು, ರೈತರು ಎಲ್ಲರಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂದು ತಿಳಿಸಿದರು.
ಸಮಿತಿ ಮುಖಂಡರಾದ ಟಿ.ಜಿ.ವಿಠ್ಠಲ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಜೆ.ಸತ್ಯಬಾಬು, ಎಐಯುಟಿಯುಸಿ ಮುಖಂಡ
ಎ.ದೇವದಾಸ್, ಎಐಟಿಯುಸಿಯ ಎ.ಎಆರ್. ಎಂ.ಇಸ್ಮಾಯಿಲ್ ಸೇರಿದಂತೆ ಇತರರಿದ್ದರು.