Advertisement

ವಿಶ್ವಸಂಸ್ಥೆಯಲ್ಲಿ ಮೋದಿಗೆ ಪ್ರಾಶಸ್ತ್ಯ

11:14 PM Sep 23, 2019 | mahesh |

ನ್ಯೂಯಾರ್ಕ್‌: ತಾಪಮಾನ ವೈಪರೀತ್ಯ ಕುರಿತ ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಮೊದಲ ಸುತ್ತಿನಲ್ಲಿ ಮಾತ ನಾಡಿದ ನಾಯಕರ ಪೈಕಿ ಪ್ರಧಾನಿ ಮೋದಿಯೂ ಸೇರಿದ್ದು, ಭಾರತಕ್ಕೆ ಸಮ್ಮೇಳನದಲ್ಲಿ ಸಿಕ್ಕ ಪ್ರಾಶಸ್ತ್ಯವನ್ನು ಪ್ರತಿಬಿಂಬಿಸಿದೆ. ವಿಶ್ವಸಂಸ್ಥೆಯ ಮಹಾ ಅಧಿವೇಶನಕ್ಕೂ ಮುನ್ನ ಸೋಮವಾರ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ತಾಪಮಾನ ವೈಪರೀತ್ಯ ತಡೆ ಕುರಿತ ಸಮ್ಮೇಳನದಲ್ಲಿ ಮೋದಿ ಸೇರಿದಂತೆ ಹಲವು ದೇಶಗಳ ಗಣ್ಯರು ಮಾತನಾಡಿದರು.

Advertisement

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್‌ ಮಾತನಾಡಿದ ನಂತರ ನಾಲ್ಕನೆ ಯವರಾಗಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಬಗ್ಗೆ ಮಾತನಾಡಿದ್ದ ಗುಟೆರಸ್‌, ಸಮ್ಮೇಳನದಲ್ಲಿ ಮಹತ್ವದ ಘೋಷಣೆ ಮಾಡುವ ನಾಯಕರು ಹಾಗೂ ದೇಶಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದಿದ್ದರು. ಮೋದಿ ನಂತರದಲ್ಲಿ, ನ್ಯೂಜಿಲೆಂಡ್‌ ಪ್ರಧಾನಿ ಜಸಿಂದಾ ಆರ್ಡೆನ್‌, ಮಾರ್ಷಲ್‌ ದ್ವೀಪದ ಅಧ್ಯಕ್ಷ ಹಿಲ್ದಾ ಹೈನೆ, ಜರ್ಮನಿ ಛಾನ್ಸಲರ್‌ ಆಂಜೆಲಾ ಮೆರ್ಕೆಲ್‌ ಮಾತನಾಡಿದರು.

5 ಕುಟುಂಬವನ್ನು ಭಾರತ ಪ್ರವಾಸಕ್ಕೆ ಕಳುಹಿಸಿ: ವಿಶ್ವದ ವಿವಿಧ ಕಡೆ ಇರುವ ಭಾರತೀಯರು ತಮ್ಮ ದೇಶದಲ್ಲಿರುವ ಐದು ಕುಟುಂಬಗಳನ್ನು ಭಾರತಕ್ಕೆ ಪ್ರವಾಸಕ್ಕಾಗಿ ಕಳುಹಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಹೂಸ್ಟನ್‌ನಲ್ಲಿ ಭಾರತೀಯ ಸಮು ದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗಾಗಿ ಒಂದು ಸಹಾಯ ಮಾಡಬಹುದೇ? ನಿಮ್ಮ ಬಳಿ ಒಂದು ಸಣ್ಣ ವಿನಂತಿ ಮಾಡುತ್ತೇನೆ. ವಿಶ್ವದ ಎಲ್ಲ ಕಡೆ ವಾಸಿಸುತ್ತಿರುವ ಭಾರತೀಯರಲ್ಲಿ ನಾನು ಈ ವಿನಂತಿ ಮಾಡಿಕೊಳ್ಳುತ್ತೇನೆ. ಪ್ರತಿ ವರ್ಷ ಒಬ್ಬೊಬ್ಬರೂ ಕನಿಷ್ಠ ಐದು ಭಾರತೀಯೇತರ ಕುಟುಂಬ ಗಳನ್ನು ಭಾರತಕ್ಕೆ ಪ್ರವಾಸಕ್ಕಾಗಿ ಕಳು ಹಿಸುವ ನಿರ್ಧಾರ ಮಾಡಿ ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ ಆಕ್ಷೇಪ: ಇತರ ದೇಶಗಳ ಚುನಾವಣೆ ಯಲ್ಲಿ ಭಾರತ ಮಧ್ಯಪ್ರವೇಶಿಸದಿರುವ ನೀತಿ ಯನ್ನು ಪ್ರಧಾನಿ ಮೋದಿ ಮೀರಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್‌ ಪರ ಮೋದಿ ಪ್ರಚಾರ ನಡೆಸಿದ್ದರು. ಈ ಕುರಿತು ಸರಣಿ ಟ್ವೀಟ್‌ ಮಾಡಿದ ಕಾಂಗ್ರೆಸ್‌ ಮುಖಂಡ ಆನಂದ ಶರ್ಮಾ, ಅಮೆರಿಕಕ್ಕೆ ಮೋದಿ ಹೋಗಿರುವುದು ಭಾರತದ ಪ್ರಧಾನಿಯಾಗಿಯೇ ಹೊರತು, ಅಮೆರಿಕದ ಚುನಾವಣೆಗಳಲ್ಲಿ ಸ್ಟಾರ್‌ ಕ್ಯಾಂಪೇನರ್‌ ಆಗಿ ಅಲ್ಲ ಎಂದಿದ್ದಾರೆ. ಇದು ಭಾರತದ ನಿರ್ಲಿಪ್ತ ನೀತಿಗೆ ಅಡ್ಡಿಯಾಗುತ್ತದೆ.

ಭಾರತವು ಯಾವುದೇ ದೇಶದ ಚುನಾವಣೆಯಲ್ಲಿ ಯಾವುದೇ ಪಕ್ಷದ ಪರ ವಹಿಸದಂತೆ ನೀತಿಯನ್ನು ಕಾಪಾಡಿಕೊಂಡಿದ್ದೇವೆ. ಆದರೆ ಪ್ರಧಾನಿ ಮೋದಿ ಈ ವೇದಿಕೆಯಲ್ಲಿ ಅಬ್‌ ಕಿ ಬಾರ್‌ ಟ್ರಂಪ್‌ ಸರ್ಕಾರ್‌ ಎಂಬ ಘೋಷಣೆ ಮಾಡಿದ್ದಾರೆ. ಇಂಥ ಘೋಷಣೆಗಳನ್ನು ಮಾಡಬಾರದಿತ್ತು ಎಂದು ಶರ್ಮಾ ಹೇಳಿದ್ದಾರೆ.

Advertisement

ನೆಹರೂ ಪ್ರಸ್ತಾಪ: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂ ಹೆಸರು ಪ್ರಸ್ತಾಪಿಸಿದ್ದಕ್ಕೆ ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲ, ಅಮೆರಿಕದ ಡೆಮಾಕ್ರಾಟ್‌ ನಾಯಕರು ನೆಹರು ಕೊಡುಗೆಯನ್ನು ಮೋದಿಗೆ ನೆನಪಿಸಿದ್ದಕ್ಕೆ ಧನ್ಯವಾದವನ್ನೂ ಅವರು ತಿಳಿಸಿದ್ದಾರೆ.

ಮೋದಿಯನ್ನು ಸ್ವಾಗತಿಸುವ ವೇಳೆ ಮಾತನಾಡಿದ ಅಮೆರಿಕದ ಡೆಮಾಕ್ರಾಟ್‌ ಸಂಸದ ಸ್ಟೆನಿ ಹೋಯರ್‌, ಮಹಾತ್ಮ ಗಾಂಧಿ ಹಾಗೂ ನೆಹರೂರನ್ನು ಸ್ಮರಿಸಿದ್ದರು. ಈ ಕುರಿತು ಟ್ವೀಟ್‌ ಮಾಡಿದ ಅವರು, ಕೆಲವು ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿಯವರು ನೆಹರೂರನ್ನು ಹೊಗಳಿ ದ್ದರು. ನೆಹರೂರನ್ನು ವಾಜಪೇಯಿ ಕೂಡ ಅದ್ಭುತ ವಾಗಿ ಸ್ಮರಿಸಿದ್ದರು. ಆ ದಿನಗಳೆಲ್ಲ ಎಲ್ಲಿ ಕಳೆದು ಹೋದವು ಎಂದಿದ್ದಾರೆ.

ಮೋದಿಗೆ ಪ್ರಶಾಂತ್‌ ಕಿಶೋರ್‌ ಹೊಗಳಿಕೆ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ ಸಲಹೆಗಾರ ಹಾಗೂ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಆಪ್ತ ಪ್ರಶಾಂತ್‌ ಕಿಶೋರ್‌, ಹೌಡಿ ಮೋದಿ ಕಾರ್ಯಕ್ರಮವನ್ನು ಮೆಚ್ಚಿ ಟ್ವೀಟ್‌ ಮಾಡಿ ದ್ದಾರೆ. ಅಲ್ಲದೆ, ಚುನಾವಣೆ ಎದುರಿಸಲಿರುವ ಅಮೆರಿ ಕದ ಅಧ್ಯಕ್ಷರು ಹೌಡಿ ಮೋದಿ ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ತಂತ್ರ ರೂಪಿಸಿದ್ದು ಅತ್ಯಂತ ಚಾಣಾಕ್ಷ ನಡೆ. ಇಂತಹ ಕ್ರಮವನ್ನು ಭಾರತ ಹಿಂದೆಂದೂ ಕೈಗೊಂಡಿರಲಿಲ್ಲ ಎಂದು
ಪ್ರಶಾಂತ್‌ ಹೇಳಿದ್ದಾರೆ.

ಗಾಂಧಿ ಮ್ಯೂಸಿಯಂ ಉದ್ಘಾಟನೆ
ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ಹೌಡಿ ಮೋದಿ ಕಾರ್ಯಕ್ರಮದ ನಂತರ ಹೂಸ್ಟನ್‌ನಲ್ಲಿ ಪ್ರಧಾನಿ ಮೋದಿ ಎಟರ್ನಲ್‌ ಗಾಂಧಿ ಮ್ಯೂಸಿಯಂ ಅನ್ನು ಉದ್ಘಾಟಿಸಿದ್ದಾರೆ. ಅಲ್ಲದೆ, ಗುಜರಾತಿ ಸಮಾಜ ಹೂಸ್ಟನ್‌ ಇವೆಂಟ್‌ ಸೆಂಟರ್‌ ಹಾಗೂ ಶ್ರೀ ಸಿದ್ಧಿ ವಿನಾಯಕ ದೇಗುಲವನ್ನೂ ಉದ್ಘಾಟಿಸಿದ್ದಾರೆ. ಹೂಸ್ಟನ್‌ನಲ್ಲಿ ಸಾಂಸ್ಕೃತಿಕ ಕೇಂದ್ರವಾಗಿ ಗಾಂಧಿ ಮ್ಯೂಸಿಯಂ ಕೆಲಸ ಮಾಡಲಿದೆ. ಈ ಪ್ರಯತ್ನಕ್ಕೆ ನಾನೂ ಹಲವು ಕಾಲದಿಂದಲೂ ಕೈಜೋಡಿಸಿದ್ದೇನೆ. ಈ ಮ್ಯೂಸಿಯಂನಿಂದಾಗಿ ಯುವಕರಲ್ಲಿ ಗಾಂಧೀಜಿ ಚಿಂತನೆಗಳು ಜನಪ್ರಿಯವಾಗಲಿವೆ ಎಂದು ಉದ್ಘಾಟನೆಯ ನಂತರ ಪ್ರಧಾನಿ ಕಚೇರಿ ಟ್ವೀಟ್‌ ಮಾಡಿದೆ.

ತಾಪಮಾನ ವೈಪರೀತ್ಯ ತಡೆ ಕುರಿತ ಭಾರತದ ಕ್ರಮವು ಬಹು ಆಯಾಮವನ್ನು ಹೊಂದಿ ರುತ್ತದೆ. ಯಾಕೆಂದರೆ ನಾವು ಕೈಗೊಳ್ಳುವ ಯಾವುದೇ ಕ್ರಮವು ಜಾಗತಿಕ ಮಟ್ಟದಲ್ಲಿರುತ್ತದೆ. ಹೀಗಾಗಿ ನಾವು ನವೀಕರಿಸಬಹು ದಾದ ಇಂಧನದ ಮೇಲೆ ಹೆಚ್ಚು ಗಮನಹರಿಸಿದ್ದೇವೆ.
ಸೈಯದ್‌ ಅಕ್ಬರುದ್ದೀನ್‌, ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ

Advertisement

Udayavani is now on Telegram. Click here to join our channel and stay updated with the latest news.

Next