Advertisement

ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಮತ್ತೆ ಮೋದಿ ಪ್ರಧಾನಿ ಮಾಡಿ

07:31 AM Mar 09, 2019 | Team Udayavani |

ದೇವನಹಳ್ಳಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಗ್ರಾಮದ ಪ್ರತಿ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ಕಾರ್ಯಕ್ರಮಗಳನ್ನು ತಿಳಿಸಬೇಕು. ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಕಂಕಣಬದ್ಧರಾಗಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ ಕಾರ್ಯಕರ್ತರಿಗೆ ಸಲಹೆ ನೀಡಿದರು. ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಅಗಲಕೋಟೆ ಮಾರಮ್ಮ ದೇವಾಲಯದ ಆವರಣದಲ್ಲಿ ಚನ್ನರಾಯಪಟ್ಟಣ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.

Advertisement

ನಾಲ್ಕು ಹಳ್ಳಿಗಳನ್ನು ಸೇರಿಸಿ ಆ ಗ್ರಾಮಗಳಲ್ಲಿ ಬೂತ್‌ ಮಟ್ಟದ ಪದಾಧಿಕಾರಿಗಳು 10-10 ಜನರಂತೆ ಮನೆ ಮನೆಗೆ ಭೇಟಿ ನೀಡಿ, ಭಯೋತ್ಪಾದಕರನ್ನು ಸದೆಬಡಿದ ಸರ್ಜಿಕಲ್‌ ಸ್ಟ್ರೈಕ್‌, ಕಿಸಾನ್‌ ಸಮ್ಮಾನ್‌ ಯೋಜನೆ, ಬ್ಯಾಂಕುಗಳು, ವಿಮೆ, ಸರ್ಕಾರದ ಸಹಾಯಧನ ಎಲ್ಲವೂ ನಾಗರಿಕರ ಮನೆ ಬಾಗಿಲಿಗೇ ತಲುಪಬೇಕು. ಬಡವರ ಆರೋಗ್ಯ ಕಲ್ಯಾಣಕ್ಕಾಗಿ ಆಯೂಷ್‌ಮಾನ್‌ ಭಾರತ್‌, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಭಾರತ್‌ ಮಾಲಾ ಯೋಜನೆ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್‌ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಜನರಿಗೆ ಮನದಟ್ಟು ಮಾಡಬೇಕೆಂದು ಹೇಳಿದರು.

ಘಟಬಂಧ‌ನ್‌ನಿಂದ ಪ್ರಯೋಜನವಿಲ್ಲ: ದೇಶದಲ್ಲಿ ಯಾವುದೇ ಘಟಬಂಧನ್‌ನಿಂದ ಯಾವುದೇ ಉಪಯೋಗವಿಲ್ಲ. ಈಗಾಗಲೇ ಘಟಬಂಧ‌ನ್‌ ಮಾಡಿಕೊಂಡಿರುವವರಲ್ಲಿ ಅಪಸ್ವರ ಕೇಳಿಬರುತ್ತಿದೆ. ಯಾವಾಗ ಕಿತ್ತುಹೋಗುತ್ತದೆಯೋ ಗೊತ್ತಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿ.ಎನ್‌.ಬಚ್ಚೇಗೌಡ ಅವರನ್ನು ಗೆಲ್ಲಿಸಿಕೊಂಡು ಲೋಕಸಭಾ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದರು.  

ಮೋದಿ ಮತ್ತೆ ಪ್ರಧಾನಿ ಆಗ್ತಾರೆ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್‌.ಎಂ.ರವಿಕುಮಾರ್‌ ಮಾತನಾಡಿ, ಬಿಜೆಪಿ ಲೋಕಸಭಾ ಸದಸ್ಯರು ಮತ್ತು ಶಾಸಕರು ಇಬ್ಬರು ಇಲ್ಲದಿರುವುದರಿಂದ ಪೊಲೀಸ್‌ ಠಾಣೆ, ತಾಲೂಕು ಕಚೇರಿ ಹಾಗೂ ಇತರೆ ಕಡೆ ಕೆಲಸಗಳು ಆಗುತ್ತಿಲ್ಲ. ಪಕ್ಷದಿಂದ ಸಂಸದರನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಕೆಲಸಗಳು ಆಗುತ್ತವೆ. 300ಕ್ಕೂ ಹೆಚ್ಚು ಸ್ಥಾನಗಳು ಬರುವುದರ ಮೂಲಕ ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ.

ಕಳೆದ ಚುನಾವಣೆಯಲ್ಲಿ 36 ಸಾವಿರ ಮತಗಳನ್ನು ತಾಲೂಕಿನಿಂದ ಕೊಡಲಾಗಿತ್ತು. ಈ ಬಾರಿ 70 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಲಾಗುತ್ತದೆ. ಮೊದಲು ವ್ಯಕ್ತಿಯನ್ನು ನೋಡದೇ ದೇಶ ನೋಡಬೇಕು. ದೇಶ ಇದ್ದರೆ ನಾವು ಉಳಿಯುವೆವು ಎಂದು ಹೇಳಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಭಾಕರ್‌ ಮಾತನಾಡಿ, ನಮ್ಮ ವೈಮನಸ್ಸುಗಳನ್ನು ಬಿಟ್ಟು ಪಕ್ಷ ಸಂಘಟನೆ ಮಾಡಬೇಕು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು  500 ಮನೆಗಳನ್ನು ಸಂಪರ್ಕಿಸಿ ಮತ ಬರುವಂತೆ ಮಾಡಬೇಕೆಂದರು.  

Advertisement

ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಅಂಬರೀಶ್‌ ಗೌಡ, ತಾಲೂಕು ರೈತಮೊರ್ಚಾ ಉಪಾಧ್ಯಕ್ಷೆ ಗೋಕರೆ ಗೋಪಾಲ್‌, ಯುವ ಮೋರ್ಚಾ ಅಧ್ಯಕ್ಷ ಆನಂದ್‌ಗೌಡ, ಕೃಷಿಕ ಸಮಾಜದ ನಿರ್ದೇಶಕ ಮಾರೇಗೌಡ, ಚನ್ನರಾಯಪಟ್ಟಣ ಹೋಬಳಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಮಾಂಜಿನೇಯ, ಮುಖಂಡ ವೆಂಕಟೇಗೌಡ, ಶಿವಪ್ರಸಾದ್‌, ನಂದೀಶ್‌, ರಾಧಕೃಷ್ಣ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next