ಶ್ರೀನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಕೇವಲ ಮನ್ ಕಿ ಬಾತ್ ಬಗ್ಗೆ ಗಮನ ಹರಿಸುತ್ತಾರೆಯೇ ಹೊರತು, ಕಾಮ್ ಕಿ ಬಾತ್ (ಕೆಲಸದ ವಿಚಾರ) ಬಗ್ಗೆ ಗಮನವೇ ಇಲ್ಲ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಶ್ರೀನಗರದ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಮೋದಿ ಕೇವಲ ಅವರ ಮನ್ ಕಿ ಬಾತ್ ಬಗ್ಗೆ ಮಾತನಾಡುತ್ತಾರೆ. ಉದ್ಯೋಗ ಅವಕಾಶಗಳು, ಬೆಲೆ ಏರಿಕೆ ನಿಯಂತ್ರಣದ ಸೇರಿದಂತೆ ಕೆಲಸ ವಿಚಾರವನ್ನು ಅವರು ಮಾತನಾಡುವುದೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
“ಲೋಕಸಭಾ ಚುನಾವಣೆಗೆ ಮುನ್ನ ನೀವು ಮೋದಿಯವರ 56 ಇಂಚಿನ ಎದೆಯ ಬಗ್ಗೆ ಕೇಳಿರಬೇಕು. ಆದರೆ ನೀವು ಅವರನ್ನು ಇದೀಗ ಗಮನಿಸಿದ್ದೀರಾ? ಮನಸ್ಥಿತಿ ಬದಲಾಗಿದೆ. ಐಎನ್‌ಡಿಐಎ ಮೈತ್ರಿಕೂಟ ಮತ್ತು ಕಾಂಗ್ರೆಸ್ ಮೋದಿಯವರ ಮನೋವಿಜ್ಞಾನವನ್ನು ಬದಲಾಯಿಸಿವೆ” ಎಂದು ಅವರು ಶ್ರೀನಗರದಲ್ಲಿ ಹೇಳಿದರು.
“ಇತ್ತೀಚಿನ ದಿನಗಳಲ್ಲಿ, ಪ್ರಧಾನಿ ಮೋದಿಯವರ ಮುಖವು ಬದಲಾಗಿದೆ, ಅವರ ಮನಸ್ಥಿತಿ ಬದಲಾಗಿದೆ. ಇದಕ್ಕೆ ಐಎನ್‌ಡಿಐಎ ಮೈತ್ರಿ, ಕಾಂಗ್ರೆಸ್ ಪಕ್ಷ ಮತ್ತು ಈ ದೇಶದ ಜನರು ಕಾರಣ” ಎಂದು ರಾಹುಲ್ ಗಾಂಧಿ ಹೇಳಿದರು.
ದಶಕದ ಬಳಿಕ ವಿಧಾನಸಭೆ ಚುನಾವಣೆ ಕಾಣುತ್ತಿರುವ ಜಮ್ಮು ಕಾಶ್ಮೀರದಲ್ಲಿ ಮೂರು ಹಂತದ ಮತದಾನ ನಡೆಯುತ್ತಿದೆ. ಈಗಾಗಲೇ ಮೊದಲ ಹಂತ ಮುಗಿದಿದ್ದು, ಸೆ.25ರಂದು ಜಮ್ಮು ಕಾಶ್ಮೀರದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ.