ಇಂಫಾಲ/ಲಕ್ನೋ: “ನಾನು ಪ್ರಧಾನಿಯಾದ ಬಳಿಕ ಈಶಾನ್ಯ ರಾಜ್ಯಕ್ಕೆ ಮತ್ತು ಮಣಿಪುರದ ಜನರ ಮನೆ ಬಾಗಿಲಿಗೆ ಹೊಸದಿಲ್ಲಿಯನ್ನು ಮತ್ತು ಭಾರತ ಸರಕಾರವನ್ನೇ ತಂದಿದ್ದೇನೆ’.
– ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶೀಘ್ರದಲ್ಲಿಯೇ ವಿಧಾನಸಭೆ ಚುನಾವಣೆ ನಡೆಯಲಿರುವ ಮಣಿಪುರ ರಾಜಧಾನಿ ಇಂಫಾಲ್‌ನಲ್ಲಿ ಮಂಗಳವಾರ 1,850 ಕೋಟಿ ರೂ. ಮೌಲ್ಯದ 13 ಯೋಜನೆಗಳ ಉದ್ಘಾಟನೆ ಮತ್ತು 2,950 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಮಣಿಪುರದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಸರಕಾರಗಳು ಯಾವತ್ತೂ ಆರ್ಥಿಕ ದಿಗ್ಬಂಧನಕ್ಕೆ ಕಾರಣಗಳಾಗಿದ್ದವು. ಜತೆಗೆ ಹೊಸದಿಲ್ಲಿಯಲ್ಲಿದ್ದ ಸರಕಾರಗಳೂ ರಾಜ್ಯವನ್ನು ನಿರ್ಲಕ್ಷಿಸಿದ್ದವು ಎಂದರು. ಸದ್ಯ ರಾಜ್ಯದಲ್ಲಿ ಹಿಂಸೆ ಸೇರಿದಂತೆ ಅಹಿತಕರ ಘಟನೆಗಳು ನಡೆಯುವುದಿಲ್ಲ. ಇಲ್ಲಿ ನಾವು ಶಾಂತಿ ಮತ್ತು ಅಭಿವೃದ್ಧಿಯ ವಾತಾವರಣ ನಿರ್ಮಾಣ ಮಾಡಿದ್ದೇವೆ ಎಂದರು ಪ್ರಧಾನಿ.
ಇದನ್ನೂ ಓದಿ:ಕೋವಿಡ್ ಹೆಚ್ಚಳ : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ಬೆಂಗಳೂರಿನಲ್ಲಿ 2 ವಾರ ಶಾಲೆ ಬಂದ್
ಕನಸಿನಲ್ಲಿ ಕೃಷ್ಣ ಬರುತ್ತಿದ್ದಾನೆ..: “ಪ್ರತೀ ದಿನ ನನಗೆ ಕನಸಿನಲ್ಲಿ ಶ್ರೀಕೃಷ್ಣ ಬರುತ್ತಿದ್ದಾನೆ. ಮುಂದಿನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವೇ ಅಧಿಕಾರಕ್ಕೆ ಏರಲಿದೆ ಎಂದು ಹೇಳುತ್ತಿದ್ದಾನೆ’ ಹೀಗೆಂದು ಮಾಜಿ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಹೇಳಿದ್ದಾರೆ. ಲಕ್ನೋದಲ್ಲಿ ಮಾತನಾಡಿದ ಅವರು, ಶಾಸಕಿ ಮಾಧುರಿ ವರ್ಮಾ ಅವರು ಬಿಜೆಪಿ ಸೇರಿದ್ದಕ್ಕೆ ವ್ಯಂಗ್ಯವಾಗಿ ಅವರು ಈ ಮಾತುಗಳನ್ನಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದರೆ ಉತ್ತರ ಪ್ರದೇಶದಲ್ಲಿ ರಾಮ ರಾಜ್ಯ ಸ್ಥಾಪನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ನಾನು ಹೇಳಿದ್ದೇನಾಯಿತು?
ರಾಜ್ಯದ ಕ್ರೀಡಾಪುಟಗಳ ಜತೆ ಮಾತುಕತೆ ವೇಳೆ ಪ್ರಧಾನಿ ಮೋದಿ ಕ್ರೀಡಾಪಟು ಎಸ್.ಮೀರಾ ಬಾಯಿ ಚಾನು ಜತೆಗೆ “ನಾನು ಹೇಳಿದ್ದ ಕೆಲಸ ಏನಾಯಿತು’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು “ಅದು ಪ್ರಗತಿಯಲ್ಲಿದೆ’ ಎಂದು ಉತ್ತರಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಳುಗಳನ್ನು ದಿಲ್ಲಿಯಲ್ಲಿ ಭೇಟಿಯಾಗಿದ್ದ ಪ್ರಧಾನಿ, ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮನವೊಲಿಸಬೇಕು ಎಂದಿದ್ದರು. ಆ ಬಗ್ಗೆ ಪ್ರಧಾನಿ, ಚಾನು ಅವರಲ್ಲಿ ಆತ್ಮೀಯವಾಗಿ ಪ್ರಶ್ನಿಸಿದ್ದಾರೆ.