Advertisement

ಮೋದಿ ಆಗಮನ; ಕೇಂದ್ರ ಮೈದಾನಕ್ಕೆ ಪೊಲೀಸ್‌ ಕಣ್ಗಾವಲು

10:31 PM Apr 08, 2019 | Team Udayavani |

ಮಹಾನಗರ: ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎ. 13ರಂದು ಮಂಗಳೂರಿಗೆ ಆಗಮಿಸಿ, ಕೇಂದ್ರ ಮೈದಾನದಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸುವ ಹಿನ್ನೆಲೆ ಯಲ್ಲಿ ಮೈದಾನಕ್ಕೆ ಈಗಿಂದಲೇ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

Advertisement

ಮಂಗಳೂರಿಗೆ ಮೋದಿ ಆಗಮಿಸಲು ಐದು ದಿನಗಳು ಮಾತ್ರ ಬಾಕಿ ಉಳಿದಿರುವ ಕಾರಣ ದ.ಕ. ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ವ್ಯಾಪಕ ಭದ್ರತೆ ಹಾಗೂ ಸಿದ್ಧತೆ ಕೈಗೊಂಡಿದೆ.

ಮೋದಿ ಭಾಷಣ ಮಾಡಲಿರುವ ಕೇಂದ್ರ ಮೈದಾನದ ಫುಟ್‌ಬಾಲ್‌ ಸ್ಟೇಡಿಯಂ ಸುತ್ತ ಈಗ ಪೊಲೀಸ್‌ ಪಹರೆ ನಿಯೋಜಿಸಲಾಗಿದ್ದು, ಮೈದಾನದ ನಾಲ್ಕೂ ಭಾಗಗಳಲ್ಲಿ ಜನರ ಆಗಮನಕ್ಕೆ ಅವಕಾಶ ನಿರಾಕರಿಸಲಾಗಿದೆ.

ಮೈದಾನಕ್ಕೆ ಜನರು ಹೋಗದಂತೆ ಈಗಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಭದ್ರತೆ ಗಾಗಿ ಪೊಲೀಸ್‌ ವಾಹನವನ್ನು ಕೂಡ ನಿಯೋಜಿಸಲಾಗಿದೆ. ಮೈದಾನದ ಸುತ್ತಮುತ್ತ ಅನುಮಾನಾಸ್ಪದವಾಗಿ ಸಂಚರಿಸುವ ಜನರ ಬಗ್ಗೆ ಪೊಲೀಸರು ಕಣ್ಣಿಟ್ಟಿದ್ದಾರೆ.

ರಾಜ್ಯ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಿಯಮಾನುಸಾರ ಪ್ರಧಾನಿಗೆ ನೀಡಬೇಕಾದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಎ. 5ರಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿತ್ತು.

Advertisement

ಗರಿಷ್ಠ ಭದ್ರತೆ
ನಗರಕ್ಕೆ ಪ್ರಧಾನಿ ಆಗಮಿಸುವ ವೇಳೆ ಅವರಿಗೆ ಗರಿಷ್ಠ ಭದ್ರತೆ ಒದಗಿಸಬೇಕಾಗಿದೆ. ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಅವರು ಪೊಲೀಸ್‌ ಅಧಿಕಾರಿಗಳ ಜತೆಗೆ ವಿಶೇಷ ಸಭೆ ನಡೆಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ವೇಳೆ ಸದಾಚಾರ ಸಂಹಿತೆ ಉಲ್ಲಂಘನೆಯಾಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸುವಂತೆ ಅವರು ಪಕ್ಷದವರಿಗೆ ಸೂಚನೆ ನೀಡಿದ್ದಾರೆ. ಪ್ರಚಾರ ಸಾಮಗ್ರಿಗಳನ್ನು ಅನುಮತಿಯೊಂದಿಗೆ ಬಳಸುವಂತೆ ಸೂಚಿಸಿದ್ದಾರೆ.

ವಿಮಾನ ನಿಲ್ದಾಣದ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳು, ಆಗಮನ ಮತ್ತು ನಿರ್ಗಮನದ ಬಗ್ಗೆ ಪಿಎಂಒದಿಂದ ಬಂದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

ಈ ಮಧ್ಯೆ, ಮೋದಿ ಆಗಮನದ ಕಾರಣದಿಂದ ಬಿಜೆಪಿಯು ಮೈದಾನದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ಆರ್‌. ಅಶೋಕ್‌ ನೇತೃತ್ವದಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಗಿದೆ. ಚಪ್ಪರ ಹಾಕಲು ಬೇಕಾದ ವಸ್ತುಗಳನ್ನು ಮೈದಾನಕ್ಕೆ ತರಿಸಲಾಗಿದ್ದು ಸಿದ್ಧತೆ ನಡೆಸಲಾಗುತ್ತಿದೆ.

ಪ್ರಧಾನಿ ಮಂಗಳೂರಿಗೆ ಆಗಮಿಸುವ ಕಾರಣಕ್ಕಾಗಿ ವಿಮಾನ ನಿಲ್ದಾಣದಿಂದ ಸ್ಟೇಟ್‌ಬ್ಯಾಂಕ್‌ವರೆಗಿನ ಸುಮಾರು 15 ಕಿ.ಮೀ. ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಸ್ತೆಯಲ್ಲಿ ಹೊಂಡ-ಗುಂಡಿಗಳು ಇರದಂತೆ ನೋಡಿಕೊಳ್ಳಲು ಹಾಗೂ ಯಾವುದೇ ರೀತಿಯ ಗೊಂದಲಗಳಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತದ ಪರವಾಗಿ ಮಂಗಳೂರು ಮನಪಾ ಆಯುಕ್ತರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next