Advertisement

18 ರಿಂದ ಬಿಜೆಪಿ ಸ್ಟಾರ್‌ ಕ್ಯಾಂಪೇನ್‌:ಮೋಡಿ ಮಾಡಲಿದ್ದಾರೆ ಮೋದಿ,ಯೋಗಿ

03:16 PM Apr 11, 2018 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೇರಲು ರಣತಂತ್ರ ನಡೆಸುತ್ತಿರುವ ಬಿಜೆಪಿ ಎಪ್ರಿಲ್‌ 18 ರಿಂದ ತಾರಾ ಪ್ರಚಾರಕರ ಮೂಲಕ ಭರ್ಜರಿ ಪ್ರಚಾರ ಮಾಡಿ ಮತದಾರರನ್ನು ಸೆಳೆಯಲು ಮುಂದಾಗಿದೆ. 

Advertisement

ಎಪ್ರಿಲ್‌ 18 ರಿಂದ ಭರ್ಜರಿ  ಸಮಾವೇಶಗಳನ್ನು ನಡೆಸಲು ಸಿದ್ದತೆಗಳನ್ನು ನಡೆಸಲಾಗಿದ್ದು, 20 ಬೃಹತ್‌ ಸಮಾವೇಶಗಳನ್ನು ನಡೆಸಿ ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಭಾಷಣಗಳನ್ನು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.  

ಪ್ರಧಾನಿ ಅವರು ಬೆಂಗಳೂರು ಸೇರಿದಂತೆ ರಾಜ್ಯದ 3  ಕಡೆಗಳಲ್ಲಿ ರೋಡ್‌ ಶೋಗಳನ್ನು ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿಯ ಇನ್ನೋರ್ವ ತಾರಾ ಪ್ರಚಾರಕರಾದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕರಾವಳಿಯ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. 

ಉಳಿದಂತೆ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಅರುಣ್‌ ಜೇಟ್ಲಿ , ಮುಖ್ತಾರ್‌ ಅಬ್ಬಾಸ್‌ ನಖ್ವಿ ಸೇರಿದಂತೆ ಇತರ ಕೆಲ ಸಚಿವರು ಸಿನಿಮಾ ತಾರೆಯರು ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಮೋದಿ ಭಾಷಣ ಪ್ರಮುಖ ಅಸ್ತ್ರ 
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಯುವ ಜನತೆ ಮತ್ತು ಹಲವರು ನೆಚ್ಚಿಕೊಳ್ಳುವ ಕಾರಣ ಅದನ್ನೇ ಪ್ರಮುಖ ಪ್ರಚಾರ ಅಸ್ತ್ರವನ್ನಾಗಿ ಬಿಜೆಪಿ ಬಳಸಿಕೊಳ್ಳುವುದು ನಿಶ್ಚಿತ. 

ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ ಕರ್ನಾಟಕದಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವುದು ಮೋದಿ ಅವರ  ಗುರಿಯಾಗಿದೆ. ಆ ನಿಟ್ಟಿನಲ್ಲಿ ಜನರಿಗೆ ಹತ್ತಿರವಾಗಲು ಇದೊಂದು ಸುವರ್ಣಾವಕಾಶ ಪ್ರಧಾನಿಯವರಿಗೆ ದೊರಕಿದೆ. ಹೀಗಾಗಿ 15 ದಿನಗಳ ಕಾಲ ಹೆಚ್ಚಿನ ಸಮಯವನ್ನು ಪ್ರಧಾನಿ ಕರ್ನಾಟಕದಲ್ಲಿ ಕಳೆಯಲಿದ್ದಾರೆ ಎನ್ನಾಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next