Advertisement

ಮೋದಿ ಕಲಬುರಗಿಗೆ ಬರಲಿ ಉತ್ತರ ಕೊಡುವೆ…

06:21 AM Feb 22, 2019 | |

ಕಲಬುರಗಿ: ಕಲಬುರಗಿ ನನ್ನ ನಾಡು. ಕಲಬುರಗಿ ಜನರೇ ನನ್ನನ್ನು ಬೆಳೆಸಿದ್ದಾರೆ. 11 ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಮುಂದೆಯೂ ನನ್ನನ್ನು ಗೆಲ್ಲಿಸುತ್ತಾರೆ. ಕಲಬುರಗಿ ಬಿಟ್ಟು ಬೇರೆ ಕಡೆಗೆ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸಲ್ಲ. ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂಬುದೆಲ್ಲಾ ಸುಳ್ಳು ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

Advertisement

ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹೇಳಿದ್ದಕ್ಕೆಲ್ಲ ಸಂಸತ್‌ನಲ್ಲಿ ಇಷ್ಟು ದಿನ ಉತ್ತರ ಕೊಟ್ಟಿದ್ದೇನೆ. ಸಂಸತ್‌ನಲ್ಲಿ ಕಲಬುರಗಿ ಜನರ ಹೆಸರು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ. 

ಮುಂದಿನ ತಿಂಗಳು ಪ್ರಧಾನಿ ಮೋದಿ ಕಲಬುರಗಿಗೆ ಬರುತ್ತಾರೆ. ಆಗ ಏನು ಹೇಳುತ್ತಾರೋ ನೋಡಿ ಮತ್ತೆ ನಾನು ಉತ್ತರ ಕೊಡುತ್ತೇನೆ. ಕಳೆದ ಬಾರಿ ಕೂಡ ಮೋದಿ ಇಲ್ಲಿಗೆ ಬಂದು ಭಾಷಣ ಮಾಡಿ ಹೋದರು. ಈ ಸಲವೂ ಅವರು ಬಂದು ಭಾಷಣ ಮಾಡುತ್ತಾರೆ. ಅವರ ಭಾಷಣ ಎಲ್ಲರೂ ಕೇಳಿ. ಭಾಷಣ ಕೇಳಲು ನಾನು ಬೇಡ ಎನ್ನಲ್ಲ. ಎಲ್ಲರ ಭಾಷಣವನ್ನೂ ಕೇಳಬೇಕು. ನಿಮಗೆ ತಿಳಿದಿದ್ದು ಮಾಡಬೇಕು ಎಂದರು.

1951ರಲ್ಲಿ ದೇಶದ ಪರಿಸ್ಥಿತಿ ಹೇಗಿತ್ತು. 2011ರಲ್ಲಿ ಪರಿಸ್ಥಿತಿ ಹೇಗಾಯಿತು. ನೆಹರೂ, ಲಾಲ್‌ಬಹುದ್ದೂರ ಶಾಸ್ತ್ರಿ. ಇಂದಿರಾ ಗಾಂಧಿ, ಪಿ.ವಿ. ನರಸಿಂಹರಾವ್‌, ಮನಮೋಹನ್‌ಸಿಂಗ್‌ ಏನು ಮಾಡಿದರು ಎಂದು ಅಂಕಿ-ಅಂಶಗಳ ಸಮೇತ ನಾನು ಸಂಸತ್‌ನ ಮುಂದೆ ಇಟ್ಟಿದ್ದೇನೆ. ಸಂಸತ್‌ನಲ್ಲಿ ನಾನು ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಲ್ಲ ಎಂದರು. 

ಪ್ರತಿ ವರ್ಷ ಎರಡು ಕೋಟಿ ನೌಕರಿ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ, ಕೇಂದ್ರ ಸರ್ಕಾರದ ನ್ಯಾಷನಲ್‌ ಸ್ಯಾಂಪಲ್‌ ಅರ್ಗನೈಸೇಷನ್‌ ಸರ್ವೆ (ಎನ್‌ಎಸ್‌ಒಎಸ್‌) ಪ್ರಕಾರವೇ ನಾಲ್ಕೂವರೆ ವರ್ಷ ಕೇವಲ 27 ಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ. 38 ಲಕ್ಷ ಜನ ಇದ್ದ ನೌಕರಿಗಳನ್ನೇ ಕಳೆದುಕೊಂಡಿದ್ದಾರೆ. ಇದು ಐದು ವರ್ಷದಲ್ಲಿ 10 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿದವರ ಕತೆಯಾಗಿದೆ. ಕೇಂದ್ರದಲ್ಲಿ 25 ಲಕ್ಷ ಹುದ್ದೆಗಳು ಖಾಲಿ ಇವೆ. ಈ 25 ಲಕ್ಷ ಹುದ್ದೆಗಳನ್ನಾದರೂ ಭರ್ತಿ ಮಾಡಿದ್ದರೆ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಬಂಡವಾಳ, ಕಂಪನಿಗಳನ್ನು ತಂದು ನೌಕರಿ ಕೊಡಿಸುವ ಕೆಲಸವೂ ಆಗಲಿಲ್ಲ ಎಂದರು.

Advertisement

550 ಕೋಟಿ ತುಂಬಿ, ಇಲ್ಲವೇ ಜೈಲಿಗೆ ಹೋಗಿ ಎಂದು ಅನಿಲ ಅಂಬಾನಿಗೆ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ. ಇಂಥವರಿಗೆ ಮೋದಿ ಬೆಂಬಲವಾಗಿ ನಿಲ್ಲುತ್ತಾರೆ. ನೋಟ್‌ ಬ್ಯಾನ್‌ನಿಂದ ಭಯೋತ್ಪಾದನೆ, ಕಪ್ಪುಹಣ ಸ್ಥಗಿತವಾಗುತ್ತಿದೆ ಎಂದು ಹೇಳಿದ್ದರು. ಆದರೆ, ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ 44 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದರು. ಎಲ್ಲರೂ ಒಗ್ಗೂಡಿ ದೇಶದ ರಕ್ಷಣೆಗೆ ಹೋರಾಡಬೇಕು. ಸರ್ಕಾರಕ್ಕೂ ಪ್ರತಿಪಕ್ಷಗಳ ಸಾಥ್‌ ಕೊಡುತ್ತವೆ. ಇಂದಿರಾ ಗಾಂಧಿ ಪಾಕಿಸ್ತಾನ ವಿರುದ್ಧ ಯುದ್ಧ ಮಾಡಿ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿದರು. ಆ ರೀತಿ ಇವರೇನಾದರೂ ಮಾಡಿದ್ರಾ? ಸುಮ್ಮನೆ ಅದು ಬಿಟ್ಟು ನೋಟ್‌ಬ್ಯಾನ್‌ನಿಂದ ಭಯೋತ್ಪಾದನೆ ನಿಂತಿತು ಎಂದು ಹೇಳುತ್ತಾರೆ. ಸುಳ್ಳು ಹೇಳುವವರಿಗೆ ಮೋಸ ಹೋಗಬೇಡಿ ಎಂದರು.

ಪ್ರಧಾನಿಮೋದಿಗೆ ವಚನದ ಚಾಟಿ ಏಟು
ಸಂಸತ್‌ನಲ್ಲಿ ಪ್ರಧಾನಿ ಮೋದಿ “ದಯವೇ ಧರ್ಮದ ಮೂಲವಯ್ಯ’ ಎಂಬ ಬಸವಣ್ಣನ ವಚನ ಹೇಳಿದ್ದಾರೆ. ಬಸವಣ್ಣನವರನ್ನು ಪ್ರಸ್ತಾಪ ಮಾಡಿದರೆ ಕರ್ನಾಟಕದಲ್ಲಿ ಮತ ಗಳಿಸಬಹುದು ಎಂದು ಮೋದಿ ತಿಳಿದುಕೊಂಡಿದ್ದಾರೆ. “ದಯವೇ ಧರ್ಮದ ಮೂಲವಯ್ಯ’ ಎಂದು ಹೇಳಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದೇ ರೀತಿ ನೀವು ನಡೆಯಬೇಕು. ಅದನ್ನು ಬಿಟ್ಟು ನಿಮಗೆ ತಿಳಿದಂಗೆ ನಡೆದುಕೊಂಡಿದ್ದೀರಿ ಎಂದು ಸಂಸತ್‌ನಲ್ಲೇ ನಾನು ಬಸವಣ್ಣನ ಮತ್ತೂಂದು ವಚನವನ್ನು ಹೀಗೆ ಹೇಳುವ ಮೂಲಕ ಪ್ರಧಾನಿಯವರಿಗೆ ಪ್ರತ್ಯುತ್ತರ ನೀಡಿದ್ದೆನೆ ಎಂದು ಖರ್ಗೆ ವಿವರಿಸಿದರು….

ಕಳಬೇಡ-ರಫೇಲ್‌ನಲ್ಲಿ ದುಡ್ಡು ಕದಿಯಬೇಡ ಕೊಲಬೇಡ- ದಲಿತರಿಗೆ, ಅಲ್ಪಸಂಖ್ಯಾತರಿಗೆ ಹೊಡೆಯಬೇಡ, ಕೊಲೆ ಮಾಡಬೇಡ ಹುಸಿಯ ನುಡಿಯಲು ಬೇಡ- ನೌಕರಿ ಕೊಡುತ್ತೇನೆ, ರೈತರ ಅನುದಾನ ದುಪ್ಪಟ್ಟು ಮಾಡುತ್ತೇನೆ ಹೇಳಿದ್ದೆ ಮುನಿಯಬೇಡ- ನಾವು ಏನಾದರೂ ಹೇಳಿದರೆ ಮುನಿಸಿಕೊಂಡು ಮಾತೇ ಆಡಲ್ಲ. ಅನ್ಯರಿಗೆ ಅಸಹ್ಯಪಡಬೇಡ- ಗಾಂಧಿ ಕುಟುಂಬ ಬಂತು, ವಂಶ ಪಾರಂಪರ್ಯ ಅಂತೆಲ್ಲ ಹೇಳಬೇಡ ತನ್ನ ಬಣ್ಣಿಸಬೇಡ- ನಾನೇ ಸರ್ಜಿಕಲ್‌ ದಾಳಿ ಮಾಡಿಸಿದೆ. ನೋಟ್‌ ಬ್ಯಾನ್‌ ಮಾಡಿದೆ ಎಂದು ಬಣ್ಣಿಸಿಕೊಳ್ಳಬೇಡ ಇದಿರ ಹಳಿಯಲು ಬೇಡ- ಐಟಿ, ಇಡಿ ಮೂಲಕ ವಿರೋಧಿಗಳಿಗೆ ತೊಂದರೆ ಕೊಡೋದು ಬೇಡ.

ಅಲ್ಲದೇ, ಬಸವಣ್ಣ, ಬುದ್ಧ, ಗಾಂಧಿ, ಅಂಬೇಡ್ಕರ್‌ ಅವರ ವಿಚಾರಗಳನ್ನು ಪ್ರಸ್ತಾಪಿಸುವವರಿಗೆ ಕರುಣೆ ಮತ್ತು ಪ್ರಜ್ಞೆ ಇರಬೇಕು. ಧರ್ಮದ ಪ್ರಕಾರ ನಡೆದುಕೊಳ್ಳಬೇಕು. ಸರಿಯಾದ ದೃಷ್ಟಿ, ಸಂಕಲ್ಪ, ಮಾತು, ಜೀವನೋಪಾಯ, ಮನೋಜಾಗ್ರತೆ ಇರಬೇಕು ಎಂಬ ಬುದ್ಧನ ಸಂದೇಶವನ್ನು ಖರ್ಗೆ ಹೇಳಿ ಪ್ರಧಾನಿ ಮೋದಿಗೆ ಟಾಂಗ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next