ಮದ್ದೂರು: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷ ಹಾಗೂ ಪ್ರಾಮಾಣಿಕ ಆಡಳಿತ ನೀಡುತ್ತಿರುವುದರಿಂದ ಮತ್ತೂಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಸೋಮನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರ ಅಧಿಕಾರದ ಅವಧಿಯಲ್ಲಿ ಹಲವಾರು ಮಹತ್ತರವಾದ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಶಕ್ತಿ ಶಾಲಿ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಜತೆಗೆ ದೇಶದ ಜನತೆ ಒಬ್ಬ ಉತ್ತಮ ದಕ್ಷ ನಾಯಕತ್ವವನ್ನು ಮೋದಿಗೆ ನೀಡಿದ್ದಾರೆಂದು ಬಣ್ಣಿಸಿದರು.
ದೇಶದೆಲ್ಲೆಡೆ ಪ್ರಾದೇಶಿಕ ಪಕ್ಷಗಳು ಮಹಾಘಟ್ ಬಂದ್ ಮುಂದಾಗಿರುವ ಬಗ್ಗೆ ಮಾತನಾಡಿದ ಅವರು ಮಹಾಘಟ್ ಬಂದ್ ನಿಂದಾಗಿ ಪಕ್ಷಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವುದೇ ಹಿನ್ನೆಡೆಯಾಗುವುದಿಲ್ಲ. ಘಟ್ಬಂದ್‌ನಲ್ಲಿರುವ ನಾಯಕರು ಆಯಾ ರಾಜ್ಯಕ್ಕೆ ಸೀಮಿತವಾಗಿದ್ದಾರೆ ಅಷ್ಟೇ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ದೇಶದೆಲ್ಲೆಡೆ ಪ್ರಭಾವ ಬೀರುವ ಜತೆಗೆ ರಾಜ್ಯಗಳಲ್ಲಿಯೂ ಮೋದಿ ಅವರ ಪ್ರಭಾವ ಮತ್ತಷ್ಟು ಬಲಿಷ್ಠವಾಗಿದ್ದು 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರು ಮತ್ತೂಮ್ಮೆ ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಸೋಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮ ಸಂಬಂಧಿ ಶಿವಲಿಂಗಯ್ಯ ನಿಧನರಾದ ಹಿನ್ನೆಲೆಯಲ್ಲಿ ಅಂತಿಮ ದರ್ಶನ ಪಡೆದರಲ್ಲದೇ ಸಹೋದರ, ಮಾಜಿ ಶಾಸಕ ಎಸ್.ಎಂ. ಶಂಕರ್ ಅವರ ಆರೋಗ್ಯ ವಿಚಾರಿಸಿದರು.
ಜಿಪಂ ಮಾಜಿ ಅಧ್ಯಕ್ಷ ಎಸ್. ಗುರುಚರಣ್, ತಾಪಂ ಮಾಜಿ ಅಧ್ಯಕ್ಷ ಪಿ.ಸಂದರ್ಶ, ಮುಖಂಡರಾದ ಮಧು, ರಾಘವ, ಸತ್ಯಾನಂದ ಇದ್ದರು.