ಕೊಂಚಾಡಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವತ್ಛ ಜನಪರ ಆಡಳಿತ ಹಾಗೂ ಈ ಹಿಂದಿನ ಯುಪಿಎ ಸರಕಾರ
ಮತ್ತು ರಾಜ್ಯದ ಸಮ್ಮಿಶ್ರ ಸರಕಾರದ ದುರಾಡಳಿತವನ್ನು ತುಲನೆ ಮಾಡಿ ಈ ಬಾರಿ ಮತ್ತೂಮ್ಮೆ ಮೋದಿಯನ್ನು ಜನರು ಆರಿಸ ಬಯಸಿದ್ದಾರೆ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಹೇಳಿದರು.
ಕೊಂಚಾಡಿಯಲ್ಲಿ ಬಿಜೆಪಿ ಆಯೋಜಿಸಿದ್ದ ರೋಡ್ ಶೋ ಮತ್ತು ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರಕಾರವೂ ಕೂಡ ನೇರವಾಗಿ ಜನತೆಗೆ ಸೌಲಭ್ಯಗಳನ್ನು ಕಲ್ಪಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂದು ಉಜ್ವಲದಂಥ ಯೋಜನೆ ಮನೆ ಮನೆಗೆ ಮುಟ್ಟಿದೆ.
ಸೂರಿಲ್ಲದವರಿಗೆ ಸೂರು ಒದಗಿಸಲಾಗಿದೆ. ಸ್ವೋದ್ಯೋಗಕ್ಕಾಗಿ, ಕಿರು ಉದ್ಯಮ ಸ್ಥಾಪನೆ ಸಹಿತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಜನತೆ ಕಂಡಿದ್ದಾರೆ. ಹೀಗಾಗಿ ಈ ಬಾರಿ ನಳಿನ್ ಕುಮಾರ್ ಕಟೀಲು ಎರಡು ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಮಾತನಾಡಿ, ಪ್ರಚಾರದ ವೇಳೆ ಎಲ್ಲೆಡೆ ಮೋದಿ ಸರಕಾರದ ಆಡಳಿತ ಬಗ್ಗೆ
ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜನರ ಒಲವು ಬಿಜೆಪಿ ಪರ ಇದೆ. ಮೋದಿ ಬಂದರೆ ದೇಶ ಸುರಕ್ಷತೆಯಿಂದ ಇರುತ್ತದೆ ಎಂಬ ಭಾವನೆ ಜನರಲ್ಲಿದೆ. ಹೀಗಾಗಿ ಮತ್ತೂಮ್ಮೆ ಬಿಜೆಪಿ ಆಡಳಿತ ನಡೆಸಲಿದೆ ಎಂದರು.
ಬಿಜೆಪಿ ಮುಖಂಡರಾದ ಮಾಜಿ ಸಚಿವ ನಾಗರಾಜ ಶೆಟ್ಟಿ, ಮೋನಪ್ಪ ಭಂಡಾರಿ, ಮಾಜಿ ಉಪಸಭಾಪತಿ ಯೋಗೀಶ್ ಭಟ್, ಮಾಜಿ ಮೇಯರ್ ಶಂಕರ ಭಟ್, ರಾಜೇಶ್, ಸು ಧೀರ್ ಶೆಟ್ಟಿ ಕಣ್ಣೂರು, ಸೂರಜ್ ಕಲ್ಯ, ಕೊರಗಪ್ಪ, ಸೂರ್ಯ ನಾರಾಯಣ ರಾವ್, ನಾರಾಯಣ್ ಭಟ್, ನಂದ ಕಿಶೋರ್, ಭಾಸ್ಕರ ಸಾಲ್ಯಾನ್ ಪಾಲ್ಗೊಂಡಿದ್ದರು.