Advertisement

ದೇಶದ ಉಳಿವಿಗೆ ಮೋದಿ ಸರಕಾರ ಅಗತ್ಯ: ಕಟೀಲು

12:19 AM Apr 17, 2019 | Team Udayavani |

ಸುಳ್ಯ: ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್‌ ಕಟೀಲು ಅವರು ಸುಳ್ಯದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು. ನಗರದ ಜ್ಯೋತಿ ವೃತ್ತದಿಂದ ಆರಂಭಗೊಂಡ ರೋಡ್‌ ಶೋದಲ್ಲಿ ಅಭ್ಯರ್ಥಿ ನಳಿನ್‌ಕುಮಾರ್‌ ಕಟೀಲು ಮತ್ತು ಬಿಜೆಪಿ ನಾಯಕರು, ನೂರಾರು ಮಹಿಳೆಯರು, ಕಾರ್ಯಕರ್ತರು ಭಾಗವಹಿಸಿದರು. ಮುಖ್ಯ ರಸ್ಥೆಯಲ್ಲಿ ಸಾಗಿದ ಮೆರವಣಿಗೆ ಶ್ರೀರಾಂಪೇಟೆ, ಬಸ್‌ ನಿಲ್ದಾಣದ ಮೂಲಕ ಗಾಂಧಿನಗರದ ತನಕ ತೆರಳಿ, ಮರಳಿ ಬಂದ ಮೇಲೆ ಬಸ್‌ ನಿಲ್ದಾಣದ ಬಳಿಯಲ್ಲಿ ಸಮಾವೇಶಗೊಂಡಿತು.

Advertisement

ಗಮನ ಸೆಳೆದ ಕೇಸರಿ ಪೇಟ
ಅಭ್ಯರ್ಥಿ ನಳಿನ್‌ಕುಮಾರ್‌ ಕಟೀಲು, ಶಾಸಕ ಎಸ್‌. ಅಂಗಾರ ಸಹಿತ ಹಲವರು ಕೇಸರಿ ಪೇಟ ಧರಿಸಿ ಗಮನ ಸೆಳೆದರು. ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ನಳಿನ್‌ ಕುಮಾರ್‌ ಕಟೀಲು, ದೇಶದ ಸುಭದ್ರತೆಗಾಗಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತೂಮ್ಮೆ ಅಧಿಕಾರಕ್ಕೆ ಬರಬೇಕಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕಾಶ್ಮೀರ ಭಾರತದ ಭಾಗವಾಗಿಯೇ ಉಳಿಯಲು, ಏಕರೂಪ ನಾಗರಿಕ ಸಂಹಿತೆ ಜಾರಿ, ಪಾಕಿಸ್ಥಾನಕ್ಕೆ ತಕ್ಕ ಉತ್ತರ ನೀಡಲು ಹಾಗೂ ದೇಶ ಅಭಿವೃದ್ಧಿಯೆಡೆಗೆ ಸಾಗಲು ನರೇಂದ್ರ ಮೋದಿ ಅವರಂತಹ ವಿಶ್ವ ನಾಯಕ ದೇಶದ ಪ್ರಧಾನಿ ಆಗಬೇಕಿದೆ. ಆ ನಂಬಿಕೆ ಜನರಲ್ಲೂ ಇದೆ. ಮತ್ತೂಮ್ಮೆ ಮೋದಿ ಎಂದು ಜನರೇ ಹೇಳುತ್ತಿದ್ದಾರೆ ಎಂದರು.

ಭ್ರಷ್ಟಾಚಾರ ರಹಿತ ಆಡಳಿತ
ಹತ್ತು ವರ್ಷದಲ್ಲಿ ಸಂಸದನಾಗಿ ಆದರ್ಶ ಮತ್ತು ಭ್ರಷ್ಟಾಚಾರ ರಹಿತ ರಾಜಕಾರಣ ಮಾಡಿದ್ದೇನೆ. ಜಿಲ್ಲೆಯ, ನೆಲ, ಜಲ, ಸಂಸ್ಕೃತಿಯ ಉಳಿವಿಗೆ ಹೋರಾಟ ನಡೆಸಿದ್ದೇನೆ. ಐದು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ 16,520 ಕೋಟಿ ಅನುದಾನ ತರಿಸಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯದ ನಂ. ವನ್‌ ಜಿಲ್ಲೆಯನ್ನಾಗಿ ಮಾಡಲು ಮತ್ತೂಮ್ಮೆ ಜನತೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.

ಶಾಸಕ ಎಸ್‌. ಅಂಗಾರ ಮಾತನಾಡಿ, 60 ವರ್ಷಗಳ ಆಡಳಿತದಲ್ಲಿ ಏನೂ ಮಾಡದ ಕಾಂಗ್ರೆಸಿಗರು ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ. ಟೀಕೆ ಮಾಡುವುದಷ್ಟೇ ಅವರ ಕೆಲಸವಾಗಿದೆ. ಮರಳಿನ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರಕಾರದಿಂದ ಸಾಧ್ಯವಾಗಿಲ್ಲ. ಕಾಂಗ್ರೆಸ್‌ ನಾಯಕರ ಕುಮ್ಮಕ್ಕಿನಿಂದಲೇ ಜನ ಸಾಮಾನ್ಯರಿಗೆ ಮರಳಿನ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್‌ ವಳಲಂಬೆ ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರು, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ. ಸದಸ್ಯರಾದ ಹರೀಶ್‌ ಕಂಜಿಪಿಲಿ, ಎಸ್‌.ಎನ್‌. ಮನ್ಮಥ, ಪುಷ್ಪಾವತಿ ಬಾಳಿಲ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್‌ ಹೆಗ್ಡೆ, ಸುಬೋಧ್‌ ಶೆಟ್ಟಿ ಮೇನಾಲ, ವೆಂಕಟ್‌ ದಂಬೆಕೋಡಿ, ಭಾಗೀರಥಿ ಮುರುಳ್ಯ ಉಪಸ್ಥಿತರಿದ್ದರು.

Advertisement

ಬಿಜೆಪಿ ನಗರಾಧ್ಯಕ್ಷ ವಿನಯಕುಮಾರ್‌ ಕಂದಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next