Advertisement

ನಾಳೆ ಪ್ರಧಾನಿ ಮೋದಿ ರಣಕಹಳೆ

11:56 AM Apr 17, 2019 | pallavi |

ಬಾಗಲಕೋಟೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯ 16 ವಿಧಾನಸಭೆ ಕ್ಷೇತ್ರಗಳ 2 ಲಕ್ಷ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಬಿಜೆಪಿ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ, ಬಾಗಲಕೋಟೆ ಕ್ಷೇತ್ರದ ಚುನಾವಣೆ ಸಂಚಾಲಕ ಡಾ|ವೀರಣ್ಣ ಚರಂತಿಮಠ ಹೇಳಿದರು.

Advertisement

ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ರೋಟರಿ ವೃತ್ತದ ಬಳಿ ಸಮಾವೇಶಕ್ಕೆ ಎಲ್ಲ ಸಿದ್ಧತೆ ನಡೆದಿದೆ. 75 ಸಾವಿರ ಜನ ಕುಳಿತುಕೊಳ್ಳುವ ಕುರ್ಚಿ ವ್ಯವಸ್ಥೆ ಮಾಡಿದ್ದು, 1.25 ಲಕ್ಷ ಜನರು ನಿಂತುಕೊಂಡು ಸಮಾವೇಶ ವೀಕ್ಷಣೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ವಿಜಯಪುರ ಜಿಲ್ಲೆಯ 8 ಹಾಗೂ ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಒಟ್ಟು 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಕಳೆದ 2014ರ ಲೋಕಸಭೆ ಚುನಾವಣೆ ವೇಳೆ ಇದೇ ಸ್ಥಳದಲ್ಲಿ ಸಮಾವೇಶ ನಡೆಸಿದ್ದರು. ಆಗ ಪ್ರಧಾನಿ ಅಭ್ಯರ್ಥಿಯಾಗಿ ಅವರು ಜಿಲ್ಲೆಗೆ ಬಂದಿದ್ದರು. ಈಗ ಪ್ರಧಾನಿಯಾಗಿ ಬರುತ್ತಿದ್ದಾರೆ. 60/40 ಅಳತೆಯ ವೇದಿಕೆ ಸಿದ್ಧಪಡಿಸಲಾಗಿದೆ.

ಅಲ್ಲದೇ ಸಮಾವೇಶಕ್ಕೆ ಬರುವ ಜನರಿಗಾಗಿ 2 ಲಕ್ಷ ಕುಡಿಯುವ ನೀರಿನ ಪ್ಯಾಕೇಟ್‌, 8 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಒದಗಿಸಲಾಗುವುದು. ಸಾರ್ವಜನಿಕರು ಕುಡಿಯುವ ನೀರಿನ ಬಾಟಲ್‌ ಅಥವಾ ಕ್ಯಾಮೆರಾ ಸೇರಿದಂತೆ ಬೇರೆ ಬೇರೆ ವಸ್ತುಗಳನ್ನು ತರಬಾರದು ಎಂದು ಹೇಳಿದರು.

ನಗರದ ಸಿಮೆಂಟ್‌ ಕಾರ್ಖಾನೆ ಆವರಣ, ಸಕ್ರಿ ಕಾಲೇಜು ಆವರಣ, ಅಮರ್‌ ಪ್ರೌಢಶಾಲೆ ಆವರಣ, ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಆವರಣ ಹೀಗೆ ಒಟ್ಟು ನಾಲ್ಕು ಕಡೆ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಸಮಾವೇಶ ಮಧ್ಯಾಹ್ನ 2ಕ್ಕೆ ಆರಂಭಗೊಳ್ಳಲಿದೆ. ಪ್ರಧಾನಿ ಮೋದಿ ಬರಲಿರುವ ಹಿನ್ನೆಲೆಯಲ್ಲಿ 3 ಪ್ರತ್ಯೇಕ ಹೆಲಿಪ್ಯಾಡ್‌ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.

Advertisement

ಸಮಾವೇಶಕ್ಕೆ 2 ಸಾವಿರ ವಿವಿಐಪಿ, 4 ಸಾವಿರ ವಿಐಪಿ ಪಾಸ್‌ ನೀಡಲಾಗುತ್ತಿದೆ. ಅಲ್ಲದೇ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಚುನಾವಣೆ ಪ್ರಚಾರಾರ್ಥ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೂಡ ಏ. 21ರಂದು ಜಿಲ್ಲೆಗೆ ಬರಬೇಕಿತ್ತು. ಆದರೆ, ಅನಿವಾರ್ಯ
ಕಾರಣಗಳಿಂದ ಅವರ ಪ್ರವಾಸ ರದ್ದಾಗಿದೆ. ಏ. 18ರಂದು ಮೋದಿ ಅವರ ಜತೆಗೆ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕೂಡ ಬರಲಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಪಿ.ಎಚ್‌. ಪೂಜಾರ, ಬಸವೇಶ್ವರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ನಗರ ಘಟಕದ ಅಧ್ಯಕ್ಷ ರಾಜು ನಾಯ್ಕರ, ಜಿಲ್ಲಾ ವಕ್ತಾರ ಜಯಂತ ಕುರಂದವಾಡ, ಪ್ರಮುಖರಾದ ಅಶೋಕ ಲಿಂಬಾವಳಿ, ಯಲ್ಲಪ್ಪ ಬೆಂಡಿಗೇರಿ, ಶರಣಪ್ಪ ಗುಳೇದ, ಸಿ.ವಿ. ಕೋಟಿ ಉಪಸ್ಥಿತರಿದ್ದರು.

ಬಾಗಲಕೋಟೆಗೆ ಅವಕಾಶ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ಮೋದಿ 7 ಕಡೆ ಮಾತ್ರ ಸಮಾವೇಶ ನಡೆಸುತ್ತಿದ್ದಾರೆ. ಅದರಲ್ಲಿ ಬಾಗಲಕೋಟೆಗೆ ಈ ಅವಕಾಶ ಸಿಕ್ಕಿದೆ. ಅವಳಿ ಜಿಲ್ಲೆಯ ಜನರು, ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಬೆಳ್ಳಿಯ ಬಿಲ್ಲು-ಬಾಣ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಆಗಮಿಸುತ್ತಿದ್ದು, ಜಿಲ್ಲೆಯ ಪರವಾಗಿ ಅವರಿಗೆ ಬೆಳ್ಳಿಯ ಬಿಲ್ಲು ಹಾಗೂ ಬಾಣ ನೀಡಿ ಸನ್ಮಾನಿಸಲು ತಯಾರಿ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next