ಇಂಡಿ: ಭವ್ಯ ಭಾರತ ನಿರ್ಮಾಣಕ್ಕೆ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಸಾಕಷ್ಟು ಕೊಡುಗೆ ನೀಡಿದೆ ಎಂದು ಬಿಜೆಪಿ ಯುವ ಮೊರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಕುಂಬಾರ ಹೇಳಿದರು. ಪಟ್ಟಣದ ಬಾಬು ಜಗಜೀವನರಾಮ ಭವನದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಮೋದಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ನಂತರ 370ನೇ ವಿಧಿ ರದ್ದುಗೊಳಿಸುವುದು, ಎಪಿಎಂಸಿ ಕಾಯ್ದೆ, ಸಿಎಎ ಕಾಯ್ದೆ, ತ್ರೀವಳಿ ತಲಾಖ್, ಫಸಲ್ ಭೀಮಾ ಯೋಜನೆ, ಪಿಎಂ. ಕನ್ಯಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ರಾಜ್ಯದಿಂದ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಎಸ್ ಸಿ-ಎಸ್‌ಟಿ ಸಮುದಾಯದ ಬಡ ಜನರಿಗೆ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂ. ಸಹಾಯಧನ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಎಲ್ಲ ಯೋಜನೆಗಳ ಬಗ್ಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬೂತ್ ಮಟ್ಟದ ಪ್ರತಿ ಮನೆ-ಮನೆಗೆ ತೆರಳಿ ಜನರಿಗೆ ಪಕ್ಷ ಮಾಡಿದ ಸಾಧನೆ, ಬಡ ಜನರ ಅಭ್ಯುದಯಕ್ಕಾಗಿಯೇ ಪಕ್ಷ ಜಾರಿಗೆ ತಂದ ಯೋಜನೆಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಿ ಮುಂಬರುವ ತಾಪಂ ಹಾಗೂ ಜಿಪಂಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಜ್ಜಾಗಬೇಕೆಂದರು. ಬಿಜೆಪಿ ಯುವ ಮೊರ್ಚಾ ತಾಲೂಕಾಧ್ಯಕ್ಷ ಅನಿಲಗೌಡ ಬಿರಾದಾರ ಪ್ರಾಸ್ತಾವಿಕ ಮಾತನಾಡಿ, ಇಂದು ವಿಶ್ವವೇ ಮೆಚ್ಚುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಆಡಳಿತ ನೀಡಿದ್ದಾರೆ.
ಕೋವಿಡ್ ಸಂಕಷ್ಟ ಸಮಯದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುವ ಪರಿಸ್ಥಿತಿ ಎದುರಾದರೂ ಮೊದಲು ದೇಶದ ಪ್ರಜೆಗಳ ಜೀವವೇ ಮುಖ್ಯ ಎಂದು ದೇಶಾದ್ಯಂತ ಕಠಿಣ ಲಾಕ್‌ಡೌನ್ ಮಾಡಿ ಜನರು ಬದುಕಲು ಕಾರಣೀಕರ್ತರಾದರು ಎಂದರು. ಇಂದು ಬಿಜೆಪಿಗೆ ನೂರಾರು ಕೋಟಿ ಕಾರ್ಯಕರ್ತರಿದ್ದಾರೆ. ಅದರಲ್ಲಿ ಹೆಚ್ಚಿ ಸಂಖ್ಯೆಯಲ್ಲಿ ಯುವಕರಿದ್ದಾರೆ. ಹೀಗಾಗಿ ಈ ಬಾರಿ ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಪಕ್ಷದಿಂದ ಯುವಕರಿಗೆ ಆದ್ಯತೆ ನೀಡಿ ಟಿಕೆಟ್ ನೀಡಲು ವರಿಷ್ಠರಲ್ಲಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ ಅವರು, ಯುವ ಕಾರ್ಯಕರ್ತರು ಪಕ್ಷದ ತತ್ವ,ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಸಗಾಯಿ, ಪ್ರಧಾನ ಕಾರ್ಯದರ್ಶಿ ಕಾಂತು ಸಿಂಧೆ, ಸಿದ್ದಲಿಂಗ ಹಂಜಗಿ, ಮಲ್ಲಿಕಾರ್ಜುನ ಕಿವಡೆ, ಕಾಸುಗೌಡ ಬಿರಾದಾರ, ಅನಿಲ ಜಮಾದಾರ, ಶೀಲವಂತ ಉಮರಾಣಿ, ರಾಘವೇಂದ್ರ ಕಾಪ್ಸೆ, ಕಾಂತು ಸಿಂಧೆ, ಪ್ರವೀಣ ಮಠ, ಪ್ರಸಾದ ಮಠ, ರಾಚು ಬಡಿಗೇರ, ಮಲ್ಲನಗೌಡ ಬಿರಾದಾರ, ದೇವೇಂದ್ರ ಕುಂಬಾರ, ಸಚಿನ ಬೊಳೆಗಾಂವ, ವಿಜು ಮೂರಮನ, ತಿಪ್ಪಣ್ಣ ಉಟಗಿ, ಅನಸೂಯಾ ಮದರಿ ಇದ್ದರು.