Advertisement

ಸಿದ್ದು 7 ಕೆರೆ ನೀರು ಕುಡಿದಿರೋ ನಾಯಕ: ಮೋದಿ ವ್ಯಂಗ್ಯ

11:57 AM May 04, 2018 | |

ಬಳ್ಳಾರಿ: ಸಿಎಂ ಸಿದ್ದರಾಮಯ್ಯ 7 ಕೆರೆ ನೀರು ಕುಡಿದಿರೋ ನಾಯಕ. ಅಧಿಕಾರಕ್ಕಾಗಿ ಯಾವ ಪಕ್ಷಕ್ಕಾದ್ರೂ ಹೋಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ವ್ಯಂಗ್ಯವಾಡಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಹಿಂದೆ ಲೋಕದಳ, ಜನತಾದಳ ಸೇರಿದಂತೆ ಹಲವು ಪಕ್ಷಗಳಲ್ಲಿ ರಾಜಕೀಯ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಅಧಿಕಾರಕ್ಕಾಗಿ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ದಲಿತ ಮುಖ್ಯಮಂತ್ರಿ ಹೆಸರಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ಸಂಸದ ಮಲ್ಲಿಕಾರ್ಜುನ ಖರ್ಗೆಯವರಿಗೆ ಮೋಸ ಮಾಡಿದರು. ಗುಪ್ತ ಮತದಾನದ ಹೆಸರಲ್ಲಿ ಅವರನ್ನು ಹೊರಗೆ ಕಳುಹಿಸಿದರು. ಮಾಜಿ ಮುಖ್ಯಮಂತ್ರಿ ದಿ. ನಿಜಲಿಂಗಪ್ಪ ಅವರಿಗೂ ಮಾಡಿದ್ದ ಮೋಸವನ್ನು ರಾಜ್ಯದ ಜನರಿಗೆ ಗೊತ್ತಿದೆ ಎಂದ ಅವರು, ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರು ಮತ್ತು ದಲಿತರ ಹೆಸರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಮೋದಿಯವರು ಹಿಂದುಳಿದ ವರ್ಗ ಕಳೆದ 35 ವರ್ಷಗಳಿಂದ ಮೀಸಲಾತಿ ಸೌಲಭ್ಯ ಕೇಳುತ್ತಿದೆ. ಅವರ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಸಹ ಮುಂದಾಗಿದ್ದು, ಈ ಕುರಿತ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದಾಗ ಕಾಂಗ್ರೆಸ್‌ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದರು.

ಕಾಂಗ್ರೆಸ್‌ನಿಂದ ಜಿಲ್ಲೆಗೆ ಅವಮಾನ: ಬಳ್ಳಾರಿ ಜಿಲ್ಲೆಯ ಇತಿಹಾಸ ಗೌರವದಿಂದ ಕೂಡಿದೆ. ಇದೊಂದು ಮಾದರಿ ಕ್ಷೇತ್ರವೆಂದು ಇಲ್ಲಿನ ರಾಜಕೀಯ ಕಣ ಹೇಳುತ್ತದೆ. ಇಲ್ಲಿನ ಇತಿಹಾಸ ಪ್ರಸಿದ್ಧವಾದ ಹಂಪಿಯ ಕಲ್ಲಿನರಥವನ್ನು 50 ರೂ. ನೋಟಿನ ಮೇಲೆ ಮುದ್ರಿಸಿ ಕೇಂದ್ರ ಸರ್ಕಾರ ಗೌರವ ನೀಡಿದೆ. ಇಲ್ಲಿನ ಇತಿಹಾಸವನ್ನು ಜಗತ್ತಿಗೆ ಪರಿಚಯಿಸಿದೆ. ಆದರೆ, ಕಾಂಗ್ರೆಸ್‌ ಸರ್ಕಾರ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಬದಲಾವಣೆ ಮಾಡಲು ಯತ್ನಿಸುತ್ತಿದೆ. ಬಳ್ಳಾರಿಯ ಜನರನ್ನು ಕಳ್ಳರು, ಸುಳ್ಳರೆಂದು  ಬಿಸಲಾಗುತ್ತಿದೆ.

ಈ ಮೂಲಕ ಬಳ್ಳಾರಿಯ ಇತಿಹಾಸವನ್ನು ತಿರುಚಿ, ಬಳ್ಳಾರಿಗೆ ಅವಮಾನ ಮಾಡುತ್ತಿದೆ. ಅಂತಹ ಪಕ್ಷಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಕರೆ ನೀಡಿದರು.

ಕಾಂಗ್ರೆಸ್‌ನವರು ಪದೇ ಪದೇ ಬಿಜೆಪಿ ಪಕ್ಷವನ್ನು ಬ್ರಾಹ್ಮಣರ ಪಕ್ಷ ಎಂದು ದೂಷಿಸುತ್ತಾರೆ. ಆದರೆ, ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಮುಸ್ಲಿಂ ಸಮುದಾಯದ ಅಬ್ದುಲ್‌ ಕಲಾಂ ಅವರನ್ನು ದೇಶದ ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿತು. ಈ ಬಾರಿ ಅಧಿಕಾರಕ್ಕೆ ಬಂದಾಕ್ಷಣ ದಲಿತರನ್ನು ರಾಷ್ಟ್ರಪತಿ ಹುದ್ದೆಗೆ ನೇಮಿಸಿತು. ಹಿಂದುಳಿದ ವರ್ಗದ ಚಾಯ್‌ ಮಾರುವವನನ್ನು ದೇಶದ ಪ್ರಧಾನಿಯನ್ನಾಗಿ ಮಾಡಿತು. ಇಷ್ಟು ಮಾತ್ರವಲ್ಲದೇ, ಬಿಜೆಪಿಯನ್ನು ಉತ್ತರ ಭಾರತದ ಪಕ್ಷ ಎಂದು ಆರೋಪಿಸುತ್ತಾರೆ. 

Advertisement

ಆದರೆ, ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ವೆಂಕಯ್ಯನಾಯ್ಡು ಅವರನ್ನು ಉಪರಾಷ್ಟ್ರಪತಿಯನ್ನಾಗಿ ಮಾಡಲಾಯಿತು. ದಕ್ಷಿಣ ಭಾರತದ ನಿರ್ಮಲಾ ಸೀತರಾಮನ್‌ ಅವರನ್ನು ದೇಶದ ಮೊದಲ ರಕ್ಷಣಾ ಸಚಿವೆಯನ್ನಾಗಿ ನೇಮಿಸಲಾಯಿತು ಎಂದು ಸಮರ್ಥಿಸಿಕೊಂಡರು. ನಿದ್ದೆಯಲ್ಲಿರುವ ಸೋಮಾರಿ ಸರ್ಕಾರ ಅತ್ಯಂತ ಹೇರಳವಾಗಿ ನೈಸರ್ಗಿಕ ಸಂಪತ್ತು ಹೊಂದಿರುವ ಬಳ್ಳಾರಿ ಜಿಲ್ಲೆಯಲ್ಲಿ ಕಾನೂನಿನಲ್ಲಿ ಬದಲಾವಣೆಯಿಂದ ತೆರಿಗೆ ರೂಪದಲ್ಲಿ ಬಂದ ಹಣವನ್ನು ಡಿಸ್ಟ್ರಿಕ್‌ ಮಿರನಲ್‌ ಫಂಡ್‌ ಹೆಸರಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಇದಕ್ಕಾಗಿ ಕೇಂದ್ರದಿಂದ 900 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಿದರೆ, ಸದಾ ನಿದ್ದೆ ಮಾಡುವ ಸಿದ್ದರಾಮಯ್ಯ, ನಿದ್ದೆಯಲ್ಲಿರುವ ಸೋಮಾರಿ ಸರ್ಕಾರ ಕೇವಲ 37 ಲಕ್ಷ ರೂ. ಮಾತ್ರ ಖರ್ಚು ಮಾಡಿದೆ. ಈ ಹಣದಲ್ಲಿ ಸ್ವಲ್ಪವನ್ನು ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆಗೆಯಲು ಬಳಸಿದ್ದರೆ ರೈತರ ನೀರಾವರಿ ಮತ್ತು ಕುಡಿಯಲು ಸಮರ್ಪಕ ನೀರು ಒದಗಿಸಬಹುದು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಸಿಎಂ ಆದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡಲಿದ್ದಾರೆ ಎಂದರು.

 ಕೊನೆಯಲ್ಲಿ ಪುನಃ ಕನ್ನಡದಲ್ಲಿ ಮಾತನಾಡಿದ ಮೋದಿ, ಸ್ವತ್ಛ, ಸುಂದರ, ಸುರಕ್ಷಿತವಾದ ಕರ್ನಾಟಕವನ್ನು ನಿರ್ಮಿಸೋಣ. ಬನ್ನಿ ಎಲ್ಲರೂ ಕೈಜೋಡಿಸಿ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ’ ಎಂದು ನಾಲ್ಕೈದು ಬಾರಿ ಹೇಳುವ ಮೂಲಕ ನೆರೆದಿದ್ದ ಪ್ರೇಕ್ಷಕರ ಉತ್ಸಾಹವನ್ನು ಮತ್ತಷ್ಟು ಇಮ್ಮಡಿಗೊಳಿಸಿದರು.
 
ಜೀನ್ಸ್‌ ಉದ್ಯಮಕ್ಕೆ ಉತ್ತೇಜನ ಜಿಲ್ಲೆಯಲ್ಲಿ ಜೀನ್ಸ್‌ ಉದ್ಯಮ ಸಾಕಷ್ಟು ವಿಸ್ತಾರಗೊಂಡಿದೆ. ಆದರೆ, ಈ ಜೀನ್ಸ್‌ ಉದ್ಯಮವನ್ನು ಅಭಿವೃದ್ಧಿ ಪಡಿಸುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಬಿಜೆಪಿ ಸರ್ಕಾರ ಈ ಉದ್ಯಮ ಅಭಿವೃದ್ಧಿಗೆ ಹೊಸ ನೀತಿ ನಿಯಮ ರೂಪಿಸಲಿದ್ದು, ಇದಕ್ಕಾಗಿ 6 ಸಾವಿರ ಕೋಟಿ ರೂ. ವೆಚ್ಚದ ಹೊಸ ಯೋಜನೆಯನ್ನು ಉದ್ಯಮಿಗಳ ಮುಂದೆ ಇಡಲಿದೆ ಎಂದ ನರೇಂದ್ರ ಮೋದಿ, ಬಳ್ಳಾರಿ
ವಿಕಾಸವಾದರೆ ಕರ್ನಾಟಕ ವಿಕಾಸವಾಗುತ್ತದೆ. ರಾಜ್ಯ ವಿಕಾಸವಾದರೆ ಭಾರತ ವಿಕಾಸವಾಗುತ್ತದೆ. ವಿಕಾಸ ಅಂದರೆ ಅಭಿವೃದ್ಧಿ. ಇದೆಲ್ಲ ಆಗಬೇಕಾದರೆ ಬಿಜೆಪಿಗೆ ಕೈಜೋಡಿಸಿ, ಪ್ರತಿಯೊಬ್ಬ ಮತದಾರರು ಕಮಲಕ್ಕೆ ಮತದಾನ ಮಾಡಬೇಕು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next