ಬಲ್ಲಿಯಾ, ಉತ್ತರ ಪ್ರದೇಶ : ‘ದೇಶದ ಪ್ರಧಾನಿಯಾಗಿ ಕಳೆದ ಐದು ವರ್ಷ ಕರ್ತವ್ಯ ನಿರ್ವಹಿಸಿರುವ ನಾನು ವೈಯಕ್ತಿಕವಾಗಿ ಸಂಪತ್ತು ಕೂಡಿ ಹಾಕಿದ್ದರೆ, ವಿದೇಶೀ ಬ್ಯಾಂಕುಗಳಲ್ಲಿ ಹಣ ಇಟ್ಟಿದ್ದರೆ ಸಾಬೀತು ಪಡಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳಿಗೆ ಇಂದು ಬಹಿರಂಗ ಸವಾಲು ಹಾಕಿದರು.
ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೇ ಹಂತದ ಚುನಾವಣೆ ಪ್ರಚಾರ ಕೊನೆಗೊಳ್ಳುವ ಒಂದು ದಿನ ಮೊದಲು ಪೂರ್ವ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ ಪ್ರಧಾನಿ ಮೋದಿ ವಿಪಕ್ಷೀಯರಿಗೆ ಈ ಸವಾಲನ್ನು ಒಡ್ಡಿದರು.
“ನಾನು ಮಹಾಮಿಲಾವಟೀ ಜನರಿಗೆ ಬಹಿರಂಗ ಸವಾಲು ಹಾಕುತ್ತೇನೆ; ನನ್ನ ವಿರುದ್ದ ವ್ಯರ್ಥ ಗೇಲಿ, ವ್ಯಂಗ್ಯದ ಮಾತುಗಳನ್ನು ಆಡುವ ಬದಲು ನಾನು ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯಾಗಿರುತ್ತಾ ಅಕ್ರಮ ಬೇನಾಮಿ ಸಂಪತ್ತನ್ನು ಕಲೆ ಹಾಕಿದ್ದೇನಾ; ವಿದೇಶೀ ಬ್ಯಾಂಕುಗಳಲ್ಲಿ ಹಣ ಇರಿಸಿದ್ದೇನಾ ಎಂಬುದನ್ನು ಸಾಬೀತು ಪಡಿಸಿ’ ಎಂದು ಹೇಳಿದರು.
“ನಾನೆಂದೂ ಶ್ರೀಮಂತನಾಗುವ ಕನಸನ್ನು ಕಂಡಿಲ್ಲ; ಜನರ ಹಣವನ್ನು ಲೂಟಿ ಮಾಡುವ ಪಾಪ ಎಸಗಿಲ್ಲ; ಯಾವುದೇ ಬೇನಾಮಿ ಆಸ್ತಿಪಾಸ್ತಿ ಸಂಗ್ರಹಿಸಿಲ್ಲ; ಯಾವುದೇ ಫಾರ್ಮ್ ಹೌಸ್, ಬಂಗಲೆ, ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿಲ್ಲ, ವಿದೇಶೀ ಬ್ಯಾಂಕಲ್ಲಿ ಠೇವಣಿ ಇಟ್ಟಿಲ್ಲ. ಜನರ ಕಲ್ಯಾಣವೇ ನಮ್ಮ ಸರಕಾರದ ಅತ್ಯುನ್ನತ ಆದ್ಯತೆ; ಹಾಗೆಯೇ ದೇಶದ ಭದ್ರತೆ, ಘನತೆ, ಗೌರವವನ್ನು ಕಾಪಿಡುವುದೇ ಮೊದಲ ಆದ್ಯತೆ’ ಎಂದು ಪ್ರಧಾನಿ ಮೋದಿ ಹೇಳಿದರು.
“ನಮ್ಮ ಈ ಕಠಿನ ಧೋರಣೆಯಿಂದಾಗಿಯೇ ಪಾಕ್ ಮತು ಅದರ ಉಗ್ರರ ದುರಹಂಕಾರ ನಾಶವಾಯಿತು. ಹಿಂದೆ ಪಾಕಿಸ್ಥಾನದಲ್ಲಿ ಶಸ್ತ್ರಾಸ್ತ್ರಗಳನ್ನು ಬಹಿರಂಗವಾಗಿ ಝಳಪಿಸುತ್ತಿದ್ದವರು ಈಗ ಭೂಗತರಾಗಿದ್ದಾರೆ ಮತ್ತು ಮೋದಿಯನ್ನು ಮುಗಿಸುವ ಪ್ರಾರ್ಥನೆ ಮಾಡುತ್ತಿದ್ದಾರೆ; ಕೆಲವೊಮ್ಮೆ ಅರಣ್ಯದತ್ತ, ಕೆಲವೊಮ್ಮೆ ಆಗಸದತ್ತ ಮತ್ತು ಕೆಲವೊಮ್ಮೆ ಸಮುದ್ರದತ್ತ ಅವರು ಮುಖ ಮಾಡುತ್ತಿದ್ದಾರೆ’ ಎಂದು ಮೋದಿ ಹೇಳಿದರು.