ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಮತ್ತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿ ಭೇಟಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಸೋಮವಾರ ರಾತ್ರಿಯಷ್ಟೇ ಬಿ.ಎಸ್.ಯಡಿಯೂರಪ್ಪ ಅವರು ದಿಢೀರ್ ಆಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯಾಗಿದ್ದು, ಬಿಜೆಪಿಯ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸುವ ಸಲುವಾಗಿ ರಾಜಧಾನಿಗೆ ತೆರಳಿದ್ದರು ಎಂದು ಹೇಳಲಾಗಿತ್ತು.
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿ ಬಲವಾಗಿರುವ ಕಡೆಗಳಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿವೆ ಎಂಬ ಮಾಹಿತಿಯನ್ನು ಬಿಎಸ್‌ವೈ ಅವರು ಇಬ್ಬರೂ ನಾಯಕರಿಗೆ ಮುಟ್ಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾರ್ಯತಂತ್ರ ರೂಪಿಸಿಕೊಂಡು ಚುನಾವಣೆ ಎದುರಿಸುವಂತೆ ಮೋದಿ ಮತ್ತು ಶಾ ಅವರು ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೆ, ಇನ್ನೊಂದು ವರ್ಷದಲ್ಲಿ ಲೋಕಸಭೆ ಚುನಾವಣೆಯಿದ್ದು ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬೇಕಾದ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಮಾತುಕತೆ ನಡೆದಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಾವಿಬ್ಬರೂ ಕರ್ನಾಟಕಕ್ಕೆ ಬರಲಿದ್ದೇವೆ ಎಂದು ಮೋದಿ ಮತ್ತು ಶಾ ಬಿಎಸ್‌ವೈಗೆ ಹೇಳಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯದ ಕಡೆಯಿಂದ ಸಮೀಕ್ಷೆ ಮಾಡಿ ತಯಾರು ಮಾಡಿಕೊಳ್ಳಿ, ನಾವು ಕೇಂದ್ರದ ಕಡೆಯಿಂದ ಒಂದು ಸಮೀಕ್ಷೆ ಮಾಡಿಸುತ್ತೇವೆ. ಕಡೆಗೆ ಒಟ್ಟಾಗಿ ಕುಳಿತು ಮಾತುಕತೆ ನಡೆಸಿ ಆಯ್ಕೆ ಮಾಡೋಣ ಎಂದು ಬಿಎಸ್‌ವೈಗೆ ಇಬ್ಬರೂ ನಾಯಕರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ವಾಣಿಜ್ಯ ಸಚಿವರ ಭೇಟಿ: ಈ ಮಧ್ಯೆ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಿರುವ ಬಿಎಸ್‌ವೈ ಅವರು, ಅಡಕೆ ಬೆಳೆಗಾರರ ಬಗ್ಗೆ ಚರ್ಚೆ ನಡೆಸಿದ್ದಾರೆ. ಬೆಳೆಗಾರರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.